ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಬೇಟೆ: ವಿಜಯಪುರದ ಅಂಧ ಬಾಲಕನಿಂದ ಸಾಧನೆ

ಅಮೋಘ ತಂಗಡಿ ಎಂಬ ಅಂಧ ಬಾಲಕನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾನೆ. ಬಡತನ ಮತ್ತು ಅಂಧತ್ವದ ಹೊರತಾಗಿಯೂ ತನ್ನ ಛಲದಿಂದ ಅಮೋಘ ಈ ಸಾಧನೆಯನ್ನು ಮಾಡಿದ್ದಾನೆ. ಅವನ ಪೋಷಕರು ಮತ್ತು ಶಿಕ್ಷಕರ ಬೆಂಬಲ ಅವನ ಯಶಸ್ಸಿಗೆ ಕಾರಣವಾಗಿದೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಬೇಟೆ: ವಿಜಯಪುರದ ಅಂಧ ಬಾಲಕನಿಂದ ಸಾಧನೆ
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಬೇಟೆ: ವಿಜಯಪುರದ ಅಂಧ ಬಾಲಕನಿಂದ ಸಾಧನೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2024 | 7:27 PM

ವಿಜಯಪುರ, ನವೆಂಬರ್​ 13: ಸಾಧನೆ ಮಾಡುವುದಕ್ಕೆ ಯಾವುದೂ ಅಡ್ಡಿಯಿಲ್ಲ. ಸಾಧಿಸುವ ಛಲವೇ ಸಾಧನೆಯ ಮೂಲಮಂತ್ರ. ಕಡು ಬಡತನ, ವರ್ಣ, ಜಾತಿ, ವಿಕಲತೆ ಎಷ್ಟೇ ಅಡ್ಡಿಯಾದರೂ ಸಾಧನೆ ಮಾಡಬೇಕೆಂದು ದೃಢ ಸಂಕಲ್ಪ ಇದ್ದರೆ ಕಠಿಣ ಶ್ರಮ ಪಟ್ಟರೆ, ಯಾರೂ ಸಾಧನೆಗೆ ಅಡ್ಡಿಯಾಗಲಾರದು. ಎರಡು ಕಣ್ಣುಗಳು ಇಲ್ಲದಿದ್ದರೂ ಈಜಿನಲ್ಲಿ (Swimming) ಸಾಧನೆ ಮಾಡಿದ ಬಾಲಕನೇ ಈ ಮಾತಿಗೆ ನಿದರ್ಶನವಾಗಿದ್ಧಾನೆ. ಹುಟ್ಟಿನಿಂದಲೇ ದೃಷ್ಟಿ ಭಾಗ್ಯ ಕಳೆದುಕೊಂಡಿರುವ ಬಾಲಕ ಇದೀಗ ಕಣ್ಣಿದ್ದವರೂ ನಾಚುವಂತಹ ಸಾಧನೆ ಮಾಡಿದ್ದಾನೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾನೆ.

ಕಣ್ಣು ಕಾಣದಿದ್ದರೆ ಜಗತ್ತೇ ಕತ್ತಲು ಎಂದು ಕೊರಗುವ ಜನರು ಅಧಿಕ. ಇನ್ನು ಕಣ್ಣಿಲ್ಲದವರಿಗೆ ಕನಿಕರ ತೋರುವುದು ಎಲ್ಲೆಡೆ ಕಾಣುತ್ತೇವೆ. ಯಾವುದೇ ಕೆಲಸ ಕಾರ್ಯಗಳಿಂದ ಅವರನ್ನು ದೂರವಿಡಲಾಗುತ್ತದೆ. ಒಂದು ರೀತಿಯಲ್ಲಿ ಅಂಧತ್ವ ಹೊಂದಿರುವವರನ್ನ ದೂರವೇ ಸರಿಸಲಾಗುತ್ತದೆ. ಇದಕ್ಕೆ ಅಪವಾದವೆಂಬಂತೆ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸಂಜೀವ ತಂಡಗಿ ಎಂಬುವವರು ತಮ್ಮ ಇಬ್ಬರು ಮಕ್ಕಳು ಜನ್ಮತಃ ಕಣ್ಣಿಲ್ಲದಿದ್ದರೂ ಅವರನ್ನು ನಗರದ ಅಂಧರ ಶಾಲೆಗೆಯಲ್ಲಿ 1 ರಿಂದ 4 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ.

ಬಳಿಕ 5 ನೇ ತರಗತಿಯಿಂದ ಮುಂದಿನ ವಿದ್ಯಾಬ್ಯಾಸಕ್ಕೆ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಸೇರಿಸಿದ್ದಾರೆ. ಶಾಲೆಯಲ್ಲಿ ಇತರೆ ಹಿರಿಯ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸುರೇಶ ಹಾಗೂ ಮಲ್ಲಪ್ಪ ಎಂಬುವವರು ತರಬೇತಿ ನೀಡುವಾಗ ಅಮೋಘ ಸಹ ನಾನೂ ಈಜು ಕಲಿಯುವೆ ಎಂದು ದುಂಬಾಲು ಬಿದ್ದ. ಅಮೋಘನಿಗೆ ಮಲ್ಲಪ್ಪ ಹಾಗೂ ಸುರೇಶ ಎಂಬ ಶಿಕ್ಷಕರು ಈಜು ಕಲಿಸುತ್ತಿರೋವಾಗ ಆತ ಶ್ರದ್ಧೆ ಹಾಗೂ ಈಜಿನ ವೇಗವನ್ನು ಗಮನಿಸಿ ಕ್ರೀಡಾಕೂಟದಲ್ಲಿ ಅವಕಾಶ ನೀಡಿದ್ದಾರೆ.

3 ಚಿನ್ನದ ಪದಕ ಪಡೆದು ಸಾಧನೆ

ಬಳಿಕ ಜಿಲ್ಲಾ ಮಟ್ಟದ ಅಂಧರ ಈಜು ಸ್ಪರ್ಧೆಯಲ್ಲಿ ಅಮೋಘ ಉತ್ತಮ ಸಾಧನೆ ಮಾಡಿದ್ದಾನೆ. ಇದರಿಂದ ರಾಜ್ಯ ಮಟ್ಟದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ರಾಜ್ಯ ಮಟ್ಟದ ಅಂಧ ಮಕ್ಕಳ 14 ವರ್ಷದೊಳಗಿನ ಈಜು ಸ್ಪರ್ಧೆಯಲ್ಲಿ ಅಮೋಘ 3 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ. ನಂತರ ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ರಾಷ್ಟ್ರ ಮಟ್ಟದಲ್ಲಿ 2 ಚಿನ್ನ ಹಾಗೂ 1 ಕಂಚಿನ ಪದ ಪಡೆದು ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ ಅಂಧ ಬಾಲಕ ಅಮೋಘ ತಂಗಡಿ. 50 ಮೀಟರ್ ಫ್ರೀಸ್ಟೈಲ್, 100 ಮೀಟರ್ ಫ್ರೀಸ್ಟೈಲ್, 50 ಮೀಟರ್ ಬ್ಯಾಕ್ ಸ್ಟ್ರೋಕ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೆದ್ದು ಬೀಗಿದ್ದಾನೆ.

ಅಂಧತ್ವ ಶಾಪವಲ್ಲ, ಅದನ್ನೂ ಮೀರಿ ನಾವು ಸಾಧನೆ ಮಾಡಬೇಕು. ಅಂಧರಷ್ಟೇಯಲ್ಲಾ ಇತರೆ ವಿಲಕಚೇತನರಿಗೆ ಅನುಕಂಪದ ಬದಲಾಗಿ, ಬೆಂಬಲ ನೀಡಿದರೆ ಅವರಿಂದಲೂ ಸಾಧನೆ ಆಗುತ್ತದೆ. ಕಣ್ಣು ಕಾಣಿಸಲ್ಲ ಎಂದು ಸುಮ್ಮನೇ ಕೂಡದೇ ಸಾಧಕರಾಗಬೇಕು. ಅಂಧತ್ವ ಎಂಬುದು ಕುರುಡಲ್ಲ ಸಾಧನೆಗೆ ಪ್ರೇರಣೆ ಎಂದು ನನಗೆ ಅನಿಸಿದೆ ಎಂದು ಬಾಲಕ ಅಮೋಘ ತಂಗಡಿ ಹೇಳುತ್ತಾನೆ.

ಕುಟುಂಬಕ್ಕೆ ಸಂತಸ ತಂದ ಮಗ

ಇನ್ನು ಸಾಧಕ ಅಮೋಘ ತಂಡಗಿ ಓರ್ವ ಸಹೋದರನೂ ಅಂಧತ್ವವನ್ನು ಹೊಂದಿದ್ದಾನೆ. ಅಮೋಘನ ಪೋಷಕರು ಸಿರಿವಂತರಲ್ಲ. ಇಟ್ಟಂಗಿಹಾಳ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದು ಜಮೀನಿನಲ್ಲೇ ಕೆಲಸ ಮಾಡಿ ಕಡು ಬಡತನದಲ್ಲೇ ಜೀವನ ಮಾಡುತ್ತಿದ್ದಾರೆ. ಕೃಷಿ ಕಾಯಕ ಮಾಡುತ್ತಲೇ ಬಡತನದಲ್ಲೇ ಇಬ್ಬರು ಅಂಧ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ. ಇದರ ಮಧ್ಯೆ ಅಮೋಘ ಈಜಿನಲ್ಲಿ ಸಾಧನೆ ಮಾಡಿದ್ದು ಇಡೀ ಕುಟುಂಬಕ್ಕೆ ಸಂತಸ ತಂದಿದೆ.

ಇದನ್ನೂ ಓದಿ: ಸರಳ ಮದುವೆ: ಉಳಿದ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ ನವಜೋಡಿ

ಅಂಧತ್ವ ಶಾಪವೆಂದು ಹಳಹಳಿಸುತ್ತಿದ್ದೇವು. ಅನಿವಾರ್ಯವಾಗಿ ಮಕ್ಕಳನ್ನು ಬೆಳಗಾವಿಯಲ್ಲಿ ಬಿಟ್ಟಿದ್ದೇನೆ. ಈಗ ಸಾಧನೆ ಮಾಡಿದ ನಮ್ಮ ಮಗ ಅಂತಾರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಲಿ ಎಂಬ ಆಶಯವನ್ನು ಬಾಲಕನ ತಂದೆ ಸಂಜೀವ ತಂಡಗಿ ವ್ಯಕ್ತಪಡಿದ್ದಾರೆ. ಇನ್ನು ಕಡು ಬಡತನದಲ್ಲೇ ಇರೋ ಅಂಧ ಬಾಲಕ ಅಮೋಘನಿಗೆ ಇದೀಗ ನೆರವು ಬೇಕಿದೆ. ರಾಷ್ಟ್ರ ಮಟ್ಟದ ವಿಲಕಚೇತನರ ಕ್ರೀಡಾಕೂಟದಲ್ಲಿ ಪದಕಗಳ ಬೇಟೆಯಾಡಿರುವ ಅಂಧ ಬಾಲಕ ಅಮೋಘನಿಗೆ ಸಂಘ ಸಂಸ್ಥೆಯವರು ದತ್ತು ಪಡೆದುಕೊಂಡು ಸಹಾಯ ಮಾಡಿದರೆ ಅಂತಾರಾಷ್ಟ್ರ ಮಟ್ಟದಲ್ಲೂ ದೇಶದ ರಾಜ್ಯದ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸುತ್ತಾನೆ. ಈತನಿಗೆ ಸೂಕ್ತ ತರಬೇತಿ ನೀಡಲು ಪ್ರಾಯೋಜಕತ್ವ ನೀಡಿ ಸಹಾಯ ಮಾಡಿದರೆ ಅಂಧ ಪ್ರತಿಭೆ ಕ್ರೀಡಾಲೋಕದಲ್ಲಿ ಬೆಳಗುತ್ತದೆ ಎಂಬುದು ಸ್ಥಳಿಯರ ಕಳಕಳಿಯಾಗಿದೆ.

ಕುರುಡುತನ ಆಗಿದೆ ಎಂದು ಬಾಲಕ ಅಮೋಘ ಮನೆ ಹಿಡಿದು ಕೂಡಲಿಲ್ಲ. ಪೋಕಷರು ಸಹ ಆತನ ಬೆನ್ನುಲುವಾಗಿ ನಿಂತು ಆತನಿಗೆ ಶಿಕ್ಷಣ ಕೊಡಿಸಿದ್ದಾರೆ. ಅಂಧತ್ವ ಮನೆಯಲ್ಲಿನ ಬಡತನ ಬಾಲಕನ ಸಾಧನೆಗೆ ಪ್ರೇರಣೆಯಾಗಿದೆ. ಈಗ ಈ ಬಾಲಕನಿಗೆ ಉತ್ತಮ ತರಬೇತಿ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:24 pm, Wed, 13 November 24