ಕಾರವಾರದಲ್ಲಿ ಮಳೆಗೆ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು
ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಕರಾವಳಿ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಅವಾಂತರಗಳು ಸೃಷ್ಟಿಯಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಳೆಗೆ ಅಂಗಡಿ ಗೋಡೆ ಕುಸಿದು ಓರ್ವ ವೃದ್ದೆ ಮೃತಪಟ್ಟರೆ, ಇತ್ತ ಹೊನ್ನಾವರದಲ್ಲಿ ಬೈಕ್ನಲ್ಲಿ ಚಲಿಸುತ್ತಿದ್ದ ದಂಪತಿ ಮೇಲೆ ಮರವೊಂದು ಬಿದ್ದಿದೆ.
ಉತ್ತರ ಕನ್ನಡ, ಜೂ.28: ಮಳೆ(Rain)ಯಿಂದ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಕಾರವಾರ(Karwar) ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ನಡೆದಿದೆ. ಹಳೇ ಅಂಗಡಿಯ ಗೋಡೆ ಕುಸಿದು ರುಕ್ಮಾ ಮಾಳ್ಸೇಕರ(70) ಕೊನೆಯುಸಿರೆಳೆದಿದ್ದಾರೆ. ಭಾರಿ ಮಳೆ ಬರುತ್ತಿದ್ದ ಹಿನ್ನೆಲೆ ಮೃತ ವೃದ್ಧೆ ಹಳೇ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ನೊರೋನ್ಹಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಓಮ್ನಿಗೆ ಮಿನಿ ಬಸ್ ಡಿಕ್ಕಿ; ಓರ್ವ ಸಾವು
ಉತ್ತರ ಕನ್ನಡ: ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಓಮಿನಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹೊನ್ನಾವರದ ಗೇರುಸೊಪ್ಪದ ಡ್ಯಾಂ ಬಳಿ ನಡೆದಿದೆ. ಭಟ್ಕಳದ ಮಗ್ದೂಮ್ ಕಾಲೋನಿ ನಿವಾಸಿ ಅಬ್ದುಲ್ ವಾಜೀದ್ (44) ದುರ್ಘಟನೆಯಲ್ಲಿ ದಾರುಣ ಸಾವನ್ನಪ್ಪಿದ್ದಾನೆ. ಅಬ್ದುಲ್ ವಾಜೀದ್ ಹಾಗೂ ಪತ್ನಿ ಗುಲ್ಶನ್ ಆರಾ ಓಮಿನಿಯಲ್ಲಿ ಹೊನ್ನಾವರದಿಂದ ಸಾಗರದತ್ತ ತೆರಳುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಓಮಿನಿಗೆ ಢಿಕ್ಕಿಯಾಗಿದೆ. ದುರ್ಘಟನೆಯಲ್ಲಿ ವಾಜೀದ್ ಹಾಗೂ ಪತ್ನಿ ಗುಲ್ಶನ್ ಗಂಭೀರ ಗಾಯಗೊಂಡಿದ್ದರು. ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ದೊರೆಯದ ಕಾರಣ ಖಾಸಗಿ ವಾಹನ ಮೂಲಕ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಾಜೀದ್ ಸಾವನ್ನಪ್ಪಿದ್ದಾರೆ. ಮಿನಿ ಟೆಂಪೋ ವಾಹನ ಚಾಲಕನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆ; ಮೀನುಗಾರರಿಗೆ ಹವಾಮಾನ ಇಲಾಖೆ ಹೈ ಅಲರ್ಟ್
ಮರಬಿದ್ದು ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಗೆ ಗಂಭೀರ ಗಾಯ
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಹೊನ್ನಾವರದ ಬಸ್ತಿಕೇರಿಯಲ್ಲಿ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಮರಬಿದ್ದು ಗಂಭೀರ ಗಾಯವಾದ ಘಟನೆ ನಡೆದಿದೆ. ಧಾರಾಕಾರ ಮಳೆಯಿಂದಾಗಿ ಮರ ರಸ್ತೆಯ ಮೇಲೆ ಬಿದ್ದಿದ್ದು, ಗಾಯಗೊಂಡ ಸವಾರರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ