
ಕಾರವಾರ, ಸೆಪ್ಟೆಂಬರ್ 11: ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಗೆ ಕೊನೆಗಾಲದಲ್ಲಿ ಆಸರೆಯಾಗಬೇಕಿದ್ದ ಐವರು ಮಕ್ಕಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಹಾಸಿಗೆ ಹಿಡಿದಿರುವ ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕಿದ್ದು, ಅಷ್ಟೇ ಅಲ್ಲದೆ ಅನಾಥಾಶ್ರಮಕ್ಕೆ ಸೇರಿಸಲು ಮುಂದಾಗಿರುವ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ನಿವಾಸಿ ಈರವ್ವ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ ಸೇರಿದಂತೆ ಒಟ್ಟು ಐದು ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲ ತಿಂಗಳಿಂದ ತಾಯಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡು ಹಾಸಿಗೆ ಹಿಡಿಯುತ್ತಿದ್ದಂತೆ ಮಕ್ಕಳು ದೂರವಾಗಿದ್ದಾರೆ.
ಇದನ್ನೂ ಓದಿ: 20 ವರ್ಷಗಳ ಬಳಿಕ ಸಮಾಗಮ: 105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ ಬಂದ 85 ವರ್ಷದ ಮಗಳು!
ಒಂದೆರಡು ದಿನ ಆಸ್ಪತ್ರೆಗೆ ಬಂದು ಹೋದ ಮಕ್ಕಳು ಬಳಿಕ ಸಂಪರ್ಕಕ್ಕೂ ಸಿಕ್ಕಿಲ್ಲ. ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಎಲ್ಲಿಯಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದಿದ್ದಾರಂತೆ. ಇಷ್ಟು ವರ್ಷ ಮಕ್ಕಳಿಗೆ ಆಸರೆಯಾಗಿದ್ದ ತಾಯಿಗೆ ಇದೀಗ ಮಕ್ಕಳು ಆಸರೆಯಾಗದ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಈರವ್ವ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡ ಮಗಳು ಗೀತಾ ತಾಯಿಯ ಆರೈಕೆ ಮಾಡುತ್ತಿದ್ದಾರೆ. ಆದರೆ ತಾನೂ ಬಾಡಿಗೆ ಮನೆಯಲ್ಲಿ ಇರೋದ್ರಿಂದ ತಾಯಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಅಂತಿದ್ದಾರೆ. ಇನ್ನು ಮೂವರು ತಂಗಿಯರು ಕೆಲ ದಿನ ಆಸ್ಪತ್ರೆ ಕಡೆ ಬಂದು ಹೋಗಿದ್ದಾರೆ. ಆದರೆ ಮೊನ್ನೆ ಓರ್ವ ತಂಗಿ ದುರ್ಗಾ ಎಂಬಾಕೆ ಆಸ್ಪತ್ರೆಯಿಂದ ಹೊರಟು ಹೋಗಿ ವಾಪಸ್ ಬಂದಿಲ್ಲ. ನಿನ್ನೆ ಇಬ್ಬರು ತಂಗಿಯರು ಊಟ ತರುತ್ತೇವೆ ಅಂತಾ ಹೋದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗ ತಾಯಿಯನ್ನು ಎಲ್ಲಿಯಾದರೂ ಬಿಟ್ಟುಬಿಡಿ. ನಮಗೆ ಸಂಬಂಧವಿಲ್ಲ ಅನ್ನೋ ರೀತಿಯಲ್ಲಿ ಮಕ್ಕಳು ವರ್ತಿಸುತ್ತಿದ್ದಾರಂತೆ.
ಈರವ್ವ ಲಿವರ್ ಸಂಪೂರ್ಣ ಹಾನಿಯಾಗಿರುವುದರಿಂದ ಆರೋಗ್ಯ ಸುಧಾರಿಸುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರಂತೆ. ಆದರೆ ಚೆನ್ನಾಗಿ ನೋಡಿಕೊಂಡರೆ ಇನ್ನೂ ಆರು ತಿಂಗಳು ಅಥವಾ ಒಂದು ವರ್ಷ ಬದುಕಬಹುದಂತೆ. ಇದೀಗ ಈರವ್ವ ಅವರನ್ನು ಕುಮಟಾದ ಜಾನಕಿರಾಮ ವೃದ್ಧಾಶ್ರಮಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಐದು ಮಕ್ಕಳನ್ನು ಹೆತ್ತು ಅವರ ಬದುಕಿಗೆ ದಾರಿ ತೋರಿಸಿದ ತಾಯಿಗೆ ಕೊನೆಗಾಲದಲ್ಲಿ ತನ್ನ ಮಕ್ಕಳ ಆಸರೆ ಸಿಗದೆ ವೃದ್ಧಾಶ್ರಮದ ದಾರಿ ಹಿಡಿಯಬೇಕಾದ ಪರಿಸ್ಥಿತಿ ಬಂದಿರುವುದು ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.