ಯಾದಗಿರಿಯ ಮಲ್ಲಯ್ಯನ ದೇವಸ್ಥಾನದಲ್ಲಿ ನಡೆಯುತ್ತೆ ಸರಪಳಿ ತುಂಡರಿಸುವ ವಿಶೇಷ ಜಾತ್ರೆ
ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ದೇವತೆ ಮಲ್ಲಯ್ಯನ ಜಾತ್ರೆಯಲ್ಲಿ ಕಲ್ಲಿಗೆ ಕಟ್ಟಿದ ಸರಪಳಿಯನ್ನು ತುಂಡರಿಸಲಾಗುತ್ತದೆ.
ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ಜಾತ್ರೆಗಳನ್ನು ನೋಡುವುದೇ ಚಂದ. ಬಹಷ್ಟು ವೈವಿದ್ಯತೆಗಳಿಂದ ಕೂಡಿರುತ್ತವೆ. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಯಾದಗಿರಿಯಲ್ಲಿ ವಿಶೇಷ ಜಾತ್ರೆಯೊಂದು ನಡೆಯುತ್ತದೆ. ಯಾದಗಿರಿ ಜಿಲ್ಲೆಯಾದ್ಯಂತ ಅತ್ಯಂತ ಪ್ರಸಿದ್ಧ ಪಡೆದ ಮೈಲಾರಲಿಂಗ ಜಾತ್ರೆ ಅಂದ್ರೆ ಸಾಕು ಸಾವಿರಾರು ಜನ ಭಕ್ತರ ದಂಡೆ ಹರಿದು ಬರುತ್ತೆ. ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ದೇವತೆ ಮಲ್ಲಯ್ಯನ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಮಲ್ಲಯ್ಯ ಇಂದು ರಾಕ್ಷಸರನನ್ನು ಸಂಹಾರ ಮಾಡಿದ್ದ ದಿನವಾದ ಕಾರಣಕ್ಕೆ ಗ್ರಾಮದಲ್ಲಿ ಅದ್ದೂರಿಯಾಗಿ ಮಲ್ಲಯ್ಯನ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷ ಅಂದ್ರೆ ಕಬ್ಬಿಣದ ಸರಪಳಿ ಹರಿಯೋದು. ಇದನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ದಿನದಂದು ಬೆಟ್ಟದ ಮೇಲಿನ ಮಲ್ಲಯ್ಯನ ಜಾತ್ರೆ ಅದ್ದೂರಿಯಾಗಿ ನಡೆದ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಅಷ್ಟಕ್ಕೂ ಈ ಜಾತ್ರೆಯ ವಿಶೇಷತೆ ಬೇರೆಯಾಗಿದೆ. ಅದು ಮಲ್ಲಯ್ಯನ ದೇವಸ್ಥಾನದಲ್ಲಿ ಸರಪಳಿ ತುಂಡರಿಸುವ ಪವಾಡ.
ಸರಪಳಿ ಹೇಗೆ ತುಂಡರಿಸಲಾಗುತ್ತದೆ ?
ದೊಡ್ಡದಾದ ಕಬ್ಬಿಣದ ಸರಪಳಿಯನ್ನು ಮಲ್ಲಯ್ಯ ದೇವಸ್ಥಾನದ ಕೆಳ ಭಾಗದಲ್ಲಿರುವ ಕಲ್ಲಿಗೆ ಕಟ್ಟಲಾಗುತ್ತೆ. ಸರಪಳಿ ಕಟ್ಟಿದ ಮೇಲೆ ಬಂಡಾರ ಹಾಕಿ ಪೂಜೆ ಮಾಡಲಾಗುತ್ತೆ. ಬಳಿಕ ಪೂಜಾರಿ ಬಂದು ಪವಾಡದಂತೆ ಒಂದೆ ಏಟಿಗೆ ಸರಪಳಿಯನ್ನು ತುಂಡರಿಸಿ ಬಿಡುತ್ತಾರೆ. ಈ ವಿಶೇಷತೆ ನೋಡಲು ದೂರ ದೂರದ ಊರುಗಳಿಂದ ಭಕ್ತ ಸಾಗರವೇ ಹರಿದು ಬಂದಿರುತ್ತದೆ. ಬೆಳಗಿನ ಜಾವ ನಡೆಯುವ ಈ ಜಾತ್ರೆಗೆ ರಾತ್ರಿನೇ ಭಕ್ತರು ಮೈಲಾಪುರಕ್ಕೆ ಬಂದು ಸರಪಳಿ ಹರಿಯುವವರೆಗೆ ಕಾತರದಿಂದ ಕಾಯುತ್ತಾರೆ. ಸರಪಳಿ ಹರಿದ ಮೇಲೆ ಮಲ್ಲಯ್ಯನ ದರ್ಶನ ಪಡೆದು ವಾಪಸ್ ಆಗುತ್ತಾರೆ.
ಇದಕ್ಕೂ ಮೊದಲು ಪೂಜಾರಿ ಕಾರ್ಣಿಕ ಭವಿಷ್ಯವನ್ನ ನುಡಿಯುತ್ತಾರೆ. ಈ ಬಾರಿ ನಾಲ್ಕು ಮೂಲೆ ಎಂಟು ದಿಕ್ಕೂ ಸಂಪನ್ನ ಭವಿಷ್ಯ ನುಡಿದಿದ್ದಾರೆ. ಇದಾದ ಬಳಿಕ ಮಲ್ಲಯ್ಯನ ಪಲ್ಲಿಕ್ಕಿಯನ್ನು ದೇವಸ್ಥಾನದಿಂದ ಗ್ರಾಮದ ಪ್ರಮುಖ ಕಡೆ ನಾಲ್ಕೈದು ಬಾರಿ ಮೆರವಣಿಗೆ ಮಾಡಲಾಗುತ್ತೆ. ಹಿಂದೆ ಮಲ್ಲಯ್ಯನ ಪಲ್ಲಿಕ್ಕಿ ಇದ್ರೆ ಮುಂದೆ ಮಲ್ಲಯ್ಯನ ಕುದರೆಯ ಮೂರ್ತಿಯ ಮೆರವಣಿಗೆ ಇರುತ್ತೆ. ನೆರದಿದ್ದ ಸಾವಿರಾರು ಭಕ್ತರು ಮಲ್ಲಯ್ಯನಿಗೆ ಜಯಘೋಷ ಹಾಕುತ್ತ ಭಂಡಾರವನ್ನ ಎಸೆಯುತ್ತಾರೆ. ಮನೆಯ ಮಾಳಿಗೆ ಹಿಡಿದು, ಜಾಗ ಸಿಕ್ಕಲೆಲ್ಲ ಜನ ನೆರೆದಿರುತ್ತಾರೆ. ಜಾತ್ರೆಗೆ ಸಾವಿರಾರು ಭಕ್ತರು ಬರೋದ್ದರಿಂದ ಕಾಲಿಡಲು ಸಹ ಜಾಗ ಇರೋದಿಲ್ಲ. ನಸುಗಿನಲ್ಲೇ ನಡೆಯುವ ಈ ಜಾತ್ರೆಗೆ ಚುಮುಚುಮು ಚಳಿಯನ್ನು ಲೆಕ್ಕಿಸದೆ ಭಕ್ತರು ದೇವಸ್ಥಾನಕ್ಕೆ ಬಂದು ಭಕ್ತಿ ಪರಾಕಾಷ್ಠೆಯನ್ನು ಮೆರೆಯುತ್ತಾರೆ.
ಸರಪಳಿ ಹರಿಯಲು ಕಾರಣ
ಸರಪಳಿ ಹರಿಯುವ ಪದ್ಧತಿ ನಿನ್ನೆ ಮೊನ್ನೆಯಿಂದ ನಡೆದುಕೊಂಡು ಬಂದಿಲ್ಲ. ಬದಲಿಗೆ ನೂರಾರು ವರ್ಷಗಳ ಇತಿಹಾಸವಿದೆ. ಶ್ವಾನಕ್ಕೆ ಮಲ್ಲಯ್ಯ ಅಂತ ಕರೆಯಲಾಗುತ್ತೆ. ನಂಬಿಕೆ ಪ್ರಕಾರ ದೇವಸ್ಥಾನದ ಕೆಳಗಡೆ ಇರುವ ಕಲ್ಲಿಗೆ ಶ್ವಾನವನ್ನು ಕಟ್ಟಲಾಗಿತಂತೆ. ಶ್ವಾನ ಸರಪಳಿಯನ್ನು ಹರಿದುಕೊಂಡು ಹೋಗಿ ರಾಕ್ಷಸರ ಸಂಹಾರ ಮಾಡಿತಂತೆ. ಇದೆ ಕಾರಣಕ್ಕೆ ಈ ದಿನ ಸರಪಳಿಯನ್ನು ಮಲ್ಲಯ್ಯನ ಪೂಜಾರಿಗಳೇ ಹರಿಯುತ್ತಾರೆ. ಒಂದೆ ಏಟಿಗೆ ಸರಪಳಿ ತುಂಡುರಿಸೋದ್ದರಿಂದ ಇದೊಂದು ಪವಾಡ ಅಂತಾನೆ ಭಕ್ತರು ನಂಬಿಕೊಂಡು ಬಂದಿದ್ದಾರೆ.
ಒಟ್ಟಿನಲ್ಲಿ ವರ್ಷಕ್ಕೆ ಒಂದು ಬಾರಿ ನಡೆಯುವ ಈ ಸರಪಳಿ ಜಾತ್ರೆಗೆ ಸಾವಿರಾರು ಭಕ್ತರ ದಂಡೆ ಹರಿದು ಬರುತ್ತೆ. ಅದರಲ್ಲೂ ರಾಜ್ಯ ಸೇರಿದಂತೆ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದನೂ ಭಕ್ತರು ಬಂದು ಸರಪಳಿ ಹರಿಯುವ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾರೆ.
ವರದಿ- ಅಮೀನ್ ಹೊಸುರ್ ಟಿವಿ9 ಯಾದಗಿರಿ
Published On - 5:48 pm, Tue, 25 October 22