ಸದನದಲ್ಲಿ ತಾಳ್ಮೆ ಕಳೆದುಕೊಂಡು ತೇಜಸ್ವಿಯನ್ನು ತರಾಟೆಗೆ ತೆಗೆದುಕೊಂಡ ನಿತೀಶ್
ವಿರೋಧ ಪಕ್ಷದ ನಾಯಕ ತೇಜಸ್ವೀ ಯಾದವ್ ಅವರ ನಿರಂತರ ಆರೋಪಗಳಿಂದ ರೋಸಿಹೋದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಯುವ ನಾಯಕನನ್ನು ತರಾಟಗೆ ತೆಗೆದುಕೊಂಡರಲ್ಲದೆ ಮುಂದಿನ ದಿನಗಳಲ್ಲಿ ವರ್ತನೆಯನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು

ವಿಧಾನ ಸಭೆ ಕಲಾಪಗಳು ನಡೆಯುವಾಗ ವಿರೋಧ ಪಕ್ಷದ ನಾಯಕರು ಎಷ್ಟೇ ಗಂಭೀರವಾದ ಆರೋಪಗಳನ್ನು ತಮ್ಮ ವಿರುದ್ಧ ಮಾಡಿದರೂ ತಾಳ್ಮೆ ಕಳೆದುಕೊಳ್ಳ್ಳದೆ ಸಮಾಧಾನಚಿತ್ತರಾಗಿ ಉತ್ತರಿಸುವ ಬಿಹಾರದ ಮುಖ್ಯಮಂತ್ರಿ ಇಂದು ವಿರೋಧಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ಸತತ ಟೀಕೆ ಮತ್ತು ಆರೋಪಗಳಿಂದ ಬೇಸತ್ತು, ತಾಳ್ಮೆ ಕಳೆದುಕೊಂಡರು.
ಮೊನ್ನೆಯಷ್ಟೇ ಕೊನೆಗೊಂಡ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದ ಆನಿವಾರ್ಯತೆ ಎದುರಿಸುತ್ತಿರುವ ಆರ್ಜೆಡಿ ನಾಯಕ ತೇಜಸ್ವೀ ಯಾದವ್ಗೆ ಪರಿಸ್ಥಿತಿಯೊಂದಿಗೆ ಏಗುವುದು ಪ್ರಾಯಶಃ ಸಾಧ್ಯವಾಗುತ್ತಿಲ್ಲ. ಅವರು ಪ್ರತಿದಿನ ನಿತೀಶ್ ಕುಮಾರ್ ಅವರ ವಿರುದ್ಧ ಆಪಾದನೆಗಳನ್ನು ಮಾಡುತ್ತಿದ್ದಾರೆ.
ಇಂದಿನ ಕಲಾಪದಲ್ಲಿ ಲಾಲೂ ಪುತ್ರ ತೇಜಸ್ವಿ 1991ರ ಕೊಲೆ ಪ್ರಕರಣ ಮತ್ತು ಸಿಎಂ: ದಿ ಸ್ರಿಜನ್ ಸ್ಕ್ಯಾಮ್ ಪುಸ್ತಕವನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳನ್ನು ಟೀಕಿಸಿಲಾರಂಭಿಸಿದರು. ಆಗ ಎದ್ದು ನಿಂತ ಸಂಸದೀಯ ವ್ವಹಾರಗಳ ಸಚಿವ ವಿಜಯಕುಮಾರ್, ಸ್ಪೀಕರ್ ವಿಜಯ ಕುಮಾರ್ ಅವರಿಗೆ, ಶಾಸಕರು ಅಸಂಸದೀಯ ಪದಗಳನ್ನು ಬಳಸುತ್ತಿದ್ದಾರೆ, ದಯವಿಟ್ಟು ಅವುಗಳನ್ನು ಕಡತದಿಂದ ತೆಗೆದುಹಾಕಬೇಕೆಂದು ಮನವಿ ಮಾಡಿಕೊಂಡರು.
ಅದಾದ ನಂತರವೂ ತೇಜಸ್ವಿ ಯಾದವ್ ತಮ್ಮ ವಾಕ್ಬಾಣಗಳನ್ನು ಮುಂದುವರಿಸಿದಾಗ ಸಹನೆ ಕಳೆದುಕೊಂಡ ನಿತೀಶ್ ಕುಮಾರ್ ಎದ್ದು ನಿಂತು, ‘‘ ತೇಜಸ್ವಿ ಅವರು ಅಸಂಮಜಸ, ಅಸಂಬದ್ಧ ಮತ್ತು ಅತಾರ್ಕಿಕ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಸಾರಾ ಸಗಟು ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನ ಸಹೋದರನಂಥ-ಗೆಳೆಯನ ಮಗನಾಗಿರುವುದರಿಂದ ಇದುವರೆಗೂ ಮೌನವಾಗಿದ್ದೆ. ಅವರು ತಮ್ಮ ಸ್ವಭಾವನ್ನು ತಿದ್ದಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ನಾನು ಏನನ್ನೂ ಹೇಳಲಿಲ್ಲ. ಅವರ ತಂದೆಯನ್ನು ನಾನೇ ಶಾಸಕಾಂಗ ಪಕ್ಷದ ನಾಯಕನಾಗಿ ಮಾಡಿದ್ದನ್ನು ಅವರು ಮರೆತಿರುವಂತಿದೆ. ತೇಜಸ್ವೀ ಅವರನ್ನು ಉಪ ಮುಖ್ಯಮಂತ್ರಿ ಸಹ ನಾನೇ ಮಾಡಿದ್ದು. ಇಷ್ಟೆಲ್ಲ ಗೊತ್ತಿದ್ದರೂ ಅವರು ಹೇವರಿಕೆ ಹುಟ್ಟಿಸುವ ರೀತಯಲ್ಲಿ ಮಾತಾಡುತ್ತಿದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ವಿವರಿಸುವಂತೆ ಅವರಿಗೆ ಹೇಳಿದ್ದೆ, ಅದರೆ ಅವರು ಅದನ್ನು ಮಾಡಲಿಲ್ಲ. ನಾನು ಇದುವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ, ಅದೀಗ ಮಿತಿ ಮೀರಿದೆ, ನನ್ನಿಂದ ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ,’’ ಎಂದು ಭುಸುಗುಡುತ್ತಾ ಹೇಳಿದರು.
ಅಷ್ಟಾಗಿಯೂ ಆರ್ಜೆಡಿ ಸದಸ್ಯರು ಸದನದಲ್ಲಿ ಗಲಾಟೆ ಮಾಡುವುದನ್ನು ಮುಂದುವರಿಸಿದ್ದರಿಂದ ಸಭಾಧ್ಯಕ್ಷರು ಸದನವನ್ನು ಒಂದು ಗಂಟೆಯ ಮಟ್ಟಿಗೆ ಮುಂದೂಡಿದರು. ಇಂದು, 5-ದಿನಗಳ ಬಿಹಾರ ವಿಧಾನ ಸಭಾ ಆದಿವೇಶನದ ಕೊನೆಯ ದಿನವಾಗಿತ್ತು.




