ಪತ್ನಿ ಮೇಲೆ ಪತ್ನಿಯಿಂದಲೇ ಡೆಡ್ಲಿ ಅಟ್ಯಾಕ್: ಕೊಡಲಿ ಏಟಿಗೆ ಪ್ರಾಣಬಿಟ್ಟ ಮಹಿಳೆ
ಪತಿಯೇ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ವಿಜಯನಗರದ ಹೊಸಪೇಟೆಯಲ್ಲಿ ನಡೆದಿದೆ. ಮಕ್ಕಳಾಗದ ಕೊರಗು ಮತ್ತು ಪತ್ನಿಯ ಮೇಲಿನ ಅನುಮಾನ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ದಂಪತಿ ನಡುವಿನ ಜಗಳ ವಿಕೋಪಕ್ಕೆ ಹೋಗಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ವಿಜಯನಗರ, ಜನವರಿ 01: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ ಪತಿಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಝಾನ್ಸಿ (32) ಮೃತ ಮಹಿಳೆಯಾಗಿದ್ದು, ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆಕೆಯ ಪತಿ ಸೆಲ್ವಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮಕ್ಕಳಿಲ್ಲದೆ ಇರುವುದು ಮತ್ತು ಪತ್ನಿ ಮೇಲೆ ಪತಿಗೆ ಅನುಮಾನವೇ ಕೌಟುಂಬಿಕ ಕಲಹಕ್ಕೆ ಕಾರಣ ಎನ್ನಲಾಗಿದೆ.
ಹದಿಮೂರು ವರ್ಷಗಳ ಹಿಂದೆ ಕುಟುಂಬಸ್ಥರ ಒಪ್ಪಿಗೆಯಂತೆ ಸೆಲ್ವಕುಮಾರ ಮತ್ತು ಝಾನ್ಸಿ ಮದುವೆ ನಡೆದಿತ್ತು. ಆ ಬಳಿಕ 7 ವರ್ಷಗಳ ವರೆಗೆ ಸಂಸಾರವೂ ಚೆನ್ನಾಗಿತ್ತು. ಆದರೆ ಮಕ್ಕಳಾಗದ ಕೊರಗು ದಂಪತಿಯನ್ನು ಕಾಡುತ್ತಿತ್ತು. ಕಂಡ ಕಂಡ ಹಾಸ್ಪಿಟಲ್, ದೇವಸ್ಥಾನ ಸುತ್ತಿದರೂ ಸಂತಾನ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ದಿನ ಕಳೆದಂತೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು. ಅಲ್ಲದೆ ಪತ್ನಿ ಝಾನ್ಸಿ ಮೇಲೆ ಸೆಲ್ವಕುಮಾರ ಅನುಮಾನ ಕೂಡ ಪಡಲು ಆರಂಭಿಸಿದ್ದ. ಹೀಗಾಗಿ ಪತಿ ಜೊತೆ ಗಲಾಟೆ ಮಾಡಿಕೊಂಡು ಝಾನ್ಸಿ ತವರುಮನೆ ವೆಂಕಟಾಪುರಕ್ಕೆ ಬಂದಿದ್ದಳು. ಕಳೆದ ಮೂರು ದಿನಗಳ ಹಿಂದೆ ಸೆಲ್ವಕುಮಾರ ವೆಂಕಟಾಪುರಕ್ಕೆ ಬಂದು ತನ್ನ ಪತ್ನಿ ಬಳಿ ಮನೆಗೆ ಬರುವಂತೆ ಕೇಳಿದ್ದ. ಆದರೆ ಆಕೆ ತಾನು ಬರೋದಿಲ್ಲ ಅಂತಾ ಹೇಳಿದ್ದಳಂತೆ. ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಕುಟುಂಬಸ್ಥರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿತ್ತು.
ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ; ಮರ್ಡರ್ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!
ಬಳಿಕ ಮತ್ತೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಸೆಲ್ವಕುಮಾರ್ ಬಂದಿದ್ದಾನೆ. ಈ ವೇಳೆಯೂ ಆಕೆಗೆ ಒಪ್ಪದ ಕಾರಣ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ಹೋಗಿ ತನ್ನ ಕೈಲಿದ್ದ ಕೊಡಲಿಯಿಂದ ಸೆಲ್ವಕುಮಾರ್ ಝಾನ್ಸಿ ಮೇಲೆ ದಾಳಿ ಮಾಡಿದ್ದಾನೆ. ಕುತ್ತಿಗೆ ಮತ್ತು ಹೊಟ್ಟೆ ಭಾಗವನ್ನು ಕಡಿದಿದ್ದಾನೆ. ಪರಿಣಾಮ ಝಾನ್ಸಿ ಮೃತಪಟ್ಟಿದ್ದು, ಸ್ಥಳದಿಂದ ಸೆಲ್ವಕುಮಾರ್ ಎಸ್ಕೇಪ್ ಆಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಗಳನ್ನು ಕೊಂದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಝಾನ್ಸಿ ಕುಟುಂಬ ಆಗ್ರಹಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



