ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

  • TV9 Web Team
  • Published On - 19:30 PM, 20 Aug 2020
ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ ದೂರವಿರುವ ಜಿಲ್ಲಾಕೇಂದ್ರಲ್ಲಿ ಗೊತ್ತುಮಾಡಲಾಗಿತ್ತು. ಲಾಕ್​ಡೌನ್​ ಬಳಿಕ ಆತನ ಹಳ್ಳಿಯಿಂದ ಜಿಲ್ಲಾಕೇಂದ್ರಕ್ಕೆ ಬಸ್​ ವ್ಯವಸ್ಥೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಹಳ್ಳಿಯ ಇತರ ಗ್ರಾಮಸ್ಥರ ಬಳಿ ಯಾವುದೇ ವಾಹನವಿಲ್ಲದ ಕಾರಣ ಶೋಭಾರಾಂ ಮಗನನ್ನು ಪರೀಕ್ಷೆಗೆ ಸೈಕಲ್​ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದ.

ಸೈಕಲ್​ ಮೇಲೇ 105 ಕಿ.ಮಿ. ಪಯಣ
ಭಾನುವಾರ ರಾತ್ರಿ ಸೈಕಲ್​ ಮೇಲೆ ಹೊರಟ ತಂದೆ ಮತ್ತು ಮಗ ಪರೀಕ್ಷೆ ಪ್ರಾರಂಭವಾಗಲು ಕೇವಲ 15 ನಿಮಿಷಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಕ್ಕೆ ತಲುಪಿದರು. ಇದೀಗ ಆಶೀಶ್​ ಪರೀಕ್ಷೆ ಪ್ರಾರಂಭವಾಗಿದ್ದು ಅತನ ಪರೀಕ್ಷೆ ಮುಗಿಯುವವರೆಗೂ ಶೋಭಾರಾಂ ಅಲ್ಲೇ ಉಳಿದುಕೊಳ್ಳಲು ಬೇಕಾದ ಅಗತ್ಯ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಮನೆಯಿಂದಲೇ ಹೊತ್ತು ತಂದಿದ್ದಾನೆ.

ಕಾರ್ಮಿಕನ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು
ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅಪ್ಪ ಹಾಗೂ ಮಗನಿಗೆ ಉಳಿದುಕೊಳ್ಳಲು ವಸತಿ ಮತ್ತು ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ದಾರೆ. ಜೊತೆಗೆ, ಪರೀಕ್ಷೆಯ ನಂತರ ವಾಪಸ್​ ಊರು ತಲುಪಲು ವ್ಯವಸ್ಥೆ ಸಹ ಮಾಡಿಕೊಟ್ಟಿದ್ದಾರೆ.

ನೀವು ಸೈಕಲ್​ ತುಳಿದುಕೊಂಡು ಮಗನನ್ನ ಕರೆದುಕೊಂಡು ಬರೋಕೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ ಶೋಭಾರಾಂ ನಾನಂತೂ ಓದೋಕಾಗಲಿಲ್ಲ. ಆದರೆ, ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್​ ಆಗಬೇಕು ಎಂಬ ಆಸೆ ಇದೆ. ನನ್ನ ಮಗ ಒಳ್ಳೇ ವಿದ್ಯಾರ್ಥಿ. ಆದರೆ, ನಮ್ಮೂರಲ್ಲಿ ಶಾಲೆಯಿದ್ದರೂ ಶಿಕ್ಷಕರಿಲ್ಲ. ಟ್ಯೂಷನ್​ ಸೆಂಟರ್​ ಸಹ ಇಲ್ಲ. ಹಾಗಾಗಿ, ನನ್ನ ಮಗ ಮೂರು ವಿಷಯಗಳಲ್ಲಿ ಫೇಲ್​ ಆಗಿಬಿಟ್ಟ. ಪರೀಕ್ಷೆ ಮಿಸ್​ ಆಗಿದ್ರೇ ಒಂದು ವರ್ಷ ಕಳೆದುಕೊಳ್ಳುವನು. ಆದ್ದರಿಂದ ಅವನು ಶತಾಯಗತಾಯ ಪರೀಕ್ಷೆ ಬರೆಯಲೇ ಬೇಕೆಂದು ಕರೆದುಕೊಂಡು ಬಂದೆ ಎಂದಿದ್ದಾರೆ.