ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಕೃತ್ಯಗಳ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಡಿ ಚಾರ್ಜ್ಶೀಟ್
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಪಾತ್ರ ಇಲ್ಲವೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸಿದ್ದರು. ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿ ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ ಕೂಡ ನಾಗೇಂದ್ರ ಹೆಸರು ಉಲ್ಲೇಖಿಸಿರಲಿಲ್ಲ. ಆದರೆ ಇದೀಗ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ. ಚಾರ್ಜ್ಶೀಟ್ನಲ್ಲೇನಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 11: ಬಹುಕೋಟಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿಯಿಂದ ಬಚಾವಾಗಿದ್ದ ಮಾಜಿ ಸಚಿವ ಬಿ ನಾಗೇಂದ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಸ್ಐಟಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಹೆಸರೇ ಉಲ್ಲೇಖಿಸಿರಲಿಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರೂ ಸಹ ಹಗರಣದಲ್ಲಿ ನಾಗೇಂದ್ರ ಕೈವಾಡ ಇಲ್ಲ ಎಂದೇ ಹೇಳಿದ್ದರು. ಅವರನ್ನು ಸಮರ್ಥಿಸಿಕೊಂಡಿದ್ದರು. ಆದಾಗ್ಯೂ, ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಹಗರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಿಂದ ಸ್ಫೋಟಕ ಅಂಶಗಳು ಬಯಲಾಗಿವೆ.
ನಾಗೇಂದ್ರ ಮಾಸ್ಟರ್ ಮೈಂಡ್, ಆಣತಿಯಂತೆಯೇ ಹಣಕಾಸು ವಹಿವಾಟು
ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ ಎಂಬುದನ್ನು ಸಾಕ್ಷಿ ಸಮೇತ ಜನಪ್ರತಿನಿಧಿಗಳ ಕೋರ್ಟ್ಗೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಇಡಿ ಉಲ್ಲೇಖಿಸಿದೆ. ಆರೋಪಿ ಸತ್ಯನಾರಯಣವರ್ಮ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದು, ನಾಗೇಂದ್ರನ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಲೋಕಸಭಾ ಚುನಾವಣೆಗೆ ಹಣ ಬಳಕೆ
ಅವ್ಯವಹಾರದ 21 ಕೋಟಿ ರೂಪಾಯಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಇ.ಡಿ ತನಿಖೆಯಿಂದ ಬಯಲಾದ ಅಸಲಿಯತ್ತು
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತು. ಮಾಜಿ ಸಚಿವ ನಾಗೇಂದ್ರ ತಲೆದಂಡಕ್ಕೆ ಕಾರಣವಾದ ಹಗರಣದಲ್ಲಿ ರಾಜಕಾರಣಿಗಳ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಹೈಗ್ರೌಂಡ್ಸ್ ಹೋಟೆಲ್ನ ಮೀಟಿಂಗ್ನಿಂದ ನಿಗಮದ ಲೆಕ್ಕ ಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ನಡೆದು ವಿಡಿಯೋ ವೈರಲ್ ಆಗುವವರೆಗೆ ಷಡ್ಯಂತ್ರ, ಅಕೌಂಟ್ ಟ್ರಾನ್ಸ್ ಕ್ಷನ್, ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದು, ತೆಲಾಂಗಣದ ಬ್ಯಾಂಕ್ ಗೆ ಹಣ ವರ್ಗಾವಣೆ, ಆಮೂಲಕ ಇತರರಿಗೆ ಹಣ ವರ್ಗಾವಣೆಗಳು ಒಂದಕ್ಕೊಂದು ಇಡೀ ಅವ್ಯವಹಾರದ ಚಿತ್ರಣ ಬಿಚ್ಚಿಟ್ಟಿದ್ದವು. ಇ.ಡಿ. ತನಿಖೆ ವೇಳೆ ಒಂದೊಂದೇ ಅಸಲಿಯತ್ತು ಅನಾವರಣಗೊಂಡಿತ್ತು.
ಹಣ ಲಪಟಾಯಿಸಲು ಸಂಚು ಹೂಡಿದ್ಹೇಗೆ ನಾಗೇಂದ್ರ?
ವಾಲ್ಮೀಕಿ ನಿಗಮಕ್ಕೆ ಪದ್ಮನಾಭರನ್ನು ವ್ಯವಸ್ಥಾಪ ನಿರ್ದೇಶಕರನ್ನಾಗಿ ನೇಮಿಸಿ ಹಣ ಲಪಟಾಯಿಸಲು ನಾಗೇಂದ್ರ ಸಂಚು ಹೂಡಿದ್ದರು. ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ಹಣದ ಬಂಡಲ್ ಫೋಟೋಗಳ ಜತೆಗೆ ಎಲ್ಲೆಲ್ಲಿಗೆ ನಗದು ಪೂರೈಸಬೇಕೆಂದು ಉಲ್ಲೇಖಿಸಿದ್ದ ಚೀಟಿಯ ಚಿತ್ರಗಳು ಪತ್ತೆಯಾಗಿವೆ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ವಾಲ್ಮಿಕಿ ನಿಗಮದ ಹಗರಣ: ನಾಗೇಂದ್ರ ಪ್ರಮುಖ ಆರೋಪಿ, ಚುನಾವಣೆ ವೇಳೆ ಹಂಚಲಾಗಿತ್ತು ಅಕ್ರಮದ ಹಣ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ 20.19 ಕೋಟಿ ರೂ.ಗಳನ್ನು ಪ್ರತಿ ಬೂತ್‌ಗೂ ಹಂಚಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಅಂದಿನ ಸಚಿವ ಬಿ. ನಾಗೇಂದ್ರ ಖುದ್ದು 5.26 ಕೋಟಿ ರೂ. ಬಳಸಿರುವುದನ್ನು 15 ಸಾಕ್ಷಿಗಳಿಂದ ದೃಢಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಇ.ಡಿ ಉಲ್ಲೇಖಿಸಿದೆ.
ಇಡಿ ಇಕ್ಕಳಕ್ಕೆ ಇನ್ನಷ್ಟು ಆರೋಪಿಗಳು
ನಾಗೇಂದ್ರ ಅಪ್ತವಲಯದಲ್ಲಿದ್ದ ನೆಕ್ಕುಂಟೆ ನಾಗರಾಜ್, ಸತ್ಯನಾರಾಯಣ ವರ್ಮಾ ನಿಕಟ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಸೇರಿ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಅವ್ಯವಹಾರದ ಆಳ-ಆಗಲ ಭೇದಿಸುತ್ತಿರುವ ಇಡಿ ಇಕ್ಕಳದಲ್ಲಿ ಮತ್ತಷ್ಟು ಆರೋಪಿಗಳ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ