
ಕಾರವಾರ, ಅಕ್ಟೋಬರ್ 15: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜನರು ಈ ತಾಪಮಾನ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಮಳೆ ಕೊರತೆ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ದಾಖಲೆ ಮಟ್ಟಕ್ಕೆ ತಾಪಮಾನ ಏರಿಕೆ ಆಗುತ್ತಿದೆ. ಹೀಗಾಗಿ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಆರೋಗ್ಯ ಇಲಾಖೆ ಕೂಡ ಸಾರ್ವಜನಿಕರಿಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರು ಬಿಸಿಲಿನ ಜ್ವಾಲೆಗೆ ಇಡೀ ಕರಾವಳಿಯೇ ಕಾದ ಕಾವಲಿಯಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೆಕೆಯ ಹೊಡೆತಕ್ಕೆ ಜನರು ಕಂಗೆಟ್ಟಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ದಾಖಲಾಗಬೇಕಿದ್ದ ಗರಿಷ್ಠ ತಾಪಮಾನ ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ದಾಖಲಾಗುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಇದನ್ನೂ ಓದಿ: ಹವಾಮಾನ ಇಲಾಖೆ ಎಚ್ಚರಿಕೆ: ಮುಂದಿನ 5 ದಿನಗಳ ಕಾಲ ಕರ್ನಾಟಕದ ಈ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ
ಈ ಭೀಕರ ತಾಪಮಾನದ ಹೊಡೆತ ಇದೀಗ ನೇರವಾಗಿ ಪ್ರವಾಸೋದ್ಯಮದ ಮೇಲೂ ಬಿದ್ದಿದೆ. ದಸರಾ ರಜೆಗಳಿದ್ದರು ಸಹ ಬಿಸಿಲಿನ ತೀವ್ರತೆಗೆ ಹೆದರಿ ಪ್ರವಾಸಿಗರು ಕಡಲತೀರಗಳ ಕಡೆಗೆ ಬರುತ್ತಿಲ್ಲ. ಕಾರವಾರದ ಪ್ರಸಿದ್ಧ ಟಾಗೋರ್ ಬೀಚ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.
ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಬಿಸಿಲಿನಿಂದ ಬಚಾವಾಗಲು ತಂಪು ಪಾನೀಯ ಹಾಗೂ ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಕಾರವಾರದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.
ಇದನ್ನೂ ಓದಿ: ಕಾರವಾರ: ಸ್ವಾತಂತ್ರ್ಯ ಬಂದು 8 ದಶಕ ಕಳೆದರೂ ಈ ಗ್ರಾಮಕ್ಕಿಲ್ಲ ರಸ್ತೆ
ಇನ್ನು ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕಟ್ಟೆಚ್ಚರ ನೀಡಿದೆ. ಸನ್ ಸ್ಟ್ರೋಕ್ ಭೀತಿ ಹಿನ್ನೆಲೆ ಮಧ್ಯಾಹ್ನದ ವೇಳೆ ಅನಗತ್ಯವಾಗಿ ಸಂಚರಿಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಎಚ್ಚರಿಕೆ ನೀಡಿದೆ.
ತಾಪಮಾನ ಏರಿಕೆಯಿಂದ ಕೆರೆಯಲ್ಲಿ ನೀರು ಸಂಗ್ರಹ, ಹಳ್ಳ ಕೊಳ್ಳದಲ್ಲಿ ಹರಿವಿನ ಪ್ರಮಾಣವು ತೀವ್ರ ಕುಸಿದಿದೆ. ಒಟ್ಟಿನಲ್ಲಿ ಬಿರು ಬಿಸಿಲು ಜನರ ಆರೋಗ್ಯದ ಮೇಲೆ ಎಫೆಕ್ಟ್ ತಟ್ಟಿದೆ. ಮುಂದಿನ ಎರಡು ತಿಂಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಉಂಟಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.