‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

  • TV9 Web Team
  • Published On - 18:46 PM, 14 Nov 2020
‘ಸಚಿನ್​ ಶೇಕ್ ಹ್ಯಾಂಡ್ ಕೊಟ್ಟಾಗ ಇನ್ಮುಂದೆ ಸ್ನಾನವೇ ಮಾಡೋದು ಬೇಡ ಅಂತಾ ಅಂದುಕೊಂಡಿದ್ದೆ’

ಭಾರತದ ಮಾಜಿ ಕ್ರಿಕೆಟಿಗ, ಆಲ್​ ರೌಂಡರ್ ಯುವರಾಜ್ ಸಿಂಗ್ ತಮ್ಮ ಬಹುಕಾಲದ ಗುಟ್ಟೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯುವಿ ಪಾದಾರ್ಪಣೆ ಮಾಡಿದ್ದು 2000ನೇ ಇಸವಿಯಲ್ಲಿ. ಭಾರತದ ಪರವಾಗಿ ಅಂಡರ್​-19 ವಿಶ್ವಕಪ್ ತಂಡದಲ್ಲಿ ಮಿಂಚಿದ್ದ ಯುವಿಯನ್ನ ಆಗಷ್ಟೇ ಅಂತಾರಾಷ್ಟ್ರೀಯ ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು.

ಆಗ ಭಾರತದ ತಂಡದಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಉತ್ತುಂಗದಲ್ಲಿದ್ದರು. ಬಾಲ್ಯದಿಂದಲೂ ಸಚಿನ್ ಆಟವನ್ನು ನೋಡಿ, ಅವರಿಂದ ಪ್ರೇರೇಪಣೆಗೊಂಡಿದ್ದ ಯುವರಾಜ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಸಚಿನ್​ರನ್ನು ನೋಡಿದಾಗ ರೋಮಾಂಚನಗೊಂಡಿದ್ದರಂತೆ.

‘ಸ್ನಾನ ಮಾಡಲೇಬಾರದು ಎನ್ನುವಷ್ಟು ಪುಳಕಿತನಾಗಿದ್ದೆ’
ಅದರಲ್ಲೂ, ತಂಡದ ಆಟಗಾರರಿದ್ದ ಬಸ್​ನಲ್ಲಿ ಸಚಿನ್ ಸ್ವತಃ ತಮ್ಮ ಪರಿಚಯ ಮಾಡಿಕೊಂಡು ಶೇಕ್ ಹ್ಯಾಂಡ್ ಮಾಡಿದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿರುವ ಯುವಿ, ಆ ಕ್ಷಣದಲ್ಲಿ ತಾವೆಷ್ಟು ಪುಳಕಿತಗೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಸಚಿನ್ ಶೇಕ್ ಹ್ಯಾಂಡ್ ಮಾಡಿದ ಬಳಿಕ ತಮ್ಮ ಕೈಯಿಂದ ಇಡೀ ದೇಹವನ್ನು ಸ್ಪರ್ಶಿಸಿಕೊಂಡ ಯುವರಾಜ್ ಸಿಂಗ್ ಆ​ ಶೇಕ್ ಹ್ಯಾಂಡ್​ನ ಸ್ಪರ್ಶ ಶಾಶ್ವತವಾಗಿ ಉಳಿಯಬೇಕೆಂದು ಸ್ನಾನ ಮಾಡಲೇಬಾರದು ಎಂದು ನಿಶ್ಚಯಿಸಿಬಿಟ್ಟರಂತೆ.

ನೆಟ್​ಫ್ಲಿಕ್ಸ್​ನಲ್ಲಿ ಅಪ್ಲೋಡ್ ಆಗಿರುವ ಸ್ಟೋರೀಸ್ ಬಿಹೈಂಡ್ ದಿ ಸ್ಟೋರಿ ಎಂಬ ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಯುವಿ ಅಂಡರ್-19 ನಂತರ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್, ಶ್ರೀನಾಥ್​ರೊಂದಿಗೆ ಆಡುವಾಗ ಸ್ವತಃ ತಾನೆಲ್ಲಿದ್ದೇನೆ ಎಂದು ಗೊಂದಲವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಸಚಿನ್ ಹೊಸಬರಿಗೆ ನೀಡುತ್ತಿದ್ದ ಪ್ರೋತ್ಸಾಹ ಹಾಗೂ ಮೈದಾನದಾಚೆ ಬೇರೆಯವರೊಂದಿಗೆ ನಡೆದುಕೊಳ್ಳುತ್ತಿದ್ದ ಕುರಿತು ಮಾತನಾಡಿರುವ ಯುವರಾಜ್​ ಆಡುವಾಗ ಸಚಿನ್ ಮೈದಾನದಲ್ಲಿದ್ದರೆ ಮಾತ್ರ ಗೆಲ್ಲುವ ಭರವಸೆ ಇರುತ್ತಿತ್ತು. ಅವರು ಔಟ್ ಆದ ಕೂಡಲೇ ಅಭಿಮಾನಿಗಳ ಮುಖವು ಬಾಡುತ್ತಿತ್ತು. ಹಾಗಾಗಿ, ಇಡೀ ತಂಡದ ಭಾರವನ್ನು ಹೊತ್ತು ಮೈದಾನಕ್ಕಿಳಿಯುತ್ತಿದ್ದ ಸಚಿನ್​ ಆಟ ಮುಗಿದ ನಂತರ ನಮ್ಮೊಂದಿಗೆ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಅಸಾಧ್ಯ ಎಂದು ಹೇಳಿದ್ದಾರೆ.