AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದ ಅಪರೂಪದ ಧಾರ್ಮಿಕ ಪರಂಪರೆ: ಮನೆ ಕಸ ಗುಡಿಸಿ ‘ವಡಗಲಮ್ಮ’ ದೇವಿಗೆ ಅರ್ಪಿಸುವ ‘ಸ್ವಚ್ಛತಾ’ ಆಚರಣೆ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ವರ್ಷಗಳ ಅಪರೂಪದ 'ಸ್ವಚ್ಛತಾ' ಆಚರಣೆ ನಡೆಯುತ್ತಿದೆ. ಮನೆಗಳಲ್ಲಿರುವ ಹಳೆಯ ಕಸ ಮತ್ತು ವಸ್ತುಗಳನ್ನು ಗುಡಿಸಿ 'ವಡಗಲಮ್ಮ' ದೇವಿಗೆ ಅರ್ಪಿಸುವುದರಿಂದ ಸಾಂಕ್ರಾಮಿಕ ರೋಗ-ರುಜಿನಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆಯಾಗಿದೆ.

ಉತ್ತರ ಕನ್ನಡದ ಅಪರೂಪದ ಧಾರ್ಮಿಕ ಪರಂಪರೆ: ಮನೆ ಕಸ ಗುಡಿಸಿ ‘ವಡಗಲಮ್ಮ’ ದೇವಿಗೆ ಅರ್ಪಿಸುವ 'ಸ್ವಚ್ಛತಾ' ಆಚರಣೆ!
ಮನೆ ಕಸ ಗುಡಿಸಿ ‘ವಡಗಲಮ್ಮ’ ದೇವಿಗೆ ಅರ್ಪಿಸುವ 'ಸ್ವಚ್ಛತಾ' ಆಚರಣೆImage Credit source: The New Indian Express
ಭಾವನಾ ಹೆಗಡೆ
|

Updated on: Oct 02, 2026 | 2:37 PM

Share

ಮುಖ್ಯಾಂಶಗಳು

  • ಹೊನ್ನಾವರದ ಕರ್ಕಿಯಲ್ಲಿ ಮನೆ ಕಸವನ್ನು 'ವಡಗಲಮ್ಮ' ದೇವಿಗೆ ನೀಡುವ ಆಚರಣೆ.
  • ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆಯಲು ಹಳೆಯ ವಸ್ತುಗಳನ್ನು ತೊರೆಯುವ ಗ್ರಾಮಸ್ಥರು.
  • ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಅಂತಿಮವಾಗಿ ಗಡಿದಾಟಿ ಕಸ ವಿಲೇವಾರಿ.

ಹೊನ್ನಾವರ, ಅಕ್ಟೋಬರ್ 02: ದೇಶಾದ್ಯಂತ ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ’ ಅಭಿಯಾನದಡಿ ಕಸ ಗುಡಿಸಿ ನೈರ್ಮಲ್ಯ ಮೆರೆಯುವುದು ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನೂರಾರು ವರ್ಷಗಳಿಂದಲೂ ಮನೆ ಕಸವನ್ನು ಸಂಪೂರ್ಣವಾಗಿ ಹೊರಹಾಕಿ, ಅದನ್ನು ದೇವಿಗೆ ಅರ್ಪಿಸುವ ವಿಶಿಷ್ಟ ಹಾಗೂ ಧಾರ್ಮಿಕ ಆಚರಣೆಯೊಂದು ನಡೆದುಕೊಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ‘ವಡಗಲಮ್ಮ’ದೇವಿಗೆ ಹಳೆಯ ಮತ್ತು ಅನಗತ್ಯ ವಸ್ತುಗಳನ್ನು ಅರ್ಪಿಸುವ ಸಂಪ್ರದಾಯ ಜೀವಂತವಾಗಿದೆ. ‘ವಡಗು’ ಎಂದರೆ ಉತ್ತರ ಕನ್ನಡದ ಉಪಭಾಷೆಯಲ್ಲಿ ‘ಕಸ ಗುಡಿಸು’ ಎಂದರ್ಥ.

ಮನೆಯ ಕಸದ ಮೂಟೆಗಳನ್ನು ದೇವಿಯ ಬಳಿ ಸುರಿಯುವ ಜನ

ಗ್ರಾಮಸ್ಥರು ತಮ್ಮ ಮನೆಗಳಲ್ಲಿರುವ ಹಳೆಯ ವಸ್ತುಗಳು, ಮುರಿದ ಚತ್ರಿ, ಹರಿದ ಬಟ್ಟೆಗಳು, ಕೃಷಿ ಉಪಕರಣಗಳು, ಪೊರಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಗುಡಿಸಿ ಸಂಗ್ರಹಿಸುತ್ತಾರೆ. ಈ ಎಲ್ಲ ಕಸದ ಮೂಟೆಗಳನ್ನು ರಾಷ್ಟ್ರೀಯ ಹೆದ್ದಾರಿ-66 ರ ಬದಿಯಲ್ಲಿ ಪ್ರತಿಷ್ಠಾಪಿಸಲಾಗುವ ವಡಗಲಮ್ಮ ದೇವಿಯ ಬಳಿ ತಂದು ಸುರಿಯಲಾಗುತ್ತದೆ. ಇದರೊಂದಿಗೆ ಅರಿಶಿನ-ಕುಂಕುಮ, ಸೀರೆ, ತೆಂಗಿನಕಾಯಿ ಹಾಗೂ ಕೋಳಿಗಳನ್ನು ನೀಡಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ರೋಗ-ರುಜಿನಗಳ ನಿವಾರಣೆಗೆ ದೈವಿಕ ನಂಬಿಕೆ

ಈ ಆಚರಣೆಯ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ. ಹಳೆಯ ವಸ್ತುಗಳನ್ನು ಮನೆಯಲ್ಲೇ ಇಟ್ಟುಕೊಂಡರೆ ಕಾಲರಾ, ಸಾಂಕ್ರಾಮಿಕ ಜ್ವರ ಹಾಗೂ ಇನ್ನಿತರ ರೋಗಗಳು ಹರಡುತ್ತವೆ ಎಂಬ ನಂಬಿಕೆ ಇತ್ತು. ಮನೆ ಕಸವನ್ನು ದೇವಿಗೆ ಅರ್ಪಿಸುವುದರಿಂದ ಗ್ರಾಮಕ್ಕೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಮತ್ತು ದೇವಿಯೇ ಕಸದೊಂದಿಗೆ ರೋಗ-ರುಜಿನಗಳನ್ನು ಹೊತ್ತೊಯ್ಯುತ್ತಾಳೆ ಎಂಬುದು ಸ್ಥಳೀಯರ ಬಲವಾದ ವಿಶ್ವಾಸ.

ಪ್ರತಿ ವರ್ಷ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಚರಿಸುವ ಈ ವಡಗಲಮ್ಮನ ಮೂರ್ತಿಯು ಮಹಾಲಯ ಅಮಾವಾಸ್ಯೆಯವರೆಗೆ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತದೆ. ಬಳಿಕ ಎಲ್ಲ ಕಸದ ರಾಶಿಯನ್ನು ಬೇರೊಂದು ಗ್ರಾಮಕ್ಕೆ ಹಸ್ತಾಂತರಿಸಿ, ಅಂತಿಮವಾಗಿ ಜಿಲ್ಲೆಯ ಗಡಿ ದಾಟಿಸಿ ನಿರ್ಜನ ಪ್ರದೇಶದಲ್ಲಿ ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ. ಸ್ವಚ್ಛತೆಗೆ ದೈವಿಕ ಸ್ಪರ್ಶ ನೀಡಿದ ಈ ವಿಶಿಷ್ಟ ಆಚರಣೆ ಉತ್ತರ ಕನ್ನಡದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More