Year Ender 2024: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ 2024ರಲ್ಲಿ ಸದ್ದು ಮಾಡಿದ ಹಗರಣಗಳಿವು

ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆಡಳಿತಾವಧಿಯ ಮೊದಲ ವರ್ಷದಲ್ಲೇ ಹಲವು ಹಗರಣಗಳು ಭಾರಿ ಸದ್ದು ಮಾಡಿವೆ. 2024ರಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ, ತನಿಖಾ ಹಂತದಲ್ಲಿರುವ ಹಗರಣಗಳ ಮಾಹಿತಿ ಹಾಗೂ ವಿವರ ಇಲ್ಲಿದೆ.

Year Ender 2024: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ 2024ರಲ್ಲಿ ಸದ್ದು ಮಾಡಿದ ಹಗರಣಗಳಿವು
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ 2024ರಲ್ಲಿ ಸದ್ದು ಮಾಡಿದ ಹಗರಣಗಳ ವಿವರ
Follow us
Ganapathi Sharma
|

Updated on: Dec 11, 2024 | 3:04 PM

ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಹಗರಣ, ಅಬಕಾರಿ ಇಲಾಖೆ ಅವ್ಯವಾರ ಸೇರಿದಂತೆ ಹಲವು ಹಗರಣಗಳಿಗೆ ಕರ್ನಾಟಕವು 2024ರಲ್ಲಿ ಸಾಕ್ಷಿಯಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು, ಕಾಮಗಾರಿ ನಡೆಯುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಹಗರಣಗಳೂ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. 2024ರಲ್ಲಿ ಕರ್ನಾಟಕದಲ್ಲಿ ಆರೋಪಿಸಲಾಗಿರುವ ಪ್ರಮುಖ ಹಗರಣಗಳು, ಅವುಗಳ ತನಿಖೆ ಪ್ರಕ್ರಿಯೆ ಇತ್ಯಾದಿ ವಿವರ ಇಲ್ಲಿದೆ.

ಮುಡಾ ಹಗರಣ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ 2024ರಲ್ಲಿ ರಾಜ್ಯದಲ್ಲಿ ಬಹಳವಾಗಿ ಸದ್ದು ಮಾಡಿದವುಗಳ ಪೈಕಿ ಒಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ನೇರ ಆರೋಪ ಕೇಳಿಬಂದಿದ್ದಲ್ಲದೆ, ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ರಾಜ್ಯಪಾಲರು ಅನುಮತಿಯನ್ನೂ ನೀಡಿದ್ದರು. ಈಗಾಗಲೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೂ ಹಾಜರಾಗಿದ್ದಾರೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯವೂ ಮುಡಾ ಹಗರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಮುಡಾ ಹಗರಣ ಹಿನ್ನೆಲೆ

ಮುಡಾ 2021ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 50:50 ಅನುಪಾತದಲ್ಲಿ 38,284 ಚದರ ಅಡಿ ಜಾಗ ನೀಡಿದ್ದು, ಹಗರಣದ ಮುಖ್ಯ ಅಂಶವಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಅವರಿಗೆ 50:50 ಅನುಪಾತದಲ್ಲಿ ಪರಿಹಾರ ನೀಡಲಾಗಿತ್ತು. ಆದರೆ, ಸಿಎಂ ಪತ್ನಿಗೆ ವಿಜಯನಗರದಲ್ಲೇ ಏಕೆ ಸೈಟ್ ಕೊಟ್ಟರು? 1998ರಲ್ಲಿ ನೋಟಿಫೈ ಮಾಡಿದ್ದ ಭೂಮಿಗೆ ಈಗ ಪರಿಹಾರ ಕೊಟ್ಟಿದ್ದೇಕೆ? 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರೂ ಆಗ ಅಸ್ತಿತ್ವದಲ್ಲಿದ್ದ ನಿಯಮಗಳ ಪ್ರಕಾರ ಪರಿಹಾರ ನೀಡುವುದು ಬಿಟ್ಟು 50:50ರ ಅನುಪಾತದಲ್ಲೇ 14 ಸೈಟ್​​ಗಳನ್ನು ಪರಿಹಾರವಾಗಿ ನೀಡಿದ್ದೇಕೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.

ಸೈಟ್​​ಗಳನ್ನು ಹಿಂದಿರುಗಿಸಿದ್ದ ಸಿದ್ದರಾಮಯ್ಯ ಪತ್ನಿ

ಮುಡಾ ಹಗರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ಸೈಟ್​​ಗಳನ್ನು ಮುಡಾಕ್ಕೆ ಹಿಂದಿರುಗಿಸಿದ್ದರು. ದಾಖಲೆಗಳನ್ನು ಅಳಿಸಿಹಾಕಿದ ಆರೋಪ, ದಾಖಲೆಗಳನ್ನು ವೈಟ್ನರ್ ಬಳಸಿ ತಿದ್ದಿದ ಆರೋಪಗಳೂ ಈ ಹಗರಣದಲ್ಲಿ ಕೇಳಿ ಬಂದಿವೆ.

ಕರ್ನಾಟಕ ರಾಜಕೀಯದಲ್ಲಿ ಬಹಳ ಸದ್ದು ಮಾಡಿದ ಈ ಹಗರಣ, ಸಿದ್ದರಾಮಯ್ಯರ ಸಿಎಂ ಕುರ್ಚಿಗೇ ಕಂಟಕ ತಂದೊಡ್ಡುತ್ತದೆ ಎನ್ನಲಾಗಿತ್ತು. ಆದರೆ, ಅವರು ಕಾನೂನಾತ್ಮಕವಾಗಿಯೇ ಇದನ್ನು ಎದುರಿಸುವುದಾಗಿ ಹೇಳಿದ್ದು, ತನಿಖೆ ಹಾಗೂ ವಿಚಾರಣೆಗಳು ಪ್ರಗತಿಯಲ್ಲಿವೆ.

ಹೆಚ್ಚಿನ ವಿವರಗಳಿಗೆ ಓದಿ: ಏನಿದು ಮುಡಾ ಪ್ರಕರಣ? ಸಿದ್ದರಾಮಯ್ಯ ಪತ್ನಿಗೆ ಸೈಟ್ ಸಿಕ್ಕಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

ವಾಲ್ಮೀಕಿ ಅಭಿವೃಧ್ಧಿ ನಿಗಮ ಹಗರಣ

ಈ ಹಗರಣವು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಗಮ ನಿಯಮಿತದಲ್ಲಿನ ಭ್ರಷ್ಟಾಚಾರದ ಆರೋಪವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದ ಹಗರಣ ಇದಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ನಂತರ ಹಗರಣ ಬೆಳಕಿಗೆ ಬಂದಿತ್ತು. ಪಾಲಿಕೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಡೆತ್​​ನೋಟ್​​ನಲ್ಲಿ ಅವರು ಆರೋಪಿಸಿದ್ದರು.

ಈ ಹಗರಣದಲ್ಲಿ ಆಗಿನ ಸಚಿವ ಬಿ ನಾಗೇಂದ್ರ ಅವರನ್ನು ಪ್ರಧಾನ ಆರೋಪಿ ಎಂದು ಹೆಸರಿಸಿ ಜಾರಿ ನಿರ್ದೇಶನಾಲಯ (ಇಡಿ) ಆರೋಪಪಟ್ಟಿ ಸಲ್ಲಿಸಿತ್ತು. ನಾಗೇಂದ್ರ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 18 ನಕಲಿ ಖಾತೆಗಳಿಗೆ ನಿಗಮದಿಂದ ಹಣವನ್ನು ವರ್ಗಾಯಿಸಿದ್ದರು ಎಂದು ಇಡಿ ಆರೋಪಿಸಿತ್ತು. ನಂತರ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು.

ಭೋವಿ ನಿಗಮದಲ್ಲೂ ನಡೆದಿತ್ತು ಅವ್ಯವಹಾರ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೂಡ ಬಹುಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿರುವುದು 2024ರಲ್ಲಿ ಬೆಳಕಿಗೆ ಬಂದಿದೆ. ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಸಿಐಡಿ ತನಿಖೆ ವೇಳೆ ತಿಳಿದುಬಂದಿತ್ತು. ಉದ್ಯಮಿ ಜೀವಾ ಅವರು ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.

ವಿವರಗಳಿಗೆ ಓದಿ: ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ

ಅಬಕಾರಿ ಹಗರಣ, ಪರವಾನಗಿಗೆ ಲಂಚ ಪ್ರಕರಣ

ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ 2024ರ ನವೆಂಬರ್​​ನಲ್ಲಿ ಕೇಳಿಬಂದಿತ್ತು. ಮದ್ಯ ಮಾರಾಟ ವ್ಯಾಪಾರಿಗಳಿಂದ ಮಾಸಿಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ​​ಆರೋಪಿಸಿತ್ತು. ವರ್ಗಾವಣೆ, ಬಡ್ತಿಗೆ ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ಸನ್ನದುದಾರರಿಂದ ಮನಸೋ ಇಚ್ಛೆ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ವೈನ್ ಸ್ಟೋರ್​​ಗಳಿವೆ. ಪ್ರತಿಯೊಂದರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಮದ್ಯದಂಗಡಿ ಮಾಲೀಕರ ಹೇಳಿಕೆಗಳನ್ನು ಆಧರಿಸಿ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ: ಆರ್ ಅಶೋಕ ವಾಗ್ದಾಳಿ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಮದ್ಯದಂಗಡಿಗಳ ಮಾಲೀಕರು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ಗೆ ಪತ್ರ ಬರೆದು ಆಗ್ರಹಿಸಿದ್ದರು.

ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಅಕ್ರಮ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ರೀತಿಯಲ್ಲೇ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯ 2,47,73,999 ರೂ. ಹಣ ಅಕ್ರಮ ವರ್ಗಾವಣೆ ಆಗಿರುವುದು 2024ರ ಜುಲೈಯಲ್ಲಿ ಬೆಳಕಿಗೆ ಬಂದಿತ್ತು. ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಎಂಬುವವರು ಬಾಗಲಕೋಟೆ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ ನಂತರ ಹಗರಣ ಬಯಲಾಗಿತ್ತು. ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ