ಯುದ್ಧದ ಪರಿಣಾಮ: ಮತ್ತೆ ದುಬಾರಿಯಾದ ಡ್ರೈ ಫ್ರೂಟ್ಸ್, ಗಿಫ್ಟ್ ಬಾಕ್ಸ್‌ಗಳಲ್ಲಿ ಸೀಡ್ಸ್‌ಗೆ ಹೆಚ್ಚಿದ ಬೇಡಿಕೆ!

ಮಧ್ಯಪ್ರಾಚ್ಯ ಉದ್ವಿಗ್ನತೆ ಮುಂದುವರಿದಿರಿವುದು, ಸೌದಿ ಅರೇಬಿಯಾ ಮೇಲಿನ ಹೌತಿಗಳ ದಾಳಿಯ ಪರಿಣಾಮ ಕರ್ನಾಟಕದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಮತ್ತೆ ಏರಿಕೆಯಾಗಿದೆ. ಪಿಸ್ತಾ, ಬಾದಾಮಿ, ಅಂಜೂರ ಸೇರಿದಂತೆ ಹಲವು ಉತ್ಪನ್ನಗಳು ದುಬಾರಿಯಾಗಿದ್ದು, ದೀಪಾವಳಿ ಗಿಫ್ಟ್ ಬಾಕ್ಸ್‌ಗಳಲ್ಲಿ ಡ್ರೈ ಫ್ರೂಟ್ಸ್ ಬದಲಿಗೆ ಸೀಡ್ಸ್ ಮತ್ತು ಮಖಾನಾಗಳ ಬಳಕೆ ಹೆಚ್ಚಾಗಿರುವುದು ತಿಳಿದುಬಂದಿದೆ.

ಯುದ್ಧದ ಪರಿಣಾಮ: ಮತ್ತೆ ದುಬಾರಿಯಾದ ಡ್ರೈ ಫ್ರೂಟ್ಸ್, ಗಿಫ್ಟ್ ಬಾಕ್ಸ್‌ಗಳಲ್ಲಿ ಸೀಡ್ಸ್‌ಗೆ ಹೆಚ್ಚಿದ ಬೇಡಿಕೆ!
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Oct 29, 2026 | 7:54 AM

ಮುಖ್ಯಾಂಶಗಳು

  • ಯುದ್ಧದ ಪರಿಣಾಮ ಡ್ರೈ ಫ್ರೂಟ್ಸ್ ಬೆಲೆ ಏರಿಕೆ
  • ಗಿಫ್ಟ್ ಬಾಕ್ಸ್‌ಗಳಲ್ಲಿ ಸೀಡ್ಸ್ ಬಳಕೆ ಹೆಚ್ಚಳ
  • ಡ್ರೈ ಫ್ರೂಟ್ಸ್ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕ

ಬೆಂಗಳೂರು, ಅಕ್ಟೋಬರ್ 29: ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಹಾಗೂ ಸೌದಿ ಅರೇಬಿಯಾ ಮೇಲಿನ ಹೌತಿಗಳ ದಾಳಿಯ ಪರಿಣಾಮ ಡ್ರೈ ಫ್ರೂಟ್ಸ್‌ಗಳ ಬೆಲೆ ಮತ್ತೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು, ಗ್ರಾಹಕರು ದುಬಾರಿ ದರಕ್ಕೆ ಡ್ರೈ ಫ್ರೂಟ್ಸ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ, ದೀಪಾವಳಿ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪನಿಗಳು ನೀಡುವ ಗಿಫ್ಟ್ ಬಾಕ್ಸ್‌ಗಳಲ್ಲಿ ಡ್ರೈ ಫ್ರೂಟ್ಸ್ ಬದಲಿಗೆ ಕುಂಬಳಕಾಯಿ ಬೀಜ, ಚಿಯಾ ಬೀಜ, ಸೂರ್ಯಕಾಂತಿ ಬೀಜ ಹಾಗೂ ಮಖಾನಾಗಳ ಬಳಕೆ ಹೆಚ್ಚಾಗಿದೆ.

ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಭಾರೀ ಏರಿಕೆ

ಯುದ್ಧದ ಪರಿಸ್ಥಿತಿಯಿಂದಾಗಿ ಡ್ರೈ ಫ್ರೂಟ್ಸ್‌ಗಳ ಆಮದು ಮತ್ತು ಸಾಗಣೆ ವೆಚ್ಚ ಹೆಚ್ಚಾಗಿದ್ದು, ಅದರ ನೇರ ಪರಿಣಾಮ ಮಾರುಕಟ್ಟೆಯ ಬೆಲೆಗಳ ಮೇಲೆ ಬಿದ್ದಿದೆ. ಈ ಹಿಂದೆ ಕೆ.ಜಿ.ಗೆ 1,800 ರೂ. ಇದ್ದ ಸಾಮಾನ್ಯ ಪಿಸ್ತಾ ಬೆಲೆ ಈಗ 2,800 ರೂ.ಗೆ ಏರಿಕೆಯಾಗಿದೆ. 2,500 ರೂ. ಇದ್ದ ಮಮ್ರಾ ಬಾದಾಮಿ ಬೆಲೆ 4,000 ರೂ. ತಲುಪಿದೆ.

ಅದೇ ರೀತಿ, 1,200 ರೂ. ಇದ್ದ ಅಂಜೂರದ ಬೆಲೆ 1,800 ರೂ.ಗೆ ಹೆಚ್ಚಾಗಿದೆ. 900 ರೂ. ಇದ್ದ ಕ್ಯಾಲಿಫೋರ್ನಿಯಾ ಬಾದಾಮಿ ಬೆಲೆ 1,200 ರೂ.ಗೆ ಏರಿಕೆಯಾಗಿದ್ದರೆ, 900 ರೂ. ಇದ್ದ ವಾಲ್‌ನಟ್ ಬೆಲೆ 1,400 ರೂ. ತಲುಪಿದೆ. ಗೋಡಂಬಿ ಬೆಲೆ 800 ರೂ.ನಿಂದ 950 ರೂ.ಗೆ ಹಾಗೂ ಒಣದ್ರಾಕ್ಷಿ ಬೆಲೆ 350 ರೂ.ನಿಂದ 600 ರೂ.ಗೆ ಏರಿಕೆಯಾಗಿದೆ.

ಯುದ್ಧದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಡ್ರೈ ಫ್ರೂಟ್ಸ್ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಗಿಫ್ಟ್ ಬಾಕ್ಸ್‌ಗಳಲ್ಲಿ ಡ್ರೈ ಫ್ರೂಟ್ಸ್ ಬದಲು ಸೀಡ್ಸ್

ದೀಪಾವಳಿ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಗಳು ಸಾವಿರಾರು ಗಿಫ್ಟ್ ಬಾಕ್ಸ್‌ಗಳಿಗೆ ಆರ್ಡರ್ ನೀಡುವುದರಿಂದ ಡ್ರೈ ಫ್ರೂಟ್ಸ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬೆಲೆ ಏರಿಕೆಯಿಂದ ವ್ಯಾಪಾರ ಕುಂಠಿತವಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಹೀಗಾಗಿ, ಗಿಫ್ಟ್ ಬಾಕ್ಸ್‌ಗಳಲ್ಲಿ ಡ್ರೈ ಫ್ರೂಟ್ಸ್ ಪ್ರಮಾಣ ಕಡಿಮೆ ಮಾಡಿ, ಕುಂಬಳಕಾಯಿ ಬೀಜ, ಚಿಯಾ ಬೀಜ, ಸೂರ್ಯಕಾಂತಿ ಬೀಜ ಮತ್ತು ಮಖಾನಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗುತ್ತಿದೆ. ಈ ಪರ್ಯಾಯ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದರಿಂದ ಅವುಗಳ ಬೆಲೆಯೂ ಏರಿಕೆಯಾಗಿದೆ.

ಸಾಗಣೆ ವೆಚ್ಚ ಹೆಚ್ಚಳವೂ ಬೆಲೆ ಏರಿಕೆಗೆ ಕಾರಣ

Dry Fruit Prices Rise Ahead Of Diwali As West Asia Conflict Pushes Up Import Costs
ಇರಾನ್ ಮತ್ತು ಅಫಘಾನಿಸ್ತಾನದಿಂದ ಬಾದಾಮಿ, ಅಂಜೂರ ಹಾಗೂ ಪಿಸ್ತಾದಂತಹ ಡ್ರೈ ಫ್ರೂಟ್ಸ್‌ಗಳು ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಬರುತ್ತಿದ್ದವು. ಆದರೆ, ಪ್ರಸ್ತುತ ಯುದ್ಧ ಮತ್ತು ದಾಳಿಗಳ ಹಿನ್ನೆಲೆಯಲ್ಲಿ ಸಾಗಣೆ ಮಾರ್ಗದಲ್ಲಿ ಬದಲಾವಣೆಯಾಗಿದ್ದು, ಹಡಗುಗಳು ಸುತ್ತುವ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಇದರಿಂದ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರಿ ಏರಿಕೆ: ನಾಲ್ಕು ತಿಂಗಳಲ್ಲಿ ಶೇ 30 ರಷ್ಟು ಹೆಚ್ಚಳ, ಸೋನಾ ಮಸೂರಿ ₹20 ದುಬಾರಿ

ಈ ಹಿಂದೆ 20 ಅಡಿ ಕಂಟೈನರ್ ಸಾಗಣೆಗೆ ಸುಮಾರು 1,500 ಡಾಲರ್ ವೆಚ್ಚವಾಗುತ್ತಿತ್ತು. ಇದೀಗ ಅದು 4,000 ಡಾಲರ್‌ಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಸಾಗಣೆ ವೆಚ್ಚದ ಹೆಚ್ಚಳವೂ ಡ್ರೈ ಫ್ರೂಟ್ಸ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಗ್ರಾಹಕರ ಜೇಬಿಗೆ ಹೊರೆ

ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಿಂದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಖರೀದಿ ಹೆಚ್ಚಾಗುವ ನಿರೀಕ್ಷೆಯಿದ್ದರೂ, ದುಬಾರಿ ದರದಿಂದಾಗಿ ವ್ಯಾಪಾರಿಗಳ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಯುದ್ಧ ಮತ್ತು ದಾಳಿಗಳ ಪರಿಸ್ಥಿತಿ ಮುಂದುವರಿದರೆ ಸಾಗಣೆ ವೆಚ್ಚ ಮತ್ತಷ್ಟು ಹೆಚ್ಚಾಗಿ, ಡ್ರೈ ಫ್ರೂಟ್ಸ್ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಾಪಾರಿಗಳಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 am, Thu, 29 October 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us