ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳು ಬಂದ್ ಆಚರಿಸಲು ಕರೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ-ಪರ ಪ್ರೇಮ ತೋರಿಸಲು ಮುಂದಾಗಿದ್ದು ಒಂದು ವರ್ಷ ಕನ್ನಡ ಕಾಯಕ ವರ್ಷಾಚರಣೆ ನಡೆಸಲು ನಿರ್ಧರಿಸಿ ತಾನೂ ಕನ್ನಡ ಪರ ಎಂಬುದನ್ನು ತೋರಿಸಲು ಒಂದು ಸುತ್ತೋಲೆಯನ್ನೂ ಹೊರಡಿಸಿದೆ.
ಸುತ್ತೋಲೆಯಲ್ಲಿ 19-ಅಂಶಗಳ ಕನ್ನಡ ಕಾಯಕ ವರ್ಷಾಚರಣೆ ಅಡಕವಾಗಿದೆ, ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ ಸರ್ಕಾರಿ ಆದೇಶದ ಸುತ್ತೋಲೆ ಕನ್ನಡದಲ್ಲಿ ಹೊರಡಿಸುವುದು, ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಾರ್ಯಗತಗೊಳಿಸುವುದು ಮತ್ತು ತಂತ್ರಜ್ಞಾನದಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸಹಾಯವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಗೊಳಿಸುವುದು ಆಗಿವೆ.
ಹಾಗೆಯೇ, ಇಲಾಖಾವಾರು ನೀತಿ, ಕರಡು ಪ್ರತಿಗಳು ಕನ್ನಡದಲ್ಲಿರಬೇಕು. ಫಲಾನುಭವಿಗಳಿಗೆ ಕಳಿಸುವ ಸಂದೇಶಗಳು ಕನ್ನಡದಲ್ಲಿರಬೇಕು. ನಗರ, ಪಟ್ಟಣಗಳ ಹೆಸರನ್ನು ಕನ್ನಡ ಭಾಷೆಯ ಉಚ್ಚಾರಣೆಯಂತೆಯೇ ಬಳಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ಮೊದಲಾದವುಗಳಲ್ಲಿ ಕೇವಲ ಕನ್ನಡ ಭಾಷೆ ಮಾತ್ರ ಬಳಕೆಯಾಗಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು, ರೋಗಿಗಳಿಗೆ ನೀಡುವ ದಾಖಲೆ ಮತ್ತು ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೂ ವಿವರಗಳನ್ನು ಕನ್ನಡದಲ್ಲೇ ಮುದ್ರಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.