ಮೋದಿ ವಿದೇಶದಿಂದ ಹಿಂದಿರುಗಿದ ನಂತರ ಕರ್ನಾಟಕದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ: ಬಸನಗೌಡ ಯತ್ನಾಳ
ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಇನ್ನು ಎರಡು ದಿನಗಳಲ್ಲಿ ಮೋದಿ ವಿದೇಶ ಪ್ರವಾಸದಿಂದ ಹಿಂದಿರುಗಲಿದ್ದಾರೆ. ಅನಂತರ ಸಿಎಂ ಬದಲಾವಣೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಈಗಾಗಲೇ ಪಕ್ಷದ ಹೈಕಮಾಂಡ್ ಅಗತ್ಯ ಮಾಹಿತಿ ಪಡೆದುಕೊಂಡಿದೆ. ದೆಹಲಿಯಲ್ಲಿ ಹೈಪವರ್ ಮೀಟಿಂಗ್ ಆಗಿದೆ. ಸಂದೇಶ ಏನಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು. ನರೇಂದ್ರ ಮೋದಿ ಅವರು ಪಕ್ಷದ ದೃಷ್ಟಿಯಿಂದ ಮೋದಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕದ ದೃಷ್ಟಿಯಿಂದ ಮೋದಿ ಅವರು ಒಳ್ಳೆಯ ನಿರ್ಣಯವನ್ನೇ ತೆಗೆದುಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಕ್ಕೆ ಚುನಾವಣಾ ಸಿದ್ಧತೆಗಾಗಿ ಅಮಿತ್ ಶಾ ಅವರು ಭೇಟಿ ನೀಡಿದ್ದಾರೆ. ವರಿಷ್ಠರ ಸಭೆ ನಡೆಸಿ, ಮುಂದಿನ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ, ಕೇಳಿ ಬಂದಿರುವ ಆರೋಪಗಳು ಮತ್ತು ಇತ್ತೀಚಿನ ಬೆಳವಣಿಗೆಗಳಿಂದ ಪಕ್ಷಕ್ಕೆ ಹಿನ್ನಡೆಯಾಗದಂತೆ ಯಾವ ಕ್ರಮ ಕೈಗೊಳ್ಳಬಹುದು ಎಂದು ಚಿಂತನೆ ನಡೆಸಲು ವರಿಷ್ಠರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು. ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ಮೇ 10ರ ಒಳಗೆ ಪಕ್ಷವು ಅಗತ್ಯ ನಿರ್ಧಾರ ತೆಗೆದುಕೊಳ್ಳಬಹುದು. ಪ್ರಧಾನಿ ವಿದೇಶ ಪ್ರವಾಸ ಮುಗಿಸಿ ಬಂದ ಎರಡೇ ದಿನಗಳಲ್ಲಿ ಈ ಬಗ್ಗೆ ಪಕ್ಷದ ನಿರ್ಧಾರ ಪ್ರಕಟವಾಗಬಹುದು ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬಗ್ಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಭಯವಿದೆ. ಬೇರೋಬ್ಬರು ಸಿಎಂ ಆದರೆ ಜೈಲಿಗೆ ಹೋಗಬೇಕಾದೀತು ಎಂದು ಹೆದರಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಒಬ್ಬ ಯಡಿಯೂರಪ್ಪ, ಒಬ್ಬ ಜಗದೀಶ್ ಶೆಟ್ಟರ್ ಅಥವಾ ಒಬ್ಬ ಯತ್ನಾಳ್ ಬಿಜೆಪಿಯನ್ನು ಗೆಲ್ಲಿಸಲು ಆಗುವುದಿಲ್ಲ. ನಾವೆಲ್ಲರೂ ಸೇರಿ 150 ಸೀಟ್ ಗೆಲ್ಲಿಸಬೇಕಿದೆ. ನಾನೇ ಪಕ್ಷ ಅಧಿಕಾರಕ್ಕೆ ತರ್ತೀನಿ, ನೀನೇ ತರ್ತೀಯಾ ಎಂದರೆ ಆಗುವುದಿಲ್ಲ. ನನ್ನಿಂದಲೇ ಎಲ್ಲ, ನನ್ನಿಂದ ಸೂರ್ಯೋದಯ ಆಗುತ್ತೆ ಎನ್ನುವುದನ್ನು ತಲೆಯಿಂದ ತೆಗೆಯಬೇಕು. ಈ ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪ ಕೂಡ ಇರ್ತಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರ ಸೋದರ ಪಾಲ್ಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಇದ್ದರೂ ಮುಲಾಜಿಲ್ಲದೆ ತನಿಖೆ ಆಗಬೇಕು. ನಮ್ಮ ಸರ್ಕಾರದಿಂದಲೇ ಈ ಪ್ರಕರಣ ಹೊರಗೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಚಿವರ ಸಹೋದರನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಾರೆ. ಸಚಿವ ಅಶ್ವತ್ಥ್ ನಾರಾಯಣ ಅವರ ಸಹೋದರನ ಪಾತ್ರ ಇದ್ದರೆ ಅವರ ವಿರುದ್ಧ ಪಕ್ಷವು ಸೂಕ್ತ ಕ್ರಮ ಜರುಗಿಸಲಿದೆ ಎಂದರು.
ನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲೂ ಹಾಲಿ ಶಾಸಕ ಸಂಸದ ಮಧ್ಯೆ ಭಿನ್ನಮತ ಮತ್ತೆ ಬಹಿರಂಗಗೊಂಡಿತು. ಬಿಜೆಪಿ ಹಾಲಿ ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಪ್ರತ್ಯೇಕವಾಗಿ ಬಸವ ಮೂರ್ತಿಗೆ ಪೂಜೆ, ಮಾಲಾರ್ಪಣೆ ಮಾಡಿದರು. ಮೊದಲು ಸಂಸದ ರಮೇಶ ಜಿಗಜಿಣಗಿ,ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಡಿಸಿ ಮತ್ತು ಎಸ್ಪಿ ಬಸವ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಸಂಸದ ರಮೇಶ ಜಿಗಜಿಣಗಿ ತೆರಳಿದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿ ಬಸವ ಮೂರ್ತಿಗೆ ಪೂಜೆ, ಮಾಲಾರ್ಪಣೆ ಸಲ್ಲಿಸಿದರು.
ಇದನ್ನೂ ಓದಿ: ಜಮೀರ್ ಸರ್ಕಾರ-ವಿರೋಧಿ ಚಟುವಟಿಕೆ ಮಾಡ್ತಾನ, ಒದ್ದು ಒಳಗ ಹಾಕ್ರಲಾ! ಎಂದರು ಬಸನಗೌಡ ಪಾಟೀಲ ಯತ್ನಾಳ್
ಇದನ್ನೂ ಓದಿ: ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ
Published On - 11:05 am, Tue, 3 May 22