ಬಾಗಲಕೋಟೆ: ಲೋ ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ KSRP ಕಾನ್ಸ್ಟೇಬಲ್ ಗೆ ಆಸ್ಪತ್ರೆಯಲ್ಲಿ ಕೋವಿಡ್ ವರದಿ ಇಲ್ಲ ಎಂಬ ಕಾರಣದಿಂದಾಗಿ ಬೆಡ್ ನೀಡಿಲ್ಲ. ಇದರಿಂದಾಗಿ ಕಾನ್ಸ್ಟೇಬಲ್ ಚಿಕಿತ್ಸೆ ಸಿಗದೆ ನರಳಿ ನರಳಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ KSRP ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್ಟೇಬಲ್, ಅನಾರೋಗ್ಯದ ಕಾರಣದಿಂದಾಗಿ ಬಾಗಲಕೋಟೆಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾರೆ. ಆದರೆ ಕೋವಿಡ್ ವರದಿ ಇಲ್ಲ ಎಂಬ ಕಾರಣ ಹೇಳಿ ಆಸ್ಪತ್ರೆಯ ವೈದ್ಯರು ಕಾನ್ಸ್ಟೇಬಲ್ ಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ರಾತ್ರಿ ಒಂದು ಗಂಟೆವರೆಗೂ ಆಸ್ಪತ್ರೆಯ ಮುಂದೆ ಇರುವ ಗಣಪತಿ ದೇವಸ್ಥಾನದಲ್ಲಿಯೇ ಕಾನ್ಸ್ಟೇಬಲ್ ನರಳುತ್ತಾ ಮಲಗಿದ್ದಾರೆ.
ಕೊನೆಗೆ ಖಾಸಗಿ ವೈದ್ಯರೊಬ್ಬರ ಹೇಳಿಕೆಯ ನಂತರ ಆಸ್ಪತ್ರೆ ಸಿಬ್ಬಂದಿ ಕಾನ್ಸ್ಟೇಬಲ್ ಗೆ ಬೆಡ್ ವ್ಯವಸ್ಥೆ ಮಾಡಿದ್ದಾರಾದರೂ, ಯಾವುದೇ ಚಿಕಿತ್ಸೆ ನೀಡಲು ಹತ್ತಿರ ಸುಳಿಯದೆ ನಿರ್ಲಕ್ಷ ತೋರಿದ್ದಾರೆ. ಇದರಿಂದ ಮುಂಜಾನೆ 4 ಗಂಟೆವರೆಗೂ ಬೆಡ್ ಮೇಲೆ ನರಳಾಡಿದ ಕಾನ್ಸ್ಟೇಬಲ್ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಕಾನ್ಸ್ಟೇಬಲ್ ಸಾವಿನ ನಂತರ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿರುವ ವೈದ್ಯರ ವಿರುದ್ಧ ಕಾನ್ಸ್ಟೇಬಲ್ ಪತ್ನಿ ಕಿಡಿಕಾರಿದ್ದು, ನನ್ನ ಪತಿಯ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷವೇ ಕಾರಣವೆಂದು ಕಣ್ಣೀರಿಟ್ಟಿದ್ದಾರೆ.