AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರ್ಕರ್ ಬಗ್ಗೆ ಅವಮಾನಕಾರಿ ಹೇಳಿಕೆ; ನಾಸಿಕ್ ನ್ಯಾಯಾಲಯದಿಂದ ರಾಹುಲ್ ಗಾಂಧಿಗೆ ಜಾಮೀನು

ಹಿಂದುತ್ವವಾದಿ ನಾಯಕ ವಿಡಿ ಸಾವರ್ಕರ್ ಬಗ್ಗೆ 2022ರ ನವೆಂಬರ್‌ನಲ್ಲಿ ಹಿಂಗೋಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಅವಹೇಳನಕಾರಿ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ನಾಸಿಕ್ ನ್ಯಾಯಾಲಯ ಇಂದು ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿದೆ.

ಸಾವರ್ಕರ್ ಬಗ್ಗೆ ಅವಮಾನಕಾರಿ ಹೇಳಿಕೆ; ನಾಸಿಕ್ ನ್ಯಾಯಾಲಯದಿಂದ ರಾಹುಲ್ ಗಾಂಧಿಗೆ ಜಾಮೀನು
Congress Mp Rahul Gandhi
ಸುಷ್ಮಾ ಚಕ್ರೆ
|

Updated on: Jul 24, 2025 | 10:33 PM

Share

ನಾಸಿಕ್, ಜುಲೈ 24: 2022ರ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ (ವಿಡಿ ಸಾವರ್ಕರ್) ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಇಂದು ಮಹಾರಾಷ್ಟ್ರದ ನಾಸಿಕ್ ನಗರದ ನ್ಯಾಯಾಲಯವು ಜಾಮೀನು ನೀಡಿದೆ.

ರಾಹುಲ್ ಗಾಂಧಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರ್.ಸಿ ನರ್ವಾಡಿಯಾ ಅವರ ಮುಂದೆ ಹಾಜರಾದರು. ರಾಹುಲ್ ಗಾಂಧಿ ತಾವು ನಿರಪರಾಧಿ ಎಂದು ವಾದಿಸಿದರು. ಅವರ ಮನವಿಯ ನಂತರ ಅವರ ಕಾನೂನು ತಂಡವು ಜಾಮೀನಿಗಾಗಿ ಅರ್ಜಿ ಸಲ್ಲಿಸಿತು. 15,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ನೀಡಲಾಯಿತು.

ಇದನ್ನೂ ಓದಿ: ‘ಮನಮೋಹನ್ ಸಿಂಗ್ ನೀಡಿದ್ದ ಪ್ರಧಾನಿ ಹುದ್ದೆಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದರು’; ಪಪ್ಪು ಯಾದವ್

ರಾಹುಲ್ ಗಾಂಧಿ ವಿರುದ್ಧದ ಆರೋಪಗಳೇನು?:

ನಾಸಿಕ್ ನಿವಾಸಿ ಮತ್ತು ಸ್ಥಳೀಯ ಸರ್ಕಾರೇತರ ಸಂಸ್ಥೆಯ ನಿರ್ದೇಶಕ ದೇವೇಂದ್ರ ಭೂತಾಡ ಅವರು ತಮ್ಮ ವಕೀಲ ಮನೋಜ್ ಪಿಂಗಳೆ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ರಾಹುಲ್ ಗಾಂಧಿ ಹಿಂಗೋಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು 2022ರ ನವೆಂಬರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳು ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಷ್ಟ್ರೀಯತಾವಾದಿ ಐಕಾನ್ ಎಂದು ಅನೇಕರಿಂದ ಪರಿಗಣಿಸಲ್ಪಟ್ಟ ಸಾವರ್ಕರ್ ಅವರ ಖ್ಯಾತಿಗೆ ಹಾನಿಯನ್ನುಂಟುಮಾಡಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಖಕ್ಕೆ ಮಸಿ ಬಳಿಯುತ್ತೇವೆ, ಕಲ್ಲು ಎಸೆಯುತ್ತೇವೆ; ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಶಿವಸೇನೆ ನಾಯಕ ಬೆದರಿಕೆ

ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಸಿಕೊಳ್ಳುವ ವೀರ ಸಾವರ್ಕರ್ ಬ್ರಿಟಿಷರ ಮುಂದೆ ಕೈ ಜೋಡಿಸಿ, ಬ್ರಿಟಿಷ್ ಸರ್ಕಾರಕ್ಕೆ ಕೆಲಸ ಮಾಡುವುದಾಗಿ ಬೇಡಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ಹೇಳಿದ್ದರು. ಸಾವರ್ಕರ್ ಅವರು ಜೈಲಿನಲ್ಲಿದ್ದಾಗ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಸೂಚಿಸುವ ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಬಿಜೆಪಿಯೊಂದಿಗೆ ಹೊಂದಿಕೊಂಡಿರುವ ಶಿವಸೇನಾ ಬಣಗಳು ಸೇರಿದಂತೆ ವಿವಿಧ ಬಲಪಂಥೀಯ ಮತ್ತು ರಾಷ್ಟ್ರೀಯತಾವಾದಿ ಗುಂಪುಗಳಿಂದ ವ್ಯಾಪಕ ಟೀಕೆಗೆ ಕಾರಣವಾಯಿತು. ಇದಾದ ನಂತರ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ