Purushottama Kanagal Death: ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ
Kannada Film Industry : ಪುರುಷೋತ್ತಮ ಕಣಗಾಲ್ ಅವರು ಅಮೆರಿಕದಲ್ಲಿ ನಿಧನ ಹೊಂದಿದ್ಧಾರೆ. ಜುಲೈ 3ಕ್ಕೆ ಭಾರತಕ್ಕೆ ಬಂದು, ರಾಜ್ಯಪ್ರಶಸ್ತಿ ಪಡೆದ ಅವರ ಸಿನೆಮಾ ‘ಮಹಾಕಾವ್ಯ’ವನ್ನು ಕಾಲೇಜು ವಿದ್ಯಾರ್ಥಿಗಳಿಗೆ ತೋರಿಸುವ ಕನಸು ಅವರಿಗಿತ್ತು.
Purushottama Kanagal : ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ (Purushottama Kanagal) ನಿನ್ನೆ ಅಮೆರಿಕದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷಗಳಾಗಿದ್ದವು. ಡಲ್ಲಾಸ್ನಲ್ಲಿರುವ ಮಗಳ ಮನೆಯಲ್ಲಿ ವಾಸವಾಗಿದ್ದ ಅವರು ಮಗ, ಮಗಳನ್ನು ಅಗಲಿದ್ದಾರೆ. ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಮಗನಾಗಿದ್ದ ಇವರು ಬೆಂಗಳೂರಿನಲ್ಲಿಯೇ ಹುಟ್ಟಿ, ವಿಜಯಾ ಕಾಲೇಜಿನಲ್ಲಿ ಬಿಎಪದವಿ ಪಡೆದ ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಕರ್ನಾಟಕ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿ ಡಿ.ಎಂ.ಜಿ. ಆಗಿ ನಿವೃತ್ತರಾಗಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ ಇವರು. ಅಪ್ಪ, ಚಿಕ್ಕಪ್ಪನಂತೆ ಸಿನೆಮಾಲೋಕದತ್ತ ಒಲವು ಬೆಳೆಸಿಕೊಂಡಿದ್ದರು. ಕಿರುಚಿತ್ರ, ಸಾಕ್ಷ್ಯಚಿತ್ರ ಸೇರಿದಂತೆ ಬರೆವಣಿಗೆಯ ಮೂಲಕ ಕಲಾಜಗತ್ತಿಗೆ ಸುಪರಿಚಿತರಾಗಿದ್ದರು. ಸಾಕಷ್ಟು ಚಿತ್ರಗೀತೆಗಳನ್ನು ರಚಿಸಿದ್ದರು. ಕಣಗಾಲ್ ನೃತ್ಯಾಲಯ, ಪುಟ್ಟಣ್ಣ ಕಣಗಾಲ್ ಟ್ರಸ್ಟ್ ನ ಮುಖ್ಯಸ್ಥರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು.
ಪತ್ರಕರ್ತ ಎನ್. ಎಸ್. ಶ್ರೀಧರ ಮೂರ್ತಿ, ‘ನಿನ್ನೆಯಷ್ಟೇ ಇವರ ಮಗಳು ತಂದೆಯ ನಿಧನದ ಬಗ್ಗೆ ಸಂದೇಶ ಕಳಿಸಿದ್ದರು. ಬಹಳ ಬೇಸರವಾಯಿತು. ಮಹಾಕವಿ ಪಂಪ, ರನ್ನ, ಪೊನ್ನರ ಪರಿಚಯ ಮತ್ತು ಅವರ ಕಾವ್ಯದ ಭಾಗವನ್ನು ಆಧರಿಸಿದ ‘ಮಹಾಕಾವ್ಯ ’ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿತ್ತು. ಈ ಚಿತ್ರಕ್ಕಾಗಿ ಸಬ್ ಟೈಟಲ್ ಬರೆಯುವಾಗ ಅವರೊಂದಿಗೆ ಒಡನಾಡಿದ ಖುಷಿ ನನ್ನದು. ಆದರೆ ಆ ಚಿತ್ರ ಎಲ್ಲರನ್ನೂ ತಲುಪಲಿಲ್ಲ ಎಂಬ ಕೊರಗು ಅವರಿಗಿತ್ತು. ಇದನ್ನು ಕಾಲೇಜುಗಳ ಮೂಲಕ ತಲುಪಿಸೋಣ ಎಂದು ಪರಸ್ಪರ ಮಾತನಾಡಿಕೊಂಡಿದ್ದೆವು. ಜುಲೈ 3ಕ್ಕೆ ಅವರು ಭಾರತಕ್ಕೆ ಬರಬೇಕಿತ್ತು. ಇದಕ್ಕಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿದ್ದೆವು. ಈಗ ಎಲ್ಲ ಅರೆಬರೆ. ಈ ವಿಶಿಷ್ಟ ನೆನಪುಗಳನ್ನು ಕಟ್ಟಿಹೋದ ಹಿರಿಯರಿಗೆ ನಮನಗಳು’ ಎಂದು ಸಂತಾಪ ಸೂಚಿಸಿದ್ಧಾರೆ.
ಕನ್ನಡ ಚಿತ್ರರಂಗ ಮೃತರ ಆತ್ಮಕ್ಕೆ ಕಂಬನಿ ಮಿಡಿದಿದೆ.
ಇದನ್ನೂ ಓದಿ : ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
Published On - 12:50 pm, Thu, 9 June 22