ಗೋಕರ್ಣ ಮಹಾಬಲೇಶ್ವರನ ಮಂದಿರದಲ್ಲಿ ಸೀಮಿತವಾಗಿದ್ದ ವಸ್ತ್ರ ಸಂಹಿತೆ, ಸಾರ್ವಜನಿಕ ಸ್ಥಳಗಳಿಗೂ ಜಾರಿ: ತೀರ್ವ ಟೀಕೆ ಬಳಿಕ ತೆರವು
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಂಚರಿಸುವ ಜನರಿಗೆ ದೇವಸ್ಥಾನದ ಆಡಳಿತ ಸಮಿತಿ ವಸ್ತ್ರ ನಿಯಮ ಜಾರಿ ಮಾಡಿ ಭಾರಿ ಟೀಕೆಗೆ ಗುರಿಯಾಗಿತ್ತು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಂಚರಿಸುವ ಜನರಿಗೆ ದೇವಸ್ಥಾನದ ಆಡಳಿತ ಸಮಿತಿ ವಸ್ತ್ರ ನಿಯಮ ಜಾರಿಮಾಡುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರ ಲಕ್ಷಾಂತರ ಭಕ್ತರು ಬರುವ ಪುಣ್ಯ ಕ್ಷೇತ್ರ. ಜೊತೆಗೆ ದೇಶ ವಿದೇಶದಿಂದ ಬರುವ ಪ್ರವಾಸಿಗರ ಮೆಚ್ಚಿನ ತಾಣವೂ ಹೌದು. ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರನ ಆತ್ಮಲಿಂಗ ಸ್ಪರ್ಷ ಮಾಡಿ ಭಕ್ತರು ಪುನೀತರಾಗುತ್ತಾರೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ದೇವಸ್ಥಾನದ ನಿಯಮಗಳನ್ನು ಪದೇ ಪದೇ ಬದಲುಮಾಡಿ ಬರುವ ಭಕ್ತರೊಂದಿಗೆ ಅನುಚಿತ ವರ್ತನೆ ತೋರಿ ಭಕ್ತರಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ಈ ಹಿಂದೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರುಷರಿಗೆ ಪಂಜೆ, ಶಲ್ಯ ಕಡ್ಡಾಯ ಮಾಡಿದರೆ, ಮಹಿಳೆಯರಿಗೆ ಸೀರೆ ಕಡ್ಡಾಯ ಮಾಡಿತ್ತು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ (ತುಂಡು ಬಟ್ಟೆ) ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿದೆ ಎಂದು ನಾಮಫಲಕ ಹಾಕಿದೆ. ಇದೇ ರಸ್ತೆಯಲ್ಲಿ ಕಡಲ ತೀರ ಸೇರಿದಂತೆ ಇತರೆ ಭಾಗಕ್ಕೂ ತೆರಳಬೇಕಿದ್ದು ಸಾರ್ವಜನಿಕ ಪ್ರದೇಶಗಳಿಗೂ ವಸ್ತ್ರ ನಿಯಮ ತಂದಿದ್ದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಇನ್ನು ಸಾರ್ವಜನಿಕರು ಓಡಾಡುವ ಪ್ರದೇಶಕ್ಕೆ ವಸ್ತ್ರ ನಿಯಮ ಜಾರಿ ಮಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮತ್ತು ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಕುರಿತು ಟಿವಿ9 ನಲ್ಲಿ ವರದಿ ಪ್ರಸಾರವಾಯಿತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಮಿತಿ ರಸ್ತೆಯಲ್ಲಿ ಹಾಕಿದ್ದ ನಿಷೇಧದ ನಾಮಫಲಕವನ್ನು ತೆರವು ಗೊಳಿಸಿದೆ. ಇನ್ನು ದೇವಸ್ಥಾನದ ಒಳಭಾಗದಲ್ಲಿ ಸಹ ವಸ್ತ್ರ ನಿಯಮ ಜಾರಿಯಿದ್ದು ಇದನ್ನು ಸಹ ತೆಗೆದುಹಾಕಬೇಕು, ಬರುವ ಭಕ್ತರಿಗೆ ಭಕ್ತಿ, ದರ್ಶನ ಮುಖ್ಯವೇ ಹೊರತು ವಸ್ತ್ರವಲ್ಲ. ಎಲ್ಲರೂ ದೇವರ ದರ್ಶನಕ್ಕೆ ಭಕ್ತಿಯಿಂದಲೇ ಬರುತ್ತಾರೆ. ದೇವಸ್ಥಾನದಲ್ಲಿ ವಸ್ತ್ರ ನಿಯಮ ತೆಗೆದುಹಾಕದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. ಜೊತೆಗೆ ಈ ಕುರಿತು ಜಿಲ್ಲಾಧಿಕಾರಿಗಳು ಸಮಿತಿಯ ತೀರ್ಮಾನದ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುಲಾಗುವುದು ಎಂದು ತಿಳಿಸಿದ್ದಾರೆ.
ದೇವಸ್ಥಾನದ ಒಳ ಆವರಣದಲ್ಲಿ ತನ್ನ ವಸ್ತ್ರ ನಿಯಮವನ್ನು ಮುಂದುವರೆಸಿದ್ದು ಜಿಲ್ಲಾಡಳಿತ ಹಾಗೂ ಸುಪ್ರೀಂ ಕೋರ್ಟನಿಂದ ನಿಯೊಜನೆಗೊಂಡ ಸಮಿತಿ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ವಸ್ತ್ರ ನಿಯಮವನ್ನು ಸಂಪೂರ್ಣ ತೆಗೆದುಹಾಕಿ ಭಕ್ತರಿಗೆ ದೇವರ ದರ್ಶನಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಿದೆ.
ವರಿದ- ವಿನಾಯಕ ಬಡಿಗೇರ ಟಿವಿ9 ಕಾರವಾರ
Published On - 9:54 pm, Sat, 12 November 22