ಕರಾವಳಿಯಲ್ಲಿ ಮತ್ತೆ ಎಂಡೋಸಲ್ಫಾನ್ ಭೀತಿ: ಆರೋಗ್ಯ ಇಲಾಖೆಯಿಂದ ಆಘಾತಕಾರಿ ವರದಿ
ಕರ್ನಾಟಕ ಕರಾವಳಿ ಭಾಗದಲ್ಲಿ ಸಾವಿರಾರು ಜನರ ಜೀವ ಹಿಂಡಿದ್ದ ಎಂಡೋಸಲ್ಫಾನ್ ಕರಾಳತೆ ಇದೀಗ ಮೂರನೇ ತಲೆಮಾರಿಗೂ ತಟ್ಟಿದೆ. ಆರೋಗ್ಯ ಇಲಾಖೆಯ ಅದೊಂದು ವರದಿ ಜನರಿಗೆ ಶಾಕ್ ಕೊಟ್ಟಿದೆ. ಇದರಿಂದ ಮತ್ತೆ ಕರಾವಳಿ ಪ್ರದೇಶದ ಜನರಲ್ಲಿ ಎಂಡೋಸಲ್ಫಾನ್ ಭೀತಿ ಎದುರಾಗಿದೆ. ಹಾಗಾದರೆ ವರದಿಯಲ್ಲೇನಿತ್ತು? ಇಲ್ಲಿದೆ ಮಾಹಿತಿ.

ಕಾರವಾರ, ಜನವರಿ 23: ಮಹಾಮಾರಿ ಎಂಡೋಸಲ್ಫಾನ್ (Endosulfan) ಕರಾವಳಿ (Coastal Karnataka) ಭಾಗದ ಸಾವಿರಾರು ಮನೆಗಳ ನೆಮ್ಮದಿಯನ್ನೇ ಕದಡಿತ್ತು. ಗೇರುಬೀಜ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್, ಜನರ ಮೇಲೆ ಪರಿಣಾಮ ಬೀರಿತ್ತು. ಹುಟ್ಟುತ್ತಲೇ ಬುದ್ಧಿ ಭ್ರಮಣೆ ,ಬಹು ಅಂಗಾಂಗ ವೈಫಲ್ಯದಿಂದಾಗಿ ಅದೆಷ್ಟೋ ಮಕ್ಕಳು ನರಕಯಾತನೆ ಅನುಭವಿಸಿದ್ದರು. ಇದೀಗ ಮತ್ತೆ ಕರಾವಳಿ ಜನತೆಯಲ್ಲಿ ಎಂಡೋಸಲ್ಫಾನ್ ಭಯ ಆವರಿಸಿದೆ.
ಅಂದಹಾಗೆ 1986ರಿಂದ 2011 ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುಮಾರು 11,794 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಫಾನ್ ವಿಷದ್ರಾವಣವನ್ನು ಸಿಂಪಡಿಸಲಾಗಿತ್ತು. ಇದು ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರಿತ್ತು. ಮಕ್ಕಳು ಹುಟ್ಟುತ್ತಲೇ ಬುದ್ಧಿಮಾಂದ್ಯ, ಅಂಗವೈಕಲ್ಯ, ನರ ದೌರ್ಬಲ್ಯಕ್ಕೆ ತುತ್ತಾಗಿದ್ದರು. ಇನ್ನು ಪುರುಷರೂ ಕೂಡಾ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಬಲ್ಯದಂತಹ ಸಮಸ್ಯೆ ಎದುರಿಸಿದ್ದರು. 2023-24 ರಲ್ಲಿ ಒಟ್ಟು 1554 ಜನರನ್ನು ಎಂಡೋಸಲ್ಫಾನ್ ಪೀಡಿತರನ್ನಾಗಿ ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಮಕ್ಕಳು ಸೇರಿ 543 ಜನರನ್ನು ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿದೆ.
ವಂಶವಾಹಿ ಮೂಲಕ ಹರಡುತ್ತಿರುವ ಕಾಯಿಲೆಗಳು
ವಿಜ್ಞಾನಿಗಳ ಪ್ರಕಾರ, ಎಂಡೋಸಲ್ಫಾನ್ ಅಡ್ಡಪರಿಣಾಮದಿಂದ ಬರುವ ನ್ಯೂನತೆಗಳು ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ. ಎಂಡೋ ಬಾಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಈ ಹಿಂದೆಯೇ ಸರ್ಕಾರ ಪೀಡಿತರಿಗೆ ನೀಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಇದರಿಂದಾಗಿ ಎಂಡೋ ಪೀಡಿತರಿಗೆ ಯಾವ ಸೌಲತ್ತು ಇಲ್ಲದೇ ತೊಂದರೆ ಪಡುವಂತಾಗಿತ್ತು. ಆದರೆ ಈಗ ಮತ್ತೆ ಎಂಡೋ ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದಿದೆ. ಸರ್ಕಾರ ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ
ಈ ಎಂಡೋ ಸಲ್ಫಾನ್ ಪರಿಣಾಮದಿಂದ ಬರುವ ಕಾಯಿಲೆಗಳು ಹುಟ್ಟಿದಾಗಿನಿಂದ ಸಾಯುವ ವರೆಗೂ ಜೀವ ಹಿಂಡುತ್ತವೆ. ಇದೀಗ ಮೂರನೇ ತಲೆಮಾರಿಗೂ ನರಕ ತೋರಿಸುತ್ತಿರುವುದು ವಿಪರ್ಯಾಸ.