ಬಡವರಿಗೆ ಫುಡ್ ಕಿಟ್ ವಿತರಣೆ; ಮಾನವೀಯತೆ ಮೆರೆದ ಹೋಂ ಪ್ರಾಡಕ್ಟ್ ಮಾರಾಟ ಮಾಡುವ ಉತ್ತರ ಕನ್ನಡದ ಮಹಿಳೆ
ಜನತಾ ಕರ್ಪ್ಯೂ ಜಾರಿಯಾಗುವ ಮೊದಲು ತಮ್ಮ ಪ್ರಾಡಕ್ಟ್ಗಾಗಿ ಹಲವು ಸಾಮಾಗ್ರಿಗಳನ್ನ ಖರೀದಿಸಿದ್ದರು. ಆದರೆ ಎಲ್ಲೆಡೆ ಬಂದ್ ವಾತಾವರಣ ಇದ್ದಿದರಿಂದ ಏನು ಮಾಡುವುದೆಂದು ತೋಚಿರಲಿಲ್ಲ. ಹೀಗಾಗಿ ಬಡವರಿಗಾದರೂ ಸಹಾಯ ಮಾಡಬಹುದಲ್ಲ ಎಂದು ಯೋಚಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಉತ್ತರ ಕನ್ನಡ: ರಾಜ್ಯದಲ್ಲೆಡೆ ಕೊವಿಡ್ ಎರಡನೇ ಅಲೆ ತೀವ್ರವಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದ ಲಕ್ಷಾಂತರ ಜನರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಸಹಾಯ ಮಾಡಲು ಉತ್ತರ ಕನ್ನಡದ ಮಹಿಳೆಯೊಬ್ಬರು ಮುಂದೆ ಬಂದಿದ್ದು, ನೂರಾರು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಮಹಿಳೆಯೊಬ್ಬರು ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಪಟ್ಟಣದ ಗಾಯತ್ರಿ ನವೀನ್ ಕಾನಡೆ ಎಂಬ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಲಕ್ಷ್ಮೀ ಹೋಂ ಪ್ರಾಡಕ್ಟ್ ಹೆಸರಿನಲ್ಲಿ ವಿವಿಧ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಜನತಾ ಕರ್ಪ್ಯೂ ಜಾರಿಯಾಗುವ ಮೊದಲು ತಮ್ಮ ಪ್ರಾಡಕ್ಟ್ಗಾಗಿ ಹಲವು ಸಾಮಾಗ್ರಿಗಳನ್ನ ಖರೀದಿಸಿದ್ದರು. ಆದರೆ ಎಲ್ಲೆಡೆ ಬಂದ್ ವಾತಾವರಣ ಇದ್ದಿದರಿಂದ ಏನು ಮಾಡುವುದೆಂದು ತೋಚಿರಲಿಲ್ಲ. ಹೀಗಾಗಿ ಬಡವರಿಗಾದರೂ ಸಹಾಯ ಮಾಡಬಹುದಲ್ಲ ಅಂದುಕೊಂಡು ಪತಿ ಅವರೊಂದಿಗೆ ಚರ್ಚಿಸಿ ಮತ್ತಷ್ಟು ಸಾಮಗ್ರಿ ಖರೀದಿಸಿ ಫುಡ್ ಕಿಟ್ ಮಾಡಿ ಬಡ ಕುಟುಂಬಗಳಿಗೆ ವಿತರಿಸುವ ಮೂಲಕ ತೃಪ್ತಿ ಕಾಣುತ್ತಿದ್ದಾರೆ.
ಗಾಯತ್ರಿ ಮತ್ತು ಅವರ ಪತಿ ನವೀನ್ ಮತ್ತು ಮಕ್ಕಳು ಸೇರಿ ಮನೆಯಲ್ಲಿ ವಿವಿಧ ಬೆಳೆಕಾಳು, ತರಕಾರಿಗಳ ಕಿಟ್ ಮಾಡುತ್ತಿದ್ದಾರೆ. ಎಲ್ಲೆಡೆ ಬಂದ್ ಇರುವುದರಿಂದ ತಮಗೆ ಗೊತ್ತಿರುವ ಬಡವರ ಮನೆಗೆ ತೆರಳಿ ಆಹಾರದ ಕಿಟ್ ನೀಡಿ ಬರುತ್ತಿದ್ದಾರೆ. ಈಗಾಗಲೇ ಮುಂಡಗೋಡು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನೂರಾರು ಮನೆಗಳಿಗೆ ಕಿಟ್ ನೀಡಿದ್ದಾರೆ.
ಸಹಾಯ ಬೇಡಿ ಮನೆಗೆ ಬಂದವರಿಗೂ ಇವರು ಸಹಾಯಹಸ್ತ ಚಾಚಿದ್ದಾರೆ. ಕಡುಬಡತನದಲ್ಲಿ ಬೆಳೆದ ಗಾಯತ್ರಿ ಕಾನಡೆ ಪಿಯುಸಿವರೆಗೆ ಓದಿದ್ದಾರೆ. ಕುಟುಂಬ ನಿರ್ವಹಣೆಗೋಸ್ಕರ ಹೋಂ ಪ್ರಾಡಕ್ಟ್ ಮಾಡಿ ಜೀವನ ಕಂಡುಕೊಂಡಿದ್ದರು. ಮೊದ-ಮೊದಲು ಚಿಕ್ಕ ಪ್ರಮಾಣದಲ್ಲಿ ಆರಂಭಿಸಿ ನಂತರ ಚಿಕನ್ ಮಸಾಲಾ, ಮಟನ್ ಮಸಾಲಾ, ಸಾಂಬಾರ ಮಸಾಲಾ, ದನಿಯಾ ಪೌಡರ್, ಬಿರಿಯಾನಿ ಮಸಾಲಾ, ಗರಂ ಮಸಾಲ ಸೇರಿದಂತೆ ಇತರೆ ಪ್ರಾಡಕ್ಟ್ಗಳನ್ನು ತಯಾರಿಸುತ್ತಿದ್ದರು.
ತಾವು ತಯಾರಿಸಿದ ಉತ್ಪನ್ನಗಳನ್ನ ಹುಬ್ಬಳ್ಳಿ ಮತ್ತು ಕಾರವಾರ ಕಡೆ ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಭಾಗದ ಹಾಸ್ಟೆಲ್‍ಗಳಿಗೆ ಕೂಡ ಕಳಿಸುತ್ತಿದ್ದರು. ಆದರೀಗ ಕೋವಿಡ್ ಮಹಾಮಾರಿಯಿಂದ ಉದ್ಯಮ ನಷ್ಟದಲ್ಲಿದೆ. ಆದರೂ ಕೂಡ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಶಕ್ತಿ ನೀಡಲಿ ಎಂದು ಸಹಾಯ ಪಡೆದ ಅನ್ವರ್ ಸಾಬ್ ಹೇಳಿದ್ದಾರೆ.
ನಮ್ಮ ಕುಟುಂಬಕ್ಕೆ ಬೇರೆ ಆದಾಯವಿಲ್ಲ. ಹೋಮ್ ಪ್ರಾಡಕ್ಟನ್ನೆ ನಂಬಿರುವ ನಮಗೆ ಕೊರೊನಾ ಬಾರೀ ಹೊಡೆತ ನೀಡಿದೆ. ಆದರೂ ನಮ್ಮಂತೆ ಸಂಕಷ್ಟದಲ್ಲಿರುವ ಜನರಿಗಾದರೂ ಕೊಂಚ ಸಹಾಯ ಮಾಡಿದರೇ ತೃಪ್ತಿ ಸಿಗುತ್ತಲ್ಲ ಎಂದು ಗಾಯತ್ರಿ ಕಾನಡೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಐವೆರ್ಮೆಕ್ಟಿನ್; ಕೊರೊನಾ ಬಂದರೂ ಸಾವು ತಡೆಯಲು ಈ ಯೋಜನೆ ಎಂದ ಗೋವಾ ಸರ್ಕಾರ
ಲಾಕ್ಡೌನ್ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್ ಖಾನ್; ಆದ್ರೂ ಇದು ಮೆಚ್ಚುವ ಕೆಲಸ