ಅನುದಾನ ಕೊರತೆ ಮಧ್ಯೆ ಕಾರವಾರದಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ: ಏನಿದು ವಿವಾದ?
ರಾಜ್ಯದಾದ್ಯಂತ ಬಿಟುಮಿನ್ ಮತ್ತು ಅನುದಾನ ಕೊರತೆಯಿಂದ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಆದರೆ ಕಾರವಾರದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಿ, ಒಂದೇ ದಿನದಲ್ಲಿ ಕಿತ್ತು ಹಾಕುವ ಮೂಲಕ ರಸ್ತೆಯನ್ನು ಹಾಳು ಮಾಡಲಾಗಿದೆ. ಕೆಶಿಪ್ ಅನುದಾನ ದುರ್ಬಳಕೆಯ ಈ ವಿವಾದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರ, ಮೇ 07: ರಾಜ್ಯದ ಹಲವೆಡೆ ಅನುದಾನದ ಕೊರತೆ ಹಾಗೂ ಬಿಟುಮಿನ್ (ಡಾಂಬರು) ಅಭಾವದಿಂದ ರಸ್ತೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯ (uttara-kannada) ಕಾರವಾರದಲ್ಲಿ ಮಾತ್ರ ಸುಸ್ಥಿತಿಯಲ್ಲಿರುವ ಕಾಂಕ್ರೀಟ್ ರಸ್ತೆಯ (Concrete Road) ಮೇಲೆ ಡಾಂಬರು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಮುಖ್ಯಾಂಶಗಳು
- ಸುಸಜ್ಜಿತ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರೀಕರಣ
- ಸಾರ್ವಜನಿಕರ ಆಕ್ರೋಶಕ್ಕೆ ಕಾಮಗಾರಿ ಸ್ಥಗಿತ
- ಬಿಟುಮಿನ್ ಕೊರತೆ ನಡುವೆ ಉತ್ತಮ ರಸ್ತೆ ಹಾಳು
ಸಾರ್ವಜನಿಕರು ಆಕ್ರೋಶ
ಕಾರವಾರ ಬಸ್ ನಿಲ್ದಾಣದಿಂದ ಕೈಗಾ ಅಣುಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯ ಮೇಲೆ ನಿನ್ನೆ ಏಕಾಏಕಿ ಡಾಂಬರೀಕರಣ ಆರಂಭಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು, ರಸ್ತೆ ಚೆನ್ನಾಗಿದ್ದರೂ ಅನಗತ್ಯವಾಗಿ ಡಾಂಬರು ಹಾಕುತ್ತಿರುವುದನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಪ್ರತಿರೋಧಕ್ಕೆ ಹೆದರಿದ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳದಿಂದ ನಿರ್ಗಮಿಸಿದ್ದು, ಇಂದು ಹಾಕಲಾಗಿದ್ದ ಡಾಂಬರನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ. ಈ ಅವಾಂತರದಿಂದಾಗಿ ಇದ್ದ ಕಾಂಕ್ರೀಟ್ ರಸ್ತೆಯೂ ಹಾಳಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ; ಡಾಕ್ಟರ್ ದುರಂತ ಸಾವು
ಅಸಲಿ ವಿಚಾರ ಏನೆಂದರೆ ಕೆಶಿಪ್ ಯೋಜನೆಯಡಿ ಈ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ವಿಜಯಪುರ ಜಿಲ್ಲೆಯವರಾಗಿದ್ದರಿಂದ ಕಾಮಗಾರಿ ಆರಂಭಕ್ಕೂ ಮುನ್ನ ಈ ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ. ಇನ್ನೂ ಈ ಬಗ್ಗೆ ಸ್ಥಳಿಯ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಕಾಮಗಾರಿ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ರಾಜ್ಯದ ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿಗೆ ಹಣವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ, ಈಗಾಗಲೇ ಸುಸ್ಥಿತಿಯಲ್ಲಿರುವ ರಸ್ತೆಗೆ ಲಕ್ಷಾಂತರ ರೂಪಾಯಿ ಅನುದಾನ ಮಂಜೂರಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.
ಲಾಭದ ಉದ್ದೇಶದಿಂದ ಅವೈಜ್ಞಾನಿಕವಾಗಿ ಡಾಂಬರು ಹಾಕಲು ಮುಂದಾದ ಗುತ್ತಿಗೆದಾರರು, ಈಗ ಅದನ್ನು ಕಿತ್ತು ತೆಗೆಯುವ ನೆಪದಲ್ಲಿ ಭದ್ರವಾಗಿದ್ದ ಕಾಂಕ್ರೀಟ್ ರಸ್ತೆಯ ಮೇಲ್ಪದರವನ್ನೂ ಹಾಳುಗೆಡವುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ.
ಇದನ್ನೂ ಓದಿ: ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ
ಒಟ್ಟಾರೆ ಬಿಟುಮಿನ್ ಅಭಾವದಿಂದ ಅದೆಷ್ಟೋ ರಸ್ತೆ ಕಾಮಗಾರಿಗಳು ನಿಂತಿವೆ. ಇನ್ನೂ ಕೆಲವು ಕಡೆ ಅನುದಾನ ಸಿಗುತ್ತಿಲ್ಲ ಅಂತ ಸ್ವಪಕ್ಷಿಯ ಶಾಸಕರೇ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚೆನ್ನಾಗಿರುವ ರಸ್ತೆಗೆ ಡಾಂಬರು ಹಾಕಿ ಹಾಳು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



