ಬರ ಘೋಷಣೆ ವಿಚಾರದಲ್ಲಿ ಸಚಿವ-ಕಾಂಗ್ರೆಸ್ ಶಾಸಕರ ಮಧ್ಯೆ ಲೆಟರ್ ವಾರ್: ಇಲ್ಲಿದೆ ಮಾಹಿತಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ಬರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ. ಪಾಟೀಲ್ ಹಾಗೂ ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಸಿ.ಎಸ್. ನಾಡಗೌಡ ನಡುವೆ ತೀವ್ರ ಪತ್ರ ಸಮರ ನಡೆದಿದೆ. ಉಭಯ ನಾಯಕರೂ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದು ರಾಜಕೀಯ ನಿವೃತ್ತಿಯ ಸವಾಲ್ ಬಗ್ಗೆಯೂ ಪ್ರಸ್ತಾಪ ನಡೆದಿದೆ.

ವಿಜಯಪುರ, ಸೆಪ್ಟೆಂಬರ್ 07: ಬರ ಘೋಷಣೆ ವಿಚಾರದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮತ್ತು ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಸಿ.ಎಸ್. ನಾಡಗೌಡ ಮಧ್ಯೆ ತೀವ್ರ ಜಟಾಪಟಿ ನಡೆದಿದೆ. ಮುದ್ದೇಬಿಹಾಳ, ತಾಳಿಕೋಟೆ ಹೆಸರು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇಲ್ಲದಿರುವುದಕ್ಕೆ ಕಾರಣ ಎಂ.ಬಿ. ಪಾಟೀಲ್ ಎಂದು ಶಾಸಕ ನಾಡಗೌಡ ಗಂಭೀರ ಅರೋಪ ಮಾಡಿದ್ದರು. ಸ್ವಪಕ್ಷ ಶಾಸಕರ ಹೇಳಿಕೆ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಪ್ರಕಟಣೆ ಬಿಡುಗಡೆ ಮಾಡಿದ್ದು, ಎಲ್ಲ ತಾಲೂಕುಗಳನ್ನ ಬರ ಪೀಡಿತ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ವಿನಾಕಾರಣ ಆರೋಪ ಸರಿ ಅಲ್ಲ ಎಂದು ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
‘ನನ್ನ ಸಹನೆ ದೌರ್ಬಲ್ಯ ಎಂದು ಕೆಲವರು ತಿಳಿದಿದ್ದಾರೆ’
ನಾನು ಇವರ ಕ್ಷೇತ್ರಗಳಿಗೆ ಬರ ಅಧ್ಯಯನಕ್ಕೆ ಹೋದಾಗ, ನಾನು ಬೆಂಗಳೂರು, ದೆಹಲಿಯಲ್ಲಿದ್ದೇನೆ ಎಂದು ಸಬೂಬು ಹೇಳಿದ್ದಾರೆ. ತಮಗೆ ಅನ್ಯಾಯವಾಗಿದ್ದರೆ ಕಂದಾಯ ಸಚಿವರನ್ನ, ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಚರ್ಚಿಸಬಹುದಿತ್ತು. ಆದರೆ ಕ್ಷೇತ್ರದ ಜನರನ್ನ ವಂಚಿಸಲು ನಾಟಕ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ನಾಡಗೌಡ ವಿರುದ್ಧ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಇತ್ತೀಚಿನ ದಿನಗಳಲ್ಲಿ ಸರಕಾರದ ವಿರುದ್ಧ, ಹೈಕಮಾಂಡ ವಿರುದ್ಧ ಮತ್ತು ನನ್ನ ವಿರುದ್ಧ ಅತೀ ನೀಚ ಮಟ್ಟದ ಹೇಳಿಕೆಗಳನ್ನು ಸತತವಾಗಿ ನೀಡುತ್ತಿದ್ದಾರೆ. ಈ ಕುರಿತು ಹೈಕಮಾಂಡ್ ನನಗೆ ಸಹನೆಯಿಂದ ಇರಲು ಸೂಚನೆ ನೀಡಿದೆ. ಆದರೆ, ನನ್ನ ಸಹನೆ ದೌರ್ಬಲ್ಯ ಎಂದು ಕೆಲವರು ತಿಳಿದಿದ್ದಾರೆ. ಮುದ್ದೇಬಿಹಾಳ ಶಾಸಕರು ವಯೋಸಹಜವಾಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ಅವಶ್ಯಕತೆ ಇದ್ದು, ಇಂತಹ ನೀಚತನದ ಹೇಳಿಕೆಗಳು ಮುಂದುವರಿದರೆ, ಇವರ ಮಾನಸಿಕ ಕಾಯಿಲೆಗೆ ಚಿಕಿತ್ಸೆಯೇ ಮದ್ದು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 122 ತಾಲೂಕುಗಳಲ್ಲಿ ಮೂರು ವಾರಗಳಿಂದಿಲ್ಲ ಮಳೆ: ರಾಜ್ಯದಲ್ಲಿ ಶೇ.50ರಷ್ಟು ಬೆಳೆ ನಷ್ಟ ಸಾಧ್ಯತೆ
‘ಅನ್ನದಾತ ಸಂಕಟದಲ್ಲಿರುವ ಸಮಯದಲ್ಲೂ ಮೌನ ಎಷ್ಟು ಸರಿ?’

ನಾಯಕರ ಲೆಟರ್ ವಾರ್
ಎಂ.ಬಿ. ಪಾಟೀಲ್ ಅವರ ಈ ಹೇಳಿಕೆ ಮತ್ತೆ ಕೌಂಟರ್ ಕೊಟ್ಟಿರುವ ಶಾಸಕ ನಾಡಗೌಡ, ನಿಯಮಾನುಸಾರ ಬರಪಟ್ಟಿಯಲ್ಲಿ ನಮ್ಮ ಮತಕ್ಷೇತ್ರದ ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳನ್ನು ಸೇರಿಸುವುದು ಜಿಲ್ಲಾ ಮಂತ್ರಿಗಳ ಕರ್ತವ್ಯ. ವಿಜಯಪುರ ಜಿಲ್ಲೆಯ ರಾಜಕಾಣರದ ಬಗ್ಗೆ ತಿಳಿದಿರುವವರಿಗೆಲ್ಲ ನಿಮ್ಮ ಷಡ್ಯಂತರ ಬಗ್ಗೆ ಗೊತ್ತಿರುವುದು ಹೊಸದೇನಲ್ಲ. ಹೈಕಮಾಂಡ್ ಕೂಡ ನಮಗೆ ಸಹನೆ ಕಾಯ್ದುಕೊಳ್ಳಲು ತಿಳಿಹೇಳಿದ್ದರಿಂದ ರಾಜಕೀಯ ವಿಷಯದಲ್ಲಿ ನಾವೆಲ್ಲರೂ ತಾಳ್ಮೆಯಿಂದ ಇದ್ದೇವೆ. ಆದರೆ ಭೀಕರ ಬರಗಾಲ ಬಂದು ನನ್ನ ಕ್ಷೇತ್ರದ ಅನ್ನದಾತ ಸಂಕಟದಲ್ಲಿರುವ ಸಮಯದಲ್ಲೂ ಕೂಡ ನಾನು ಮೌನವಾಗಿದ್ದರೆ ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ವರಿಷ್ಠರು ದೆಹಲಿಗೆ ಆಗಮಿಸುವಂತೆ ಕರೆ ಮಾಡಿ ತಿಳಿಸಿದ್ದರಿಂದಾಗಿ ಆಗಸ್ಟ್ 5ರಂದು ಸಾಯಂಕಾಲ 5 ಗಂಟೆಗೆ ಬೆಂಗಳೂರಿಂದ ದೆಹಲಿಗೆ ಪ್ರಯಾಣ ಬೆಳಿಸಿ ನಂತರ ಆಗಸ್ಟ್ 7ರ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳಸಿ ಮರಳಿದ್ದೇನೆ. ಆ ಬಳಿಕ ನನ್ನ ಸ್ವ ಕ್ಷೇತ್ರ ಮುದ್ದೇಬಿಹಾಳದಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶಿಲನೆ ನಡೆಸಿ ಬರಗಾಲದ ಕುರಿತು ಮಾಹಿತಿ ಕಲೆ ಹಾಕಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ತಿಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಹಾಗೂ ವರಿಷ್ಠರ ವಿರುದ್ಧ ಹೇಳಿಕೆಯನ್ನು ನೀಡುತ್ತಿರುವ ಬಗ್ಗೆ ತಮ್ಮ ಪತ್ರದಲ್ಲಿ ಉಲ್ಲಖಿಸಿದ್ದೀರಿ. ನಮ್ಮ ಕಾಂಗ್ರೆಸ್ ಸರಕಾರದ ವಿರುದ್ಧ ಹಾಗೂ ಹೈಕಮಾಂಡ್ ವಿರುದ್ಧ ಒಂದೇ ಒಂದು ಕೀಳುಮಟ್ಟದ ಹಾಗೂ ಪಕ್ಷಕ್ಕೆ, ಸರಕಾರಕ್ಕೆ ಮುಜುಗರವನ್ನುಂಟು ಮಾಡುವ ಹೇಳಿಕೆ ನೀಡಿದ್ದು ಸಾಬೀತು ಪಡಿಸಿದರೆ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ತಮ್ಮ ಮೇಲೆ ಪಕ್ಷ ವಿರೋಧಿ ಚಟುವಟಿಕೆಗಳು ಸಾಬೀತಾದರೇ ತಾವು ರಾಜಕೀಯವಾಗಿ ನಿವೃತ್ತಿ ಹೊಂದಲು ಸಿದ್ಧರಿದ್ದೀರಾ ಎಂದು ಅವರು ಸಚಿವರನ್ನು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




