AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರಿ ಏರಿಕೆ: ನಾಲ್ಕು ತಿಂಗಳಲ್ಲಿ ಶೇ 30 ರಷ್ಟು ಹೆಚ್ಚಳ, ಸೋನಾ ಮಸೂರಿ ₹20 ದುಬಾರಿ

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ ಚಿಲ್ಲರೆ ಬೆಲೆ ಶೇ 30ರಷ್ಟು ಏರಿಕೆಯಾದೆ. ಸದ್ಯದ ಪರಿಸ್ಥಿತಿಯಲ್ಲಿ ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂಬ ಆಘಾತಕಾರಿ ವಿಚಾರವೂ ಬಯಲಾಗಿದೆ. ಭತ್ತದ ಬಿತ್ತನೆ ಕುಸಿತ, ನೀರಿನ ಕೊರತೆ ಮತ್ತು ಪೂರೈಕೆ ಸಮಸ್ಯೆಗಳು ಬೆಲೆ ಏರಿಕೆಗೆ ಕಾರಣವಾಗಿವೆ.

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರಿ ಏರಿಕೆ: ನಾಲ್ಕು ತಿಂಗಳಲ್ಲಿ ಶೇ 30 ರಷ್ಟು ಹೆಚ್ಚಳ, ಸೋನಾ ಮಸೂರಿ ₹20 ದುಬಾರಿ
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Oct 28, 2026 | 12:45 PM

Share

ಮುಖ್ಯಾಂಶಗಳು

  • ಅಕ್ಕಿ ಬೆಲೆ ಏರಿಕೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನದಲ್ಲಿ ಕರ್ನಾಟಕ
  • ನಾಲ್ಕು ತಿಂಗಳಲ್ಲಿ ಅಕ್ಕಿ ಬೆಲೆ ಶೇ 30ರಷ್ಟು ಏರಿಕೆ
  • ಭತ್ತದ ಪೂರೈಕೆ ಕುಸಿತದಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶೀಘ್ರದಲ್ಲೇ ಕೆಲವು ತಳಿಗಳ ಬೆಲೆ ಕೆಜಿಗೆ 100 ರೂ. ದಾಟುವ ಸಾಧ್ಯತೆ ಇದೆ. ಮುಂಗಾರು ಮಳೆ ಕೊರತೆ, ಕೃಷ್ಣಾ-ತುಂಗಭದ್ರಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭತ್ತದ ಬೆಳೆಗೆ ನೀರು ತಡವಾಗಿ ಬಿಡುಗಡೆಯಾಗಿರುವುದು ಹಾಗೂ ಭತ್ತದ ಪೂರೈಕೆ ಕುಸಿದಿರುವುದು ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವ್ಯಾಪಾರಿಗಳು ಮತ್ತು ಅಕ್ಕಿ ಗಿರಣಿ ಮಾಲೀಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಸೋನಾ ಮಸೂರಿ ಅಕ್ಕಿಯ ಚಿಲ್ಲರೆ ಬೆಲೆ (ರಿಟೇಲ್ ದರ) ಕಳೆದ ಎರಡು ತಿಂಗಳಲ್ಲಿ ಕೆಜಿಗೆ ಸುಮಾರು ₹20 ಏರಿಕೆಯಾಗಿದೆ. ಪ್ರಸ್ತುತ ಹಳೆಯ ಸೋನಾ ಮಸೂರಿ ಅಕ್ಕಿ ಕೆಜಿಗೆ ₹82ರಿಂದ ₹98ರವರೆಗೆ ಮಾರಾಟವಾಗುತ್ತಿದೆ. ಜೀರಿಗೆ ಅಕ್ಕಿಯ ಬೆಲೆ ₹90ರಿಂದ ₹115ರವರೆಗೆ ಇದ್ದರೆ, ಬುಲೆಟ್ ಅಕ್ಕಿ ಕೆಜಿಗೆ ಸುಮಾರು ₹95ಕ್ಕೆ ಮಾರಾಟವಾಗುತ್ತಿದೆ. ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾಗಿರುವ ಬಹುತೇಕ ಅಕ್ಕಿ ತಳಿಗಳ ಬೆಲೆ ಕೆಜಿಗೆ ₹20ರಿಂದ ₹30ರವರೆಗೆ ಹೆಚ್ಚಳವಾಗಿದೆ.

ಅಕ್ಕಿ ಬೆಲೆ ಏರಿಕೆಯಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿ ಕರ್ನಾಟಕ

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ಮೇಲ್ವಿಚಾರಣಾ ವಿಭಾಗದ ಅಂಕಿಅಂಶಗಳ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಚಿಲ್ಲರೆ ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೂನ್‌ನಲ್ಲಿ ಕೆಜಿಗೆ ₹52.11 ಇದ್ದ ಸರಾಸರಿ ಬೆಲೆ ಅಕ್ಟೋಬರ್‌ನಲ್ಲಿ ₹67.86ಕ್ಕೆ ಏರಿಕೆಯಾಗಿದೆ. ಇದು ಸುಮಾರು ಶೇ 30ರಷ್ಟು ಹೆಚ್ಚಳವಾಗಿದೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ಭತ್ತದ ಆವಕ ಶೇ 10ರಿಂದ ಶೇ 40ರವರೆಗೆ ಕುಸಿದಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಕೇವಲ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಭತ್ತದ ಬೆಲೆ ಏರಿಕೆ, ಎರಡನೇ ಬೆಳೆಗೂ ಆತಂಕ

ಕಳೆದ ಮುಂಗಾರು ಹಂಗಾಮಿನಲ್ಲಿ 75 ಕೆ.ಜಿ. ಭತ್ತದ ಚೀಲಕ್ಕೆ ₹1,800ರಿಂದ ₹2,700ರವರೆಗೆ ಬೆಲೆ ಇತ್ತು. ಈ ಬಾರಿ ಅದೇ ಪ್ರಮಾಣದ ಭತ್ತಕ್ಕೆ ₹3,400ರಿಂದ ₹4,000 ಪಾವತಿಸಬೇಕಾಗಿದೆ. ಹೆಚ್ಚಿನ ಬೆಲೆ ನೀಡಲು ಸಿದ್ಧವಿದ್ದರೂ ರಾಜ್ಯದಲ್ಲಿ ಸಾಕಷ್ಟು ಭತ್ತ ಲಭ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯನಿರ್ವಾಹಕ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ. 56 ವರ್ಷಗಳ ಗಿರಣಿ ಉದ್ಯಮದ ಅನುಭವದಲ್ಲಿ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಭತ್ತದ ಬೆಲೆ ₹2,000ರಷ್ಟು ಏರಿಕೆಯಾಗಿರುವುದನ್ನು ಕಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ತುಂಗಭದ್ರಾ ನೀರನ್ನು ಎರಡನೇ ಬೆಳೆಗೆ ಬಿಡುಗಡೆ ಮಾಡದಿರುವ ನಿರ್ಧಾರದಿಂದ ಭತ್ತದ ಉತ್ಪಾದನೆ ಮತ್ತಷ್ಟು ಕುಸಿಯುವ ಆತಂಕವಿದೆ. ಇದರಿಂದ ಅಕ್ಕಿಯ ಬೆಲೆ ಪ್ರತಿ ಕ್ವಿಂಟಾಲ್‌ಗೆ ₹10,000 ದಾಟುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ನೀರು ತಡವಾಗಿ ಬಿಡುಗಡೆಯಾದ ಕಾರಣ ಈ ಭಾಗದಲ್ಲಿ ಭತ್ತದ ಇಳುವರಿ ಸಾಮಾನ್ಯಕ್ಕಿಂತ ಶೇ 10ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಎರಡನೇ ಬೆಳೆ ಬೆಳೆಯಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಅಕ್ಕಿ ಪೂರೈಕೆಯ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಬೆಲೆ ಏರಿಕೆಯ ಸಂಪೂರ್ಣ ಲಾಭ ರೈತರಿಗೆ ಸಿಕ್ಕಿಲ್ಲ. ಹಂಗಾಮು ಆರಂಭವಾಗುವ ಮೊದಲೇ ಅನೇಕ ರೈತರು ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಕೆಲವೇ ರೈತರು ಕ್ವಿಂಟಾಲ್‌ಗೆ ₹3,300ರಷ್ಟು ಪಡೆದರೆ, ಬಹುತೇಕರು ಸರಾಸರಿ ₹2,600ಕ್ಕೆ ಮಾರಾಟ ಮಾಡಿದ್ದಾರೆ ಎಂಬ ಗಂಗಾವತಿಯ ರೈತ ವಿಜಯ್ ಅವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ರಫ್ತಿಗೆ ಬೇಡಿಕೆ ಹೆಚ್ಚಳ; ದಾಸ್ತಾನು ಕೊರತೆ ಆರೋಪ ತಳ್ಳಿಹಾಕಿದ ಗಿರಣಿ ಮಾಲೀಕರು

ಭತ್ತವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಾವಿತ್ರಿ ಪುರುಷೋತ್ತಮ್ ತಳ್ಳಿಹಾಕಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ. ಭತ್ತದ ಕೊರತೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶದಾದ್ಯಂತ ಪೂರೈಕೆಯ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ. ರಾಯಚೂರಿನ ವ್ಯಾಪಾರಿಯೊಬ್ಬರ ಪ್ರಕಾರ, ಎಲ್ ನಿನೊ ಪರಿಣಾಮದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಕೊಲ್ಲಿ ರಾಷ್ಟ್ರಗಳು, ಸಿಂಗಾಪುರ ಮತ್ತು ಕೆಲವು ಆಫ್ರಿಕಾ ದೇಶಗಳಿಂದ ಅಕ್ಕಿಗಾಗಿ ಬೇಡಿಕೆ ಬರುತ್ತಿದೆ. ಹಳೆಯ ಅಕ್ಕಿಯ ದಾಸ್ತಾನು ಮುಗಿದಿದ್ದು, ಹೊಸ ದಾಸ್ತಾನು ಬರುವುದನ್ನು ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಅಕ್ಕಿಯ ಕೊರತೆಯಿಲ್ಲ: ಸಚಿವ ಪ್ರಲ್ಹಾದ್ ಜೋಶಿ

ಅಕ್ಕಿ ಬೆಲೆ ಏರಿಕೆಯಾಗುತ್ತಿದ್ದರೂ ದೇಶದಲ್ಲಿ ಅಕ್ಕಿಯ ಕೊರತೆಯಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮುಂದಿನ 18ರಿಂದ 20 ತಿಂಗಳ ದೇಶದ ಅಗತ್ಯ ಪೂರೈಸುವಷ್ಟು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 81.35 ಕೋಟಿಗೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಅಗತ್ಯವಿದ್ದರೆ ರಾಜ್ಯಗಳಿಗೆ ರಿಯಾಯಿತಿ ದರದಲ್ಲಿ ಹೆಚ್ಚುವರಿ ಅಕ್ಕಿ ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭೀಕರ ಬರದಿಂದ ಬತ್ತಿದ ಭತ್ತದ ನಾಡು, ರೈಸ್ ಮಿಲ್​ಗಳಿಗೆ ಬರುತ್ತಿಲ್ಲ ಭತ್ತ: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ

ಅಕ್ಕಿ ಬೆಲೆ ಏರಿಕೆಗೆ ರಫ್ತು ಮಾತ್ರ ಕಾರಣವಲ್ಲ. ಭಾರತ ಸೇರಿದಂತೆ ಅಕ್ಕಿ ಬೆಳೆಯುವ ಹಲವು ದೇಶಗಳಲ್ಲಿ ಬರ ಪರಿಸ್ಥಿತಿ ಉಂಟಾಗಿರುವುದರಿಂದ ಜಾಗತಿಕ ಬೇಡಿಕೆ ಹೆಚ್ಚಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಬೆಲೆ ಏರಿಕೆಗೆ ಕಾರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಅವರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More