ಬಾಗಲಕೋಟೆಯಲ್ಲೊಂದು ಶಬರಿಮಲೆ: ಹರಿದು ಬರುತ್ತಿರುವ ಅಯ್ಯಪ್ಪ ಮಾಲಾಧಾರಿಗಳ ದಂಡು
ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ದೀಪವನ್ನು ಕಂಡು ಹರ್ಷಗೊಳ್ಳುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಇಂತಹ ಭಾಗ್ಯ ಎಷ್ಟೋ ಜನರಿಗೆ ಮಿಸ್ ಆಗಿದ್ದು, ಬಾಗಲಕೋಟೆಯಲ್ಲೇ ಶಬರಿಮಲೆಯನ್ನು ಕಾಣಬಹುದಾಗಿದೆ.

ಬಾಗಲಕೋಟೆ: ಪ್ರತಿ ವರ್ಷ ಸಂಕ್ರಮಣ ಕಾಲ ಬಂತೆಂದರೆ ಸಾಕು ಸಡಗರ ಸಂಭ್ರಮ ಮನೆ ಮಾಡುತ್ತದೆ. ಸಂಕ್ರಮಣ ಕಾಲದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳು ನಡೆಯುತ್ತಲೇ ಇರುತ್ತವೆ. ಇನ್ನು ಸಂಕ್ರಮಣದ ಕಾಲದಲ್ಲಿ ಅದೊಂದು ಘೋಷಣೆ, ಅದೊಂದು ನಾಮಸ್ಮರಣೆ ಎಲ್ಲಿ ಹೋದರೂ ಸಾಮಾನ್ಯವಾಗಿ ಕೇಳಿ ಬರುತ್ತದೆ. ಅದುವೇ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆ.
ಪ್ರತಿ ವರ್ಷ ಸಂಕ್ರಮಣ ಕಾಲದಲ್ಲಿ ಶಬರಿಮಲೆಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಇಡೀ ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಹೋಗುತ್ತಾರೆ. ಅದರ ಜೊತೆ ಇತರೆ ಭಕ್ತರು ಕೂಡ ಸ್ವಾಮಿಯೇ ಶರಣಂ ಎಂದು ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪುನೀತರಾಗುತ್ತಾರೆ. ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ದೀಪವನ್ನು ಕಂಡು ಹರ್ಷಗೊಳ್ಳುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಇಂತಹ ಭಾಗ್ಯ ಎಷ್ಟೋ ಜನರಿಗೆ ಮಿಸ್ ಆಗಿದ್ದು, ಬಾಗಲಕೋಟೆಯಲ್ಲೇ ಶಬರಿಮಲೆಯನ್ನು ಕಾಣಬಹುದಾಗಿದೆ.
ಅಯ್ಯಪ್ಪ ಮಾಲಾಧಾರಿಗಳು ಬಾಗಲಕೋಟೆಯಲ್ಲಿ ಇರುಮುಡಿ ಬಿಚ್ಚಿಡುತ್ತಿರೋದ್ಯಾಕೆ? ಪ್ರತಿ ವರ್ಷದ ಶಬರಿಮಲೆಗೆ ಹೋಗಿ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಬಿಚ್ಚಿಟ್ಟು ಬರುತ್ತಾರೆ. ಪಂಪಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಕಾಡಿನಲ್ಲಿ ನಡೆಯುತ್ತಾ ಹದಿನೆಂಟು ಮೆಟ್ಟಿಲೇರಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಶಬರಿಮಲೆ ಸನ್ನಿವೇಶವನ್ನು ಯಥಾವತ್ತಾಗಿ ಕಾಣಬಹುದಾಗಿದೆ. ಆಸಂಗಿ ಗ್ರಾಮದಲ್ಲಿ ಸ್ವಾಮಿ ಅಯ್ಯಪ್ಪ ದೇವಸ್ಥಾನವಿದ್ದು, ಅಲ್ಲೂ ಕೂಡ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.
ಪಂಪಾ ನದಿ ಸ್ನಾನದಂತೆ, ಇಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ಸ್ವಾಮಿ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆ ಮಾಡುತ್ತಾ, ನಡೆದುಕೊಂಡು ಬಂದು ಹದಿನೆಂಟು ಮೆಟ್ಟಿಲು ಏರಬೇಕು. ಏರಿದ ಮೇಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಯ್ಯಪ್ಪ ಮಾಲಾಧಾರಿಗಳು ವಿವಿಧ ಪೂಜಾ ಕೈಂಕರ್ಯ ಪೂರೈಸಿ ಇರುಮುಡಿ ಬಿಚ್ಚಿಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ಮಹಾಮಾರಿ. ಕೊರೊನಾ ಮಹಾಮಾರಿ ಹಿನ್ನೆಲೆ ಕೇರಳದ ಶಬರಿಮಲೆಯಲ್ಲಿ ಮುಕ್ತ ಅವಕಾಶ ದೊರೆಯದ ಕಾರಣ ಆಸಂಗಿಯಲ್ಲಿಯೇ ಇರುಮುಡಿ ಬಿಚ್ಚಿಡುತ್ತಿದ್ದಾರೆ ಅಯ್ಯಪ್ಪ ಸ್ವಾಮಿ ಭಕ್ತರು.
ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ಪ್ರತಿ ವರ್ಷ ವ್ರತ ಮುಕ್ತಾಯಗೊಳಿಸಲು ಕೇರಳದ ಶಬರಿಮಲೆಯಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಇಳಿಸಿ ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಹಾವಳಿಯಿಂದ ಅಲ್ಲಿಗೆ ಹೋಗದಂತಾಗಿದೆ. ಅಲ್ಲದೇ ಕೊರೊನಾ ನೆಗೆಟಿವ್, ಆಂಟಿಜೆನ್ ಪರೀಕ್ಷೆ ಸೇರಿದಂತೆ ಹಲವಾರು ಪ್ರಮಾಣ ಪತ್ರಗಳನ್ನು ತರಬೇಕಾದ ಕಿರಿಕಿರಿಯಿಂದಾಗಿ ರಾಜ್ಯದ ಮಾಲಾಧಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಇರುಮುಡಿ ಬಿಚ್ಚಿಡುತ್ತಿದ್ದಾರೆ.
ಮಹಾರಾಷ್ಟ್ರದಿಂದಲೂ ಬರುತ್ತಿದ್ದಾರೆ ಅಯ್ಯಪ್ಪ ಮಾಲಾಧಾರಿಗಳು
ಆಸಂಗಿಯಲ್ಲಿ 2003 ರಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಟ್ಟಿಸಲಾಗಿದೆ. ರಬಕವಿ ಬನಹಟ್ಟಿ , ಜಮಖಂಡಿ ಭಾಗದ ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತರೆಲ್ಲರು ಸೇರಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಟ್ಟಿಸಿದ್ದರು. ಪ್ರತಿದಿನ ಇಲ್ಲಿ ಪೂಜೆ ಪುನಸ್ಕಾರ, ಸಕಲ ರೀತಿ ಪೂಜಾ ಕೈಂಕರ್ಯ ಹಾಗೂ ಮಹತ್ವದ ನಕ್ಷತ್ರ ಅನುಸಾರ, ಸಂಪೂರ್ಣ ವಾಸ್ತುವಿಕವಾಗಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಭಾಗದ ಅಯ್ಯಪ್ಪನ ಭಕ್ತರಿಂದ ನಿರ್ಮಾಣವಾದ ವಿಶಾಲ ದೇವಸ್ಥಾನ ಇದಾಗಿದೆ. ಸದ್ಯ ಪ್ರತಿ ದಿನ ನಸುಕಿನ 5 ಗಂಟೆಯಿಂದ ಬೆಳಗ್ಗೆ 11 ಗಂಟೆ ವರೆಗೆ ತುಪ್ಪದ ಅಭಿಷೇಕ ಕಾರ್ಯ ನಡೆಯುತ್ತದೆ.
ಇನ್ನು ಸಂಕ್ರಮಣ ವೇಳೆ ದೇವಸ್ಥಾನದಲ್ಲಿ ಪ್ರತಿನಿತ್ಯ ಅಯ್ಯಪ್ಪ ಮಾಲಾಧಾರಿಗಳಿಂದ ಪೂಜೆ ಹೋಮ, ಮಂತ್ರ ಜಪಗಳೆಲ್ಲವೂ ನಡೆಯುತ್ತವೆ. ಆದರೆ ಅಂದು ಕಟ್ಟಿಸಿದ ದೇವಸ್ಥಾನ ಕೊರೊನಾ ಕಾಲದಲ್ಲಿ ಶಬರಿಮಲೆಗೆ ತೆರಳಲು ಬಂದ ಸಂಕಷ್ಟಕ್ಕೆ ಈಗ ಮತ್ತಷ್ಟು ಆಸರೆಯಾಗಿದೆ. ಆಸಂಗಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದಿಂದಲೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ.
ಮಿನಿ ಶಬರಿಮಲೆ ಎಂದು ಹೆಸರಾದ ಆಸಂಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಡಿಸೆಂಬರ್ 30ರಂದು ತೆರೆದಿದ್ದು, ಜನವರಿ 15ರ ಮಕರ ಜ್ಯೋತಿ ದರ್ಶನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ದರ್ಶನಕ್ಕೆ ತೆರಳುವ ಭಕ್ತರಿಗೆ ಕೊರೊನಾ ಭೀತಿ ಎದುರಾಗಿದ್ದು, ರಾಜ್ಯದ ಬಹುತೇಕ ಮಾಲಾಧಾರಿಗಳು ಹೋಗುತ್ತಿಲ್ಲ. ಹೀಗಾಗಿ ಆಸಂಗಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ನಿತ್ಯ ನೂರಾರು ಜನರು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಇದರಿಂದ ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪವಿತ್ರ ಸ್ಥಳವನ್ನು ಮಿನಿ ಶಬರಿಮಲೆ ಎಂದು ಕರೆಯಲಾಗುತ್ತಿದೆ ಎಂದು ದೇವಸ್ಥಾನದ ಅರ್ಚಕ ಅಶೋಕ ಗಾಯಕವಾಡ ತಿಳಿಸಿದ್ದಾರೆ.
ಸಾವಿರ ತಲುಪುವ ನಿರೀಕ್ಷೆ ಈವರೆಗೆ 2,000 ಕ್ಕೂ ಅಧಿಕ ಭಕ್ತರು ಇಲ್ಲಿ ಇರುಮುಡಿ ಬಿಚ್ಚಿದ್ದಾರೆ. ಮಕರ ಸಂಕ್ರಮಣದ ವೇಳೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಳ್ಳಲಿದ್ದು, ಸುಮಾರು ೧೦ ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿಗೆ ಆಗಮಿಸಿ ಇರುಮುಡಿ ನೀಡುವ ಸಂಭವವಿದೆ. ಬರುವ ಮಾಲಾಧಾರಿಗಳಿಗೆ ವಸತಿ, ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನದ ಕಮೀಟಿಯವರು ಮಾಡಿದ್ದಾರೆ. ಇದರಿಂದ ಯಾವುದೇ ತೊಂದರೆ ಇಲ್ಲ.
Published On - 3:54 pm, Wed, 6 January 21