
ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಗಂಗಾ ಆರತಿ ಮಾದರಿಯಲ್ಲಿ ತುಂಗಾಭದ್ರ ಆರತಿ ಮಹೋತ್ಸವ ವೈಭವದಿಂದ ನಡೆದಿದೆ. ಕಳೆದ ಮೂರು ವರ್ಷಗಳಿಂದ ಹಂಪಿ ಉತ್ಸವದ ಮುನ್ನ ನಡೆಯುವ ತುಂಗಾಭದ್ರ ಆರತಿ ಮಹೋತ್ಸವವನ್ನ ಈ ಬಾರಿಯೂ ಕೂಡ ಜಿಲ್ಲಾಡಳಿತದಿಂದ ವೈಭವದಿಂದ ಆಚರಿಸಲಾಯ್ತು. ವಿಶ್ವಪರಂಪರೆ ಹಿನ್ನೆಲೆಯಲ್ಲಿರುವ ಈ ತುಂಗಾಭದ್ರ ಆರತಿ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ಒಂದೇ ದಿನ ಸಾಂಕೇತಿಕವಾಗಿ ಹಂಪಿ ಉತ್ಸವ ಆಚರಣೆ ಮಾಡಲಾಯ್ತು.
ನದಿ ತೀರದಲ್ಲಿ ದೀಪಗಳ ಬೆಳಕಿನ ಕಲರವ..
ಹೌದು ಪವಿತ್ರ ತುಂಗಾಭದ್ರ ನದಿಯ ದಡದಲ್ಲಿ ಎಲ್ಲಿ ನೋಡಿದರಲ್ಲಿಯೂ ದೀಪಗಳ ಸಾಲು ಸಾಲು… ಬೆಳಕಿನ ವೈಭವ. ನದಿಯಲ್ಲಿ ಬಂಡೆಗಳ ಮೇಲೂ ಉರಿದ ಹಣತೆ, ನದಿಗೆ ಬಾಗಿನ ಸಮರ್ಪಣೆ. ಇದು ಹಂಪಿ ಉತ್ಸವದ ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾಭದ್ರ ನದಿ ದಡದಲ್ಲಿ ನಡೆದ ತುಂಗಾರತಿ ಮಹೋತ್ಸದಲ್ಲಿ ಕಂಡುಬಂದ ದೃಶ್ಯಗಳು. ಈ ತುಂಗಾರತಿ ಮಹೋತ್ಸವವು ಜನಮನಸೂರೆಗೊಂಡಿತು.
ನದಿ ದಡದಲ್ಲಿಯೇ ಸುಂದರ ಮಂಟಪ ನಿರ್ಮಿಸಿ ತಾಯಿ ಭುವನೇಶ್ವರಿದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ವಿವಿಧ ರೀತಿಯ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ತುಂಗಾಭದ್ರ ನದಿ ಮತ್ತು ಭುವನೇಶ್ವರಿ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು.
ಭುವನೇಶ್ವರಿ ದೇವಿಗೆ ಹಾಗೂ ತುಂಗಾಭದ್ರೆಗೆ ವಿವಿಧ ಬಗೆಯ ಆರತಿಗಳನ್ನು ಬೆಳಗಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಆನಂದಸಿಂಗ್, ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ ಸೇರಿದಂತೆ ಇನ್ನೀತರರು ಭಾಗವಹಿಸಿದ್ದರು.
ಪ್ರತಿ ತಿಂಗಳು ಹುಣ್ಣಿಮೆ ದಿನ ತುಂಗಾರತಿ ಕಾರ್ಯಕ್ರಮ..
ಪುರಾಣ ಪ್ರಸಿದ್ಧ ಕ್ಷೇತ್ರವಾದ ಹಂಪಿಯಲ್ಲಿ ಆರತಿ ಬೆಳಗಿ, ಮಂಗಳವಾದ್ಯಗಳ ಮಧ್ಯೆ ನದಿಗೆ ಬಾಗಿನ ಅರ್ಪಿಸಲಾಯಿತು. ನದಿಯ ಸುತ್ತಲೂ ದೀಪಗಳನ್ನು ಹಚ್ಚಲಾಗಿತ್ತು. ಹಂಪಿ ಉತ್ಸವದ ನಿಮಿತ್ತ ಕಳೆದ ಮೂರು ವರ್ಷಗಳಿಂದಲೂ ತುಂಗಾಭದ್ರ ನದಿಯಲ್ಲಿ ತುಂಗಾರತಿ ಮಹೋತ್ಸವ ಮಾಡಲಾಗುತ್ತಿದೆ. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಒಂದು ದಿನ ಸಾಂಕೇತಿಕವಾಗಿ ಹಂಪಿ ಉತ್ಸವ ಆಚರಿಸಲಾಯ್ತು. ಆದರೆ ತುಂಗಾರತಿ ಮಹೋತ್ಸವ ಮಾತ್ರ ಪ್ರತಿ ವರ್ಷದಂತೆ ವೈಭವದ ಮೂಲಕ ಜರುಗಿತು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ್ ಸಿಂಗ್ ಇನ್ಮುಂದೆ ಪ್ರತಿ ತಿಂಗಳು ಹುಣ್ಣಿಮೆ ದಿನ ತುಂಗಾರತಿ ಕಾರ್ಯಕ್ರಮ ಮಾಡಲಾಗುವುದು ಅಂತಾ ತಿಳಿಸಿದ್ರು.
ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ನಡೆದ ವಿವಿಧ ಜಾನಪದ ಕಲಾತಂಡಗಳ ಶೋಭಾಯಾತ್ರೆ ಮೆರವಣಿಗೆಯು ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿತು. ಇತ್ತ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬೀದಿಯ ಉದ್ದಕ್ಕೂ ಶೋಭಾಯಾತ್ರೆಯ ಸಂಭ್ರಮ. ಸಾಂಪ್ರದಾಯಿಕ ನಾದಸ್ವರದೊಂದಿಗೆ ಮಂಗಳಾರತಿ ಬೆಳಗುವುದರ ಮೂಲಕ ಸಚಿವ ಆನಂದ್ ಸಿಂಗ್ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ರು.
ಶ್ರೀ ಕೃಷ್ಣದೇವರಾಯನ ಒಡ್ಡೋಲಗವೇ ಸಾಗುತ್ತಿರುವಂತೆ ಭಾಸವಾಗುತ್ತಿತ್ತು..
ಗಣ್ಯ ಮಾನ್ಯರನ್ನು ಸ್ವಾಗತಿಸಲೆಂದೇ ಆಗಮಿಸಿದ್ದ ಗಜಗಳು ಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಹೆಜ್ಜೆಯನ್ನಾಕುತ್ತಿದ್ದರೆ, ವಿವಿಧೆಡೆಯಿಂದ ಆಗಮಿಸಿದ್ದ ಜನರು ಈ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಶೋಭಾಯಾತ್ರೆಯ ಮುಂಭಾಗದಲ್ಲಿ ಕಹಳೆ ವಾದನವು ಉತ್ಸವದ ಆರಂಭಕ್ಕೆ ಶುಭ ಕೋರಿದಂತಿತ್ತು. ಯಾತ್ರೆಯಲ್ಲಿ ಸಾಗಿಬಂದ ವೀರಗಾಸೆ, ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ವಾದನ, ನಂದಿಧ್ವಜ ಪ್ರದರ್ಶನ ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯನ ಒಡ್ಡೋಲಗವೇ ಸಾಗುತ್ತಿರುವಂತೆ ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಎಳೆದೊಯ್ಯುವಂತಿತ್ತು.
ಹಗಲುವೇಷ, ಸಿಂದೋಳ್ ಕುಣಿತ, ಹಕ್ಕಿಪಿಕ್ಕಿ ಬುಡಕಟ್ಟು ನೃತ್ಯ, ಗೊರವರ ಕುಣಿತ, ಮರಗಾಲು ಕುಣಿತ, ಕೀಲುಕುದುರೆ ಪ್ರದರ್ಶನ ಗಮನ ಸೆಳೆದವು. ಜಾನಪದ ಐಸಿರಿಯನ್ನು ಜನರು ಕಣ್ತುಂಬಿಕೊಂಡರು. ಇನ್ನು ಇದುವರೆಗೆ ಕಾಶಿಯಲ್ಲಿ ಗಂಗಾರತಿ ನಡೆಯುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಳ್ಳಾರಿ ಜಿಲ್ಲಾಡಳಿತದಿಂದ ಹಂಪಿ ಉತ್ಸವದ ಭಾಗವಾಗಿ ತುಂಗಾಭದ್ರ ಆರತಿ ಮಹೋತ್ಸವ ಮಾಡುತ್ತಿರುವುದು ವಿಶೇವಾಗಿದೆ.
-ಬಸವರಾಜ ಹರನಹಳ್ಳಿ
Published On - 2:16 pm, Sat, 14 November 20