ಅಂದು ಸಂಸದನಾಗಿ, ಇಂದು ಶಾಸಕನಾಗಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಲಾಲ್ಡುಹೋಮಾಗೆ ಗೇಟ್​ಪಾಸ್

ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡ ಪ್ರಪ್ರಥಮ ಲೋಕಸಭಾ ಸದಸ್ಯ ಎಂಬ ಅಪಖ್ಯಾತಿಗೂ ಇವರು ಪಾತ್ರರಾಗಬೇಕಾಯಿತು. ಇದೀಗ, ಇದೇ ಕಾಯ್ದೆಯಡಿಯಲ್ಲಿ ಶಾಸಕನಾಗಿ ಅನರ್ಹಗೊಂಡಿದ್ದಾರೆ.

  • Publish Date - 3:42 pm, Sun, 29 November 20 Edited By: KUSHAL V
ಅಂದು ಸಂಸದನಾಗಿ, ಇಂದು ಶಾಸಕನಾಗಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಲಾಲ್ಡುಹೋಮಾಗೆ ಗೇಟ್​ಪಾಸ್
ಸ್ವತಂತ್ರ ಶಾಸಕ ಲಾಲ್ಡುಹೋಮಾ

ಐಜ್ವಾಲ್​: ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಶಾಸಕ ಲಾಲ್ಡುಹೋಮಾರನ್ನು ಕಳೆದ ಶುಕ್ರವಾರ ಮಿಜೋರಾಂ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದಿದ್ದ ಲಾಲ್ಡುಹೋಮಾ ತದ ನಂತರ ಜೊರಾಂ ಪೀಪಲ್ಸ್ ಮೂವ್​ಮೆಂಟ್(ZPM) ಪಕ್ಷ ಸೇರಿದ್ದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲಾಗಿದೆ.

ಲಾಲ್ಡುಹೋಮಾ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ ತಾವಿದ್ದ ಕಾಂಗ್ರೆಸ್​ ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು.

ಆದರೆ ಇದೀಗ, ಜೊರಾಂ ಪೀಪಲ್ಸ್ ಮೂವ್​ಮೆಂಟ್(ZPM) ಪಕ್ಷ ಸೇರಿದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಲಾಲ್ಡುಹೋಮಾರ ಸದಸ್ಯತ್ವ ರದ್ದಾಗಿದೆ ಎಂದು ಸ್ಪೀಕರ್ ಲಾಲ್ರೆನ್ಲಿಯಾನಾ ಸೈಲೊ ಹೇಳಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಲಾಲ್ಡುಹೋಮಾ 1988ರಲ್ಲಿ ಲೋಕಸಭಾ ಸದಸ್ಯರಾಗಿದ್ದಾಗ ಕಾಂಗ್ರೆಸ್​ ಪಕ್ಷದಿಂದ ರಾಜೀನಾಮೆ ನೀಡಿದ್ದಕ್ಕೆ ಇದೇ ಕಾಯ್ದೆ ಅಡಿಯಲ್ಲಿ ಇವರನ್ನು ಸಂಸದನಾಗಿ ಅನರ್ಹಗೊಳಿಸಲಾಗಿತ್ತು. ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡ ಪ್ರಪ್ರಥಮ ಲೋಕಸಭಾ ಸದಸ್ಯ ಎಂಬ ಅಪಖ್ಯಾತಿಗೂ ಇವರು ಪಾತ್ರರಾಗಬೇಕಾಯಿತು. ಇದೀಗ, ಇದೇ ಕಾಯ್ದೆಯಡಿಯಲ್ಲಿ ಶಾಸಕನಾಗಿ ಅನರ್ಹಗೊಂಡಿದ್ದಾರೆ.

ಸಂವಿಧಾನದ 10ನೇ ಶೆಡ್ಯೂಲ್​ನ ಪ್ಯಾರಾ2(2) ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಲಾಲ್ಡುಹೋಮಾರನ್ನು ಅನರ್ಹಗೊಳಿಸುವಂತೆ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್​) ನ 12 ಶಾಸಕರು ಸ್ಪೀಕರ್​ಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆಯ ಆಧಾರದ ಮೇಲೆ ಲಾಲ್ಡುಹೋಮಾ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ ಎಂದು ಸ್ಪೀಕರ್ ಸೈಲೋ ಹೇಳಿದ್ದಾರೆ.