ಚೆಸ್ ಕಿಂಗ್ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ ಶೀಘ್ರ ತೆರೆಗೆ: ನಿರ್ದೇಶಕ ಆನಂದ್ ಎಲ್.ರೈ
ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ಚೆಸ್ ಕಿಂಗ್ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ ಶೀಘ್ರವೇ ಸಿನಿಮಾ ಆಗಲಿದೆ. ನಿರ್ದೇಶಕ ಆನಂದ್ ಎಲ್.ರೈ ನಿರ್ದೇಶನದಲ್ಲಿ ಬಯೋಪಿಕ್ ಮೂಡಿಬರಲಿದ್ದು, ವಿಶ್ವನಾಥನ್ ಅಭಿಮಾನಿಗಳಿಗೆ ಇದು ಖುಷಿ ಸುದ್ದಿ!

ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ಚೆಸ್ ಕಿಂಗ್ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ ಶೀಘ್ರವೇ ಸಿನಿಮಾ ಆಗಲಿದೆ. ನಿರ್ದೇಶಕ ಆನಂದ್ ಎಲ್.ರೈ ನಿರ್ದೇಶನದಲ್ಲಿ ಬಯೋಪಿಕ್ ಮೂಡಿಬರಲಿದ್ದು, ವಿಶ್ವನಾಥನ್ ಅಭಿಮಾನಿಗಳಿಗೆ ಇದು ಖುಷಿ ಸುದ್ದಿ!
ಶುಕ್ರವಾರವಷ್ಟೇ ವಿಶ್ವನಾಥನ್ ಆನಂದ್ ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಬಯೋಪಿಕ್ಗೂ ಅಸ್ತು ಎಂದಿದ್ದು ವಿಶೇಷ. ಈ ಹಿಂದೆ ಹಲವರು ವಿಶ್ವನಾಥನ್ ಜೀವನಚರಿತ್ರೆಯನ್ನು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿ, ಬೇಡಿಕೆ ಮುಂದಿಟ್ಟಿದ್ದರು. ಆದರೆ ಆಗೆಲ್ಲ ನಿರಾಕರಿಸಿದ್ದ ಚೆಸ್ ಕಿಂಗ್ ಈಗ ಆನಂದ್ ಎಲ್.ರೈ ನಿರ್ದೇಶನದಲ್ಲಿ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ. ಸಿನಿಮಾದಲ್ಲಿ ವಿಶ್ವನಾಥನ್ ತಮ್ಮ ಜೀವನವನ್ನು ವಿವರಿಸುತ್ತಾ ಸಾಗುತ್ತಾರೆ ಎನ್ನಲಾಗಿದೆ.
ಸಿನಿಮಾದ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆದರ್ಶಪ್ರಾಯವಾಗಿ ರೂಪಿಸಲಾಗುತ್ತಿದೆ. ಪಾತ್ರವರ್ಗ, ಸಿಬ್ಬಂದಿಯನ್ನು ಅಂತಿಮಗೊಳಿಸಲು ಇನ್ನೂ ಸ್ವಲ್ಪ ಸಮಯ ಬೇಕು. ನಿರ್ಮಾಣ ತಂಡ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಗ್ರ್ಯಾಂಡ್ ಮಾಸ್ಟರ್: ವಿಶ್ವನಾಥನ್ ಆನಂದ್ ಬಾಲ್ಯದಲ್ಲಿಯೇ ಸಾಧನೆ ಮಾಡಿದವರು. ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡರು. ವಿಶ್ವಮಟ್ಟದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೈಲಿಗಲ್ಲುಗಳನ್ನು ಸೃಷ್ಟಿಸಿದವರು. ಅವರ ಈ ಎಲ್ಲಾ ಸಾಧನೆಗಳನ್ನೊಳಗೊಂಡ ಸಿನಿಮಾ ಇದಾಗಲಿದೆ. 2021ರ ಮೊದಲಾರ್ಧದಲ್ಲಿ ಬಯೋಪಿಕ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಯಾರು ಈ ಆನಂದ್ ಎಲ್.ರೈ? ಆನಂದ್ ಅವರ ಜೀವನ ಚರಿತ್ರೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿರುವ ನಿರ್ದೇಶಕ ಆನಂದ್ ಎಲ್ ರೈ, ಈ ಹಿಂದೆ ತನು ವೆಡ್ಸ್ ಮನು, ಝೀರೋ ಸಿನಿಮಾಗಳನ್ನು ನಿರ್ದೇಶಿಸಿದವರು. ಹಾಗೇ, ಅನುರಾಗ್ ಕಶ್ಯಪ್ ಅವರ ಮುಕ್ಕಾಬಾಜ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು.
ಕ್ರೀಡಾಕ್ಷೇತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್, ಮಿಲ್ಖಾ ಸಿಂಗ್ ಮತ್ತು ಮೇರಿ ಕೋಮ್ ರಂಥ ಪ್ರಮುಖರ ಬಯೋಪಿಕ್ಗಳು ಈಗಾಗಲೇ ತೆರೆಯ ಮೇಲೆ ಬಂದಿವೆ. ಇನ್ನು ಸೈನಾ ನೆಹ್ವಾಲ್, ಅಭಿನವ್ ಬಿಂದ್ರಾ ಮತ್ತು ಪಿ.ವಿ ಸಿಂಧು ಅವರ ಜೀವನ ಚರಿತ್ರೆಗಳೂ ಸಿನಿಮಾ ಹಂತದಲ್ಲಿವೆ.