ಕಾರವಾರ: ವೈರಲ್ ವೀಡಿಯೋಗೆ ಬಲಿಯಾದ ವೈದ್ಯ; ರಾಜೀವ್ ಪಿಕಳೆ ಕೇಸ್ನಲ್ಲಿ ಇಬ್ಬರು ಅಂದರ್
ಕಾರವಾರದ ಪ್ರಮುಖ ವೈದ್ಯಕೀಯ ಕುಟುಂಬದ ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅವಧಿ ಮೀರಿದ ಮಾತ್ರೆ ನೀಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಅವರ ತೇಜೋವಧೆ ಮಾಡಿದ್ದೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ವಿಡಿಯೋ ವೈರಲ್ ಮಾಡಿದ ಸುಭಾಷ್ ಮತ್ತು ಹರಿಶ್ಚಂದ್ರ ಎಂಬುವವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ದುರುಪಯೋಗದ ಗಂಭೀರ ಪರಿಣಾಮಗಳನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ.

ಕಾರವಾರ, ಜನವರಿ 24: ಸಾಮಾಜಿಕ,ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ರಾಜೀವ್ ಪಿಕಳೆ ಆತ್ಮಹತ್ಯೆ (Rajiv Pikale case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ತೇಜೋವಧೆಯಾದ ಕಾರಣ ಪಿಕಳೆ, ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ತಮ್ಮ ನಿವಾಸದಲ್ಲಿಯೇ ಸಾವಿಗೆ ಶರಣಾಗಿದ್ದರು. ಇದೀಗ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅವಧಿ ಮೀರಿದ ಮಾತ್ರೆ ನೀಡಿದ್ದ ವೈದ್ಯ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಪಿಕಳೆ ಕುಟುಂಬದ ಹಿರಿಯ ರಾಜೀವ್ ಪಿಕಳೆ ಸಾವನ್ನಪ್ಪಿದ್ದರು. ಆರ್ಥಿಕವಾಗಿ ಗಟ್ಟಿಯಾಗಿಯೇ ಇದ್ದ ಪಿಕಳೆ, ಒಂಟಿಯಾಗಿ ವಾಸಿಸುತ್ತಿದ್ದರು. ಪಿಕಳೆ ಕುಟುಂಬ ಕಾರವಾರದಲ್ಲಿ ಎರಡು ತಲೆಮಾರಿನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ. ಕೆಲ ದಿನಗಳ ಹಿಂದೆ ರಾಜೀವ್ ಪಿಕಳೆ ರೋಗಿಗೆ ಅವಧಿ ಮುಗಿದಿರುವ ಮಾತ್ರೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರಿಂದ ಮನನೊಂದ ಪಿಕಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ್, ಹರಿಶ್ಚಂದ್ರ ಎನ್ನುವವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿರುವ ಇವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ: ಸಾವಿಗೆ ಕಾರಣವಾಗಿದ್ದು ಒಂದು ವಿಡಿಯೋ!
ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ನಂತರ ಮನನೊಂದಿದ್ದ ರಾಜೀವ್ ಪಿಕಳೆ ಸಾಕಷ್ಟು ನೊಂದಿದ್ದರು. ಇದಲ್ಲದೇ ಅವಧಿ ಮುಗಿದ ಔಷಧ ನೀಡಿದ್ದಕ್ಕೆ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆಯೂ ಕೇಳಿದ್ದರು. ಆದರೆ ವಿಡಿಯೋ ಹೆಚ್ಚು ವೈರಲ್ ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದ ಅವರು, ಡೆತ್ ನೋಟ್ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದು ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.