
ವಿಜಯಪುರ, ಅಕ್ಟೋಬರ್ 13: ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸುವ ಹಿಂದಿನ ದಿನ ಮಧ್ಯರಾತ್ರಿವರೆಗೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಅಹಿಂದ ನಾಯಕ ನೀವೇ, ದೊಡ್ಡ ನಾಯಕ ಎಂದು ರಾಹುಲ್ ಹೇಳಿದ್ದಾರೆ. ಆದರೆ ಆ ಬಳಿಕ ಪ್ರಿಯಾಂಕಾ ಗಾಂಧಿ, ಸೋನಿಯಾ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೂ ಸಿಡಿ ತೋರಿಸಿ ರಾಜೀನಾಮೆ ನೀಡುವಂತೆ ಹೇಳಿದ್ದರಂತೆ. ಇಂತಹ ಕೆಲಸ ಮಾಡಿದವರನ್ನು ಯಾವುದೇ ದೊಡ್ಡ ಹುದ್ದೆಯಲ್ಲಿದ್ದರೂ ಪದಚ್ಯುತಿ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.
ಸತೀಶ್ ಜಾರಕಿಹೊಳಿಯವರನ್ನೂ ಅದೇ ಟೀಂ ಇಡಿಗೆ ಸಿಲುಕಿಸಿದೆ. ಸಿಎಂ ಸ್ಟಿಂಗ್ ಬಗ್ಗೆ ಹುಷಾರಾಗಿರಬೇಕೆಂದು ಹೇಳುತ್ತಾರೆ. ಹಾಗಾದ್ರೆ ಸ್ಟಿಂಗ್ ಆಪರೇಷನ್ ಮಾಡಿದ್ದು ಸಿಎಂಗೆ ಹೇಗೆ ಗೊತ್ತಾಯ್ತು? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಳಿ ಬಹಳ ಮಾಹಿತಿಯಿದೆ. ಅವರು ಯಾವ ಹೋಟೆಲ್ನಲ್ಲಿದ್ದರು, ಎಲ್ಲಿ ಊಟ ಮಾಡಿದರು, ಎಷ್ಟು ಹಣ ಕೊಟ್ಟರು ಸೇರಿ ಎಲ್ಲ ಹೆಚ್ಡಿಕೆ ಬಳಿಯಿವೆ. ಅದನ್ನೆಲ್ಲಾ ಹಿಡಿದು ಬಿಟ್ಟು ಮಾಡುವ ಬದಲು ಬಹಿರಂಗ ಮಾಡಬೇಕು. ದೊಡ್ಡ ಸ್ಕ್ರೀನ್ನಲ್ಲಿ ಹಾಕಿ ಜನರಿಗೆ ತೋರಿಸಬೇಕು. ಆಗ ಎಷ್ಟು ಹಲ್ಕಾ ಕೆಲಸ ಮಾಡುತ್ತಾರೆಂದು ಜನರಿಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಮಿಷನರ್ಗೆ ದೂರು, ಕೋರ್ಟ್ಗೆ ಅರ್ಜಿ: ಸ್ಟಿಂಗ್ ಆಪರೇಷನ್ ಬಗ್ಗೆ ಸ್ಫೋಟಕ ಸಂಗತಿಗಳೊಂದಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಒಳ್ಳೆಯ ಹೆಸರು ಇಟ್ಟುಕೊಂಡಿದ್ದ ನಾಯಕ. ಆದರೆ ಅವರ ಹೆಸರನ್ನು ಪುತ್ರ ಯತೀಂದ್ರ ಹಾಳುಗೆಡವಿದ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಲ್ಲರ ಬಳಿ ಯತೀಂದ್ರ ಹಣ ವಸೂಲಿ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮದೇ ಹಾಲುಮತ ಸಮಾಜಕ್ಕೆ ಏನೂ ಮಾಡಲಿಲ್ಲ. ಹಿಂದೂಗಳಿಗೆ ಏನೂ ಕೊಡದೆ, ಕೇವಲ ಮುಸ್ಲಿಮರಿಗೆ ಯೋಜನೆ ಹಾಗೂ ಅನುದಾನ ನೀಡಿದರು. ಹೀಗಿದ್ದರೂ ಕಷ್ಟಕಾಲದಲ್ಲಿ ಸಿದ್ದರಾಮಯ್ಯ ಬೆನ್ನಿಗೆ ಮುಸ್ಲಿಂ ಸಮಾಜ ನಿಲ್ಲಲಿಲ್ಲ. ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆಯನ್ನು ಪಾಲಿಕೆಯ ವಾಹನದಲ್ಲಿ ಸಾಗಿಸಿ ಅವಮಾನ ಮಾಡಿದ್ದಾರೆ. ಎಲ್ಲರ ಭ್ರಷ್ಟಾಚಾರದ ದಾಖಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯಿದೆ. ಅವೆಲ್ಲವೂ ಹೊರಗೆ ತರಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:26 pm, Tue, 13 October 26