Tv9 Facebook Live | ನಮ್ಮ ಭವಿಷ್ಯದೊಂದಿಗೆ ಚೆಲ್ಲಾಟ ಬೇಡ; ಎಂಜಿನಿಯರಿಂಗ್ ಪರೀಕ್ಷೆ ದಿನಾಂಕ ಬದಲಿಸಿ
ಫೆಬ್ರುವರಿ 8ರಂದು ಎಂಜನಿಯರಿಂಗ್ ಪರೀಕ್ಷೆ ಹಾಗೂ 6ರಿಂದ ಗೇಟ್ ಪರೀಕ್ಷೆ ವೇಳಾಪಟ್ಟಿ ಬಂದಿದೆ. ಒಟ್ಟೊಟ್ಟಿಗೆ ಪರೀಕ್ಷೆ ಎದುರಾದರೆ ವಿದ್ಯಾರ್ಥಿಗಳು ಹೇಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯ?
ಎಂಜಿನಿಯರಿಂಗ್ ಕೊನೆಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳು, ಅಂತಿಮ ವರ್ಷದ ಪರೀಕ್ಷೆ ಬೇಡ ಎಂದು ಒತ್ತಾಯಿಸುತ್ತಿದ್ದಾರೆ. ಈ ಹಕ್ಕೊತ್ತಾಯದ ಹಿಂದಿನ ಕಾರಣದ ಬಗ್ಗೆ ಗುರುವಾರ ಟಿವಿ9 ಕನ್ನಡ ಫೇಸ್ಬುಕ್ ಲೈವ್ನಲ್ಲಿ ಚರ್ಚೆ ನಡೆಯಿತು. ವಿದ್ಯಾರ್ಥಿ ದೀಕ್ಷಿತ್, ಎಬಿವಿಪಿ ಕಾರ್ಯದರ್ಶಿ ಪ್ರತೀಕ್, ಎನ್ಎಸ್ಯುಐ ಕಾರ್ಯದರ್ಶಿ ಮನೀಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಟಿವಿ9 ಆ್ಯಂಕರ್ ಮಾಲ್ತೇಶ್ ಚರ್ಚೆ ನಡೆಸಿಕೊಟ್ಟರು.
ಫೆ.8ರಿಂದ ಎಂಜಿನಿಯರಿಂಗ್ 7ನೇ ಸೆಮಿಸ್ಟರ್ನ ಪರೀಕ್ಷೆ ಹಾಗೂ 6ರಿಂದ ಗೇಟ್ ಪರೀಕ್ಷೆ ವೇಳಾಪಟ್ಟಿ ಬಂದಿದೆ. ಒಟ್ಟೊಟ್ಟಿಗೆ ಪರೀಕ್ಷೆ ಎದುರಾದರೆ ವಿದ್ಯಾರ್ಥಿಗಳು ಹೇಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯ? ಸ್ವಾಯುತ್ತ ಕಾಲೇಜುಗಳು ಗೇಟ್ ಪರೀಕ್ಷೆ ಬರೆದ ನಂತರ ಎಂಜಿನಿಯರಿಂಗ್ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆದರೆ VTU ಮಾತ್ರ ಈ ನಿರ್ಧಾರ ಕೈಗೊಂಡಿಲ್ಲ. ಇದು ವಿದ್ಯಾರ್ಥಿಗಳಿಗೆ ಸಂಕಷ್ಟವನ್ನುಂಟು ಮಾಡಿದೆ.
ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ದೀಕ್ಷಿತ್ ಮಾತನಾಡಿ, ಗೇಟ್ ಮತ್ತು ಎಂಜಿನಿಯರಿಂಗ್ ಪರೀಕ್ಷೆ ಒಟ್ಟೊಟ್ಟಿಗೆ ಎದುರಾಗಿದೆ. ಯಾವ ಪರೀಕ್ಷೆಯ ಬಗ್ಗೆ ನಾವು ಗಮನ ಹರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಇದರಲ್ಲಿ ಯಾವುದೇ ಒಂದು ಪರೀಕ್ಷೆಯನ್ನೂ ನಾವು ಬಿಡುವಂತಿಲ್ಲ. ಅಂತಿಮ ವರ್ಷದ ಪರೀಕ್ಷೆ ಎದುರಿಸುತ್ತಿರುವ ಅರ್ಧದಷ್ಟು ವಿದ್ಯಾರ್ಥಿಗಳು ಗೇಟ್ ಪರೀಕ್ಷೆಗೆ ತಯಾರಾಗಿದ್ದಾರೆ. ಒಂದೇ ಬಾರಿ ಎರಡು ಪರೀಕ್ಷೆಗಳು ಎದುರಾದರೆ ಕಷ್ಟವಾಗುತ್ತೆ ಎಂದು ಅಭಿಪ್ರಾಯಪಟ್ಟರು.
ಫೇಸ್ಬುಕ್ ಲೈವ್ ಚರ್ಚೆಯ ವಿಡಿಯೊ ಇಲ್ಲಿದೆ…
ಈ ಕುರಿತಂತೆ ಮಾತನಾಡುತ್ತಿದ್ದ ದೀಕ್ಷಿತ್, ಸ್ವಾಯುತ್ತ ಕಾಲೇಜುಗಳು ಎಂಜಿನಿಯರಿಂಗ್ ಪರೀಕ್ಷೆ ಮುಂದೂಡಲು ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ VTU ಸಹ ಗಮನ ಹರಿಸಬೇಕು. ವಿಶ್ವವಿದ್ಯಾಲಯವು ಈ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ ಎಂದರು.
ಎಬಿವಿಪಿ ಕಾರ್ಯದರ್ಶಿ ಪ್ರತೀಕ್ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳು ನಮಗೆ ತಿಳಿದಿದೆ. ಗೇಟ್ ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ. ಆದರೆ ಎಂಜಿನಿಯರಿಂಗ್ ಪರೀಕ್ಷೆ ಮೂಂದೂಡಲು ಅವಕಾಶವಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಗೊಂದಲಕ್ಕೆ ಕಾರಣ. ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ, ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇಲ್ಲ ಎಂದೆನಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಕೆಲವೇ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟು ಈ ಕುರಿತು ಚರ್ಚಿಸಿ, ವೇಳಾಪಟ್ಟಿ ಪರಿಷ್ಕರಣೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಎನ್ಎಸ್ಯುಐ ಕಾರ್ಯದರ್ಶಿ ಮನೀಶ್ ಮಾತನಾಡಿ, ಕಳೆದ ಹಲ ದಿನಗಳಿಂದ ಈ ಸಮಸ್ಯೆಯನ್ನು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಈ ಕುರಿತು ಗಮನ ಹರಿಸುವಂತೆ ಕಾಣುತ್ತಿಲ್ಲ. ಆನ್ಲೈನ್ ಕ್ಲಾಸ್ಗಳನ್ನು ಮಾಡಿ, ಆಫ್ಲೈನ್ ಪರೀಕ್ಷೆಯನ್ನು ಮಾಡಿದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ. ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ ವಿದ್ಯಾರ್ಥಿ ಸಂಘಟನೆಗಳ ಜವಾಬ್ದಾರಿ. ನಾವು ಶೀಘ್ರ ಅಧಿಕಾರಿಗಳನ್ನು ಸಂಪರ್ಕಿಸಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಗಮನಕ್ಕೆ ತರುತ್ತೇವೆ. ವಿದ್ಯಾರ್ಥಿಗಳಿಗೆ ಬೆನ್ನ ಹಿಂದೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
Facebook Live| ವರ್ಕ್ ಫ್ರಮ್ ಹೋಮ್ನಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಇಲ್ಲಿದೆ ತಜ್ಞರ ಅಭಿಪ್ರಾಯ
Published On - 6:21 pm, Thu, 21 January 21