Uttara Kannada News: ಪ್ರೀತಿಸಿ ಮದ್ವೆಯಾಗಿ 6 ವರ್ಷ ಸಂಸಾರ, ಈಗ ಪತಿ ಏಕಾಏಕಿ ನಾಪತ್ತೆ: ಕಂಗಾಲಾದ ಪತ್ನಿ
ಅವರಿಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜೋಡಿ. ಇವರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದು, ಆರು ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದರು. ಆದರೆ, ಅದೊಂದು ದಿನ ಕೆಲಸಕ್ಕೆಂದು ತೆರಳಿದ್ದ ಪತಿ ಮನೆಗೂ ವಾಪಸ್ಸಾಗದೇ, ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾನೆ. ಪತಿ ಕಾಣೆಯಾಗಿದ್ದಾಗಿ ಪತ್ನಿ ದೂರು ನೀಡಿ ವರ್ಷ ಕಳೆಯುತ್ತಾ ಬಂದರೂ ಸಹ ಆತನ ಸುಳಿವೇ ಇಲ್ಲವಾಗಿದ್ದು, ಮಹಿಳೆಗೆ ದಿಕ್ಕೇ ತೋಚದಂತಾಗಿದೆ.
ಉತ್ತರ ಕನ್ನಡ : ಹೀಗೆ ಕಂಕುಳಲ್ಲೊಂದು, ಕೈಯಲ್ಲೊಂದು ಮಗುವನ್ನ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರಿಡುತ್ತಿರುವ ಮಹಿಳೆ ಹೆಸರು ರೇಷ್ಮಾ. ಜಿಲ್ಲೆಯ ಕಾರವಾರ(Karwar)ದ ಬೈತಖೋಲ ನಿವಾಸಿಯಾಗಿರುವ ರೇಷ್ಮಾ, ಅಂಕೋಲಾ ತಾಲ್ಲೂಕಿನ ಹಾರವಾಡ ನಿವಾಸಿ ಮನೋಜ್ ಪೆಡ್ನೇಕರ್ ಎಂಬುವವರನ್ನ ಪ್ರೀತಿಸಿ ಕಳೆದ 2016ರಲ್ಲಿ ಮದುವೆಯೂ ಆಗಿದ್ದರು. ಮನೋಜ್ ಕಾರವಾರ ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಸ್ಕಿಲ್ಡ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇವರಿಬ್ಬರಿಗೂ ಎರಡು ಹೆಣ್ಣುಮಕ್ಕಳು ಸಹ ಇದ್ದಾರೆ. ಆರು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಮನೋಜ್ ಕಳೆದ 2022ರ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವನು ಮತ್ತೆ ವಾಪಸ್ ಬಂದಿರಲಿಲ್ಲ. ಈ ಸಂಬಂಧ ಪತಿಯನ್ನ ಹುಡುಕಿಕೊಡುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೇಷ್ಮಾ ದೂರು ಸಹ ದಾಖಲಿಸಿದ್ದರಾದರೂ ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪತಿಯನ್ನ ಹುಡುಕಿಸಿಕೊಂಡುವಂತೆ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಇನ್ನು ನಾಪತ್ತೆಯಾಗುವ ಮುನ್ನ ಪತಿ ಮನೋಜ್ ಜೊತೆ ರೇಷ್ಮಾ ಸುಖವಾಗಿ ಸಂಸಾರ ಮಾಡಿಕೊಂಡಿದ್ದು, ಅತ್ತೆ ಹಾಗೂ ನಾದಿನಿಯೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಆದರೆ, ಸಾಲದ ಸಮಸ್ಯೆಯಿದೆ ಎನ್ನುವ ಕಾರಣ ನೀಡಿ ಮನೋಜ್ ಇದ್ದ ಮನೆಯನ್ನೂ ಸಹ ಮಾರಾಟ ಮಾಡಿದ್ದು, ಬಾಡಿಗೆ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾಗಲೇ ಸ್ಮಿತಾ ಎರಡನೇಯ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಆರು ತಿಂಗಳವರೆಗೆ ಜೊತೆಗಿದ್ದ ಮನೋಜ್ ನಂತರ ಕಣ್ಮರೆಯಾಗಿದ್ದು, ಯಾವುದೇ ಸಂಪರ್ಕಕಕ್ಕೂ ಲಭ್ಯವಾಗಿಲ್ಲ. ಇತ್ತ ಮನೋಜ್ ನಾಪತ್ತೆಯಾದ ಬಳಿಕ ಜೀವನ ಸಾಗಿಸಲು ರೇಷ್ಮಾ ಕೆಲಸಕ್ಕೆ ಸೇರಿದ್ದು, ಅತ್ತೆ ಮನೆಯವರೂ ಈಕೆಯೊಂದಿಗೆ ಮಾತನಾಡುತ್ತಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದ್ದು ಪತಿಯನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಇನ್ನು ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ಎಂಬುವವರು ಸ್ಮಿತಾಳ ನೆರವಿಗೆ ಬಂದಿದ್ದು, ಮನೋಜ್‌ನನ್ನ 8 ದಿನದಲ್ಲಿ ಪತ್ತೆ ಮಾಡದಿದ್ದಲ್ಲಿ ನೌಕಾನೆಲೆ ಎದುರು ಧರಣಿ ಕೂರುವುದಾಗಿ ಎಚ್ಟರಿಕೆ ನೀಡಿದ್ದಾರೆ.
ಇದನ್ನೂ ಓದಿ:Anekal News: ಗೋವಾ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಇಬ್ಬರು ನಾಪತ್ತೆ; ದೂರು ದಾಖಲು
ಪ್ರೀತಿಸಿ ಮದುವೆಯಾಗಿ, ಆರು ವರ್ಷಗಳ ಕಾಲ ಜೊತೆಗಿದ್ದ ಪತಿ ಏಕಾಏಕಿ ಕಣ್ಮರೆಯಾಗಿರುವುದು ಮಹಿಳೆಗೆ ದಿಕ್ಕು ತೋಚದಂತಾಗಿದ್ದು, ಇನ್ನಾದರೂ ಸಂಬಂಧಪಟ್ಟವರು ಆದಷ್ಟು ಶೀಘ್ರದಲ್ಲಿ ಈಕೆಯ ಪತಿಯನ್ನ ಹುಡುಕಿಕೊಡಲಿ ಅನ್ನೋದೇ ನಮ್ಮ ಆಶಯ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Thu, 25 May 23