433 ರೈತರಿಗೆ ನೋಟಿಸ್: ವಕ್ಫ್ ಆಸ್ತಿ ವಿವಾದಕ್ಕೆ ತೆರೆ ಎಳೆದ ಸಚಿವ ಎಂಬಿ ಪಾಟೀಲ್
Vijayapura Waqf Raw: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಇಂದು (ಅ.24) ಸುದ್ದಿಗೋಷ್ಠಿ ನಡೆಸಿ ತೆರೆ ಎಳೆದಿದ್ದಾರೆ.
ವಿಜಯಪುರ, ಅಕ್ಟೋಬರ್ 27: ವಿಜಯಪುರ (Vijayapura) ಜಿಲ್ಲೆಯಲ್ಲಿ ಒಟ್ಟು 14,201 ಎಕರೆ ಜಮೀನು ವಕ್ಫ್ ಮಂಡಳಿಗೆ ಸೇರಿದೆ. ಈ 14,201 ಎಕರೆಯಲ್ಲಿ ಶೇ70 ರಷ್ಟು ಆಸ್ತಿ ಮುಸ್ಲಿಮರಿಗೆ ಸೇರಿದೆ. ಉಳಿದ ಶೇ30ರಷ್ಟು ಜಾಗ ಹಿಂದೂಗಳಿಗೆ ಮಾರಾಟವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil) ತಿಳಿಸಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್ ಆಸ್ತಿಗಳ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ಈ ವಿಚಾರ ರಾಷ್ಟ್ರೀಯ ಮಾಧ್ಯಮಗಳು ಬರುತ್ತಿದೆ ಎಂದರು.
ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್ಗೆ ಸೇರಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ, ಇದು ಸುಳ್ಳು ಸುದ್ದಿ. ಹೊನವಾಡ ಗ್ರಾಮದ ಯಾವುದೇ ರೈತನಿಗೆ ನೋಟಿಸ್ ನೀಡಿಲ್ಲ. ಹೊನವಾಡ ಗ್ರಾಮದ ಜಮೀನಿನಗಳು 1974ರಲ್ಲಿ ವಕ್ಫ್ ಗೆಜೆಟ್ನಲ್ಲಿ ತಪ್ಪಾಗಿ ನಮೂದಿಸಲಾಗಿದೆ. 1977ರಲ್ಲಿ ಈ ತಪ್ಪನ್ನು ವಕ್ಫ್ ಮಂಡಳಿ ಸರಿಪಡಿಸಿದೆ. ಹೊನವಾಡ ಗ್ರಾಮದ 10 ರಿಂದ 11 ಎಕರೆ ಮಾತ್ರ ವಕ್ಫ್ಗೆ ಸೇರಿದೆ. ಉಳಿದ ಜಮೀನು ಹೊನವಾಡ ಗ್ರಾಮದ ರೈತರಿಗೆ ಸೇರಿದೆ. ಗೆಜೆಟ್ ನೋಟಿಫಿಕೇಷನ್ನಿಂದ ಗೊಂದಲ ಸೃಷ್ಟಿಯಾಗಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ: ವಕ್ಫ್ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್ ಆರೋಪ
ಜಿಲ್ಲೆಯಲ್ಲಿ 433 ರೈತರಿಗೆ ನೋಟಿಸ್ ನೀಡಲಾಗಿದೆ. ಇಂಡಿ ತಹಶಿಲ್ದಾರ್ ನೋಟಿಸ್ ನೀಡದೆ ಸರ್ವೆ ನಂಬರ್ನಲ್ಲಿ 41ರಲ್ಲಿ ಇಂದೀಕರಣ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಯರಗಲ್ ಗ್ರಾಮದಲ್ಲಿ ಸರ್ವೆ ನಂಬರ್ 138ನಲ್ಲಿ 13 ಎಕರೆ ಜಮೀನನ್ನು 1974ರಲ್ಲಿ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿತ್ತು. ಆದರೆ, 1977ರಲ್ಲಿ ವಕ್ಫ್ ಮಂಡಳಿಯವರು ಇದನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದರು.
ಅಧಿಕಾರಿಗಳ ಎಡವಟ್ಟಿನಿಂದ ಸಿಂದಗಿಯ ಗುರುಲಿಂಗ ವಿರಕ್ತಮಠಕ್ಕೆ ನೋಟಿಸ್ ನೀಡಲಾಗಿತ್ತು. ಸರ್ವೆ ನಂಬರ್ 1020 ಬದಲಿಗೆ ಸರ್ವೆ ನಂಬರ್ 1029 ಅಂತ ಗೆಜೆಟ್ ನೋಟಿಫಿಕೇಶನ್ ಮಾಡಲಾಗಿತ್ತು. ಸರ್ವೆ ನಂಬರ್ 1029 ವಕ್ಫ್ಗೆ ಸೇರಿದ್ದ ಆಸ್ತಿಯಾಗಿದೆ. ಹೀಗಾಗಿ ಮಠಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ, ಈಗ ತಹಶೀಲ್ದಾರ್ ಸರಿ ಮಾಡಿದ್ದಾರೆ. ಸರ್ವೆ ನಂಬರ್ 1020ರಲ್ಲಿರುವ 1 ಎಕರೆ 36 ಗುಂಟೆ ಜಮೀನು ಮಠಕ್ಕೆ ಸೇರಿದೆ. ಈ ಎಲ್ಲ ಗೊಂದಲಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sun, 27 October 24