
ಉಡುಪಿ, ಆಗಸ್ಟ್ 21: ಬಾಳೆಕಾಯಿಗಳನ್ನು ತ್ವರಿತವಾಗಿ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ (Udupi) ಅಲೆವೂರು ಗ್ರಾಮದ ಹಲವು ಪ್ರದೇಶಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅಲೆವೂರು ಗ್ರಾಮದ ಕೆಮ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಲಿ ಪರಿಸರದಲ್ಲಿರುವ ಬಾಳೆಹಣ್ಣು ವ್ಯಾಪಾರಿಗಳ ಮೂರು ಗೋದಾಮುಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸಿದೆ.
ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲೆ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಂದ ಬಂದ ಮಾಹಿತಿ ಹಾಗೂ ದೂರುಗಳ ಆಧಾರದ ಮೇಲೆ ಈ ತಪಾಸಣೆ ನಡೆಸಲಾಗಿದೆ.
ಬಾಳೆ ಕಾಯಿಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುತ್ತಿದ್ದ ಹಾನಿಕಾರಕ ರಾಸಾಯನಿಕಗಳು ದಾಳಿಯ ವೇಳೆ ಪತ್ತೆಯಾಗಿವೆ. ಇಂಡೋಥ್ರೆಲ್ ಸೇರಿದಂತೆ ರಾಸಾಯನಿಕ ಪದಾರ್ಥಗಳು ಹಾಗೂ ಹಣ್ಣುಗಳಿಗೆ ಕೃತಕ ಬಣ್ಣ ನೀಡಲು ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಸಾಯನಿಕಗಳನ್ನು ಬಳಕೆ ಮಾಡಲು ಬಳಸುತ್ತಿದ್ದ ಪರಿಕರಗಳನ್ನೂ ಪತ್ತೆಹಚ್ಚಲಾಗಿದೆ.
ಒಟ್ಟು 10,890 ಕೆಜಿ ಬಾಳೆಹಣ್ಣುಗಳು ರಾಸಾಯನಿಕ ಬಳಕೆಗೆ ಒಳಗಾಗಿರುವುದು ಪತ್ತೆಯಾಗಿದ್ದು, ಇವುಗಳ ಅಂದಾಜು ಮೌಲ್ಯ 8.71 ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ವಶಪಡಿಸಿಕೊಂಡ ಹಣ್ಣುಗಳನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ನಾಶಪಡಿಸಲಾಗಿದೆ.
ಇದರ ಜೊತೆಗೆ ರಾಸಾಯನಿಕ ಬಳಕೆಗೆ ಸಂಬಂಧಿಸಿದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಾಹನಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.
ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳ ವಿರುದ್ಧ ಆಗಸ್ಟ್ 20ರಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಮೆಗಾ ತಪಾಸಣೆಯಲ್ಲೂ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದವು. ಬೆಂಗಳೂರಿನ ಕೆ.ಆರ್. ಪುರಂ ರೈಲು ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಅನೈರ್ಮಲ್ಯ ಕಂಡುಬಂದಿದ್ದರೆ, ಮೈಸೂರು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿರುವುದು ಹಾಗೂ ಪತ್ರಿಕೆಗಳ ಮೇಲೆ ಕರಿದ ತಿಂಡಿಗಳನ್ನು ಇಟ್ಟು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು.
ಹಾವೇರಿ ರೈಲು ನಿಲ್ದಾಣದಲ್ಲಿ ಅವಧಿ ಮೀರಿದ ಹಾಲು ಮತ್ತು ಮೊಸರು, ಶಿಲೀಂಧ್ರ ಹಿಡಿದ ತರಕಾರಿಗಳನ್ನು ಅಡುಗೆಗೆ ಬಳಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಜಿಲೇಬಿ ತಯಾರಿಕೆಯಲ್ಲಿ ನಿಷೇಧಿತ ಕೃತಕ ಬಣ್ಣ ಬಳಸಿರುವುದೂ ಪತ್ತೆಯಾಗಿತ್ತು. ಸಂಬಂಧಪಟ್ಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು.
ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ಆಹಾರ ಇಲಾಖೆ ದಾಳಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಯಲು!
ಬಾಳೆಹಣ್ಣಿನಂತಹ ನಿತ್ಯ ಬಳಕೆಯ ಹಣ್ಣುಗಳಲ್ಲೂ ಅಪಾಯಕಾರಿ ರಾಸಾಯನಿಕ ಬಳಕೆಯ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ತಪಾಸಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕೆಂಬ ಒತ್ತಾಯ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ