ಭಟ್ಕಳ ಪಟ್ಟಣ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣವನ್ನು ಸ್ಫೋಟಿಸುವುದಾಗಿ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆ ಇ-ಮೇಲ್ ಬಂದಿದೆ. ಜುಲೈ 10 ರಂದು ಬೆಳಿಗ್ಗೆ ಎರಡು ಬಾರಿ ಈ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಭಟ್ಕಳದ ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ. ಜಿಲ್ಲಾಡಳಿತ ಹೈ ಅಲರ್ಟ್‌ನಲ್ಲಿದೆ.

ಕಾರವಾರ, ಜುಲೈ 11: ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ (Bhatkal) ಪಟ್ಟಣವನ್ನು ಸ್ಫೋಟಿಸುವುದಾಗಿ (Blast) ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ. ಗುರುವಾರ (ಜು.10) ಬೆಳಗ್ಗೆ 10.30ಕ್ಕೆ ಈ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ. kannnannandik@gmail.com ನಿಂದ ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ.
ಜುಲೈ 10 ರ ಬೆಳಗ್ಗೆ ಎರಡು ಬಾರಿ ಇ-ಮೇಲ್ ಸಂದೇಶವನ್ನು ಕಳುಹಿಸಲಾಗಿದೆ. ಮೊದಲ ಇ-ಮೇಲ್ ಸಂದೇಶದಲ್ಲಿ ‘ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ್ ಟೌನ್’ ಎಂದು ಸಂದೇಶ ಕಳುಹಿಸಲಾಗಿದೆ. ನಂತರ ‘ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಹಾರ್ಸ್’ ಎಂದು ಸಂದೇಶ ಕಳುಹಿಸಲಾಗಿದೆ.
ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪಿಎಸ್ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇ-ಮೇಲ್ ಸಂದೇಶ ಬಂದ ಬೆನ್ನಲ್ಲೇ ಭಟ್ಕಳ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲಾ ಬಾಂಬ್ ನಿಷ್ಕ್ರಿಯ ದಳವು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳದಲ್ಲಿ ತಪಾಸಣೆ ನಡೆಸುತ್ತಿದೆ.
ಇದನ್ನೂ ಓದಿ: ಬಾಂಬ್ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಪತ್ರ ರವಾನಿಸಿದ್ದ ಆರೋಪಿ ಅರೆಸ್ಟ್
ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ತಿಂಗಳ ಹಿಂದೆಯಷ್ಟೇ ಹಾಸನದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಒಟ್ಟು 3 ಶಾಲೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬಂದಿತ್ತು. ಹಾಸನದ ವಿಜಯನಗರ ಇಂಡಸ್ಟ್ರಿಯಲ್ ಏರಿಯಾ, ಕೆಆರ್ ಪುರಂದಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆಗೆ ಇ-ಮೇಲ್ ಬಂದಿತ್ತು. ಈ ಬಗ್ಗೆ ಹಾಸನ ನಗರ, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಚಾರ್ಯ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಜತೆಗೆ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಏಪ್ರಿಲ್ 27 ರಂದು ಬೆಂಗಳೂರು ವಾರಾಣಸಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಬೆದರಿಕೆ ಸಂದೇಶ ಬಂದಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Fri, 11 July 25







