ಕಲಬುರಗಿ: ಜಿಲ್ಲೆಗೆ ಈ ಬಾರಿ ವರುಣದೇವ ತುಸು ಹೆಚ್ಚಾಗಿಯೇ ಕೃಪೆ ತೋರಿದ್ದಾನೆ. ಹೀಗಾಗಿ, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬಿಸಿಲನಾಡು ಇದೀಗ ಮಲೆನಾಡಾಗಿ ಮಾರ್ಪಾಡಾಗಿದೆ. ಎಲ್ಲೆಡೆ ಭೂರಮೆ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದಾಳೆ. ಬಿಸಿಲು ಕೊಂಚ ಕಡಿಮೆಯಾಗಿ ಆಹ್ಲಾದಕರ ವಾತಾವರಣ ಉಂಟಾಗಿದೆ. ಉಲ್ಲಾಸ ನೀಡುವ ತಂಗಾಳಿ ಬೀಸುತ್ತಿದೆ. ಈ ನಡುವೆ ಜಿಲ್ಲೆಯ ಚಿಂಚೋಳಿಯ ವನ್ಯಜೀವಿಧಾಮದಲ್ಲಿರುವ ನವಿಲುಗಳು ಗರಿ ಬಿಚ್ಚಿ ನರ್ತಿಸಲು ಪ್ರಾರಂಭಿಸಿವೆ.
ನವಿಲುಗಳ ಮನಮೋಹಕ ನರ್ತನ, ನೋಡುಗರಿಗೆ ರೋಮಾಂಚನ ಹೌದು, ಚಿಂಚೋಳಿಯ ವನ್ಯಜೀವಿಧಾಮದಲ್ಲಿ ಬೇಸಿಗೆಯ ಧಗೆಗೆ ಬಸವಳಿದಿದ್ದ ಪ್ರಾಣಿ ಪಕ್ಷಿಗಳು ಇದೀಗ ವರ್ಷಧಾರೆಯಿಂದ ಹರ್ಷಗೊಂಡಿವೆ. ಅದರಲ್ಲೂ ಇಲ್ಲಿನ ನವಿಲುಗಳ ಮನಮೋಹಕ ನರ್ತನವೇ ಎಲ್ಲರ ಗಮನ ಸೆಳೆಯುತ್ತಿದ್ದು ಕಣ್ಣಿಗೆ ಹಬ್ಬದ ಆನಂದವನ್ನು ನೀಡುತ್ತಿವೆ ಇದೀಗ, ಜಿಲ್ಲಾ ಅರಣ್ಯ ಇಲಾಖೆಯು ತನ್ನ ಫೇಸ್ಬುಕ್ ಪೇಜ್ನಲ್ಲಿ ಚಿಂಚೋಳಿಯ ಹಸಿರು ಸಿರಿ ಮತ್ತು ನವಿಲುಗಳ ವಯ್ಯಾರದ ವಿಡಿಯೋಗಳನ್ನು ಅಪಲೋಡ್ ಮಾಡಿದೆ. ಈ ಮೂಲಕ ವನ್ಯಜೀವಿಧಾಮದ ಸೊಬಗನ್ನು ಎಲ್ಲರೊಟ್ಟಿಗೆ ಹಂಚಿಕೊಂಡಿದೆ.
ಮನೋನ್ಮಯ ಮನದ ಆಸೆಗೆ ಮನ್ಮಥನ ಮಧುರ ಭಾವದ ಮಯೂರ ನಾಟ್ಯ ನೋಡುವುದೇ ಆನಂದ. ವರ್ಣಮಯ ಉಡುಗೆಯಲ್ಲಿ ಅದರ ನರ್ತನ ನಿಜಕ್ಕೂ ನಯನ ಮನೋಹರ. ಜೊತೆಗೆ, ವನ್ಯಜೀವಿಧಾಮದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿಗೆ ಭೇಟಿಕೊಡುತ್ತಿದ್ದಾರೆ. ಹೇ ನವಿಲೇ.. ಬಾ ನವಿಲೇ.. ಆ ಸೌಂದರ್ಯ ಲೋಕದಿಂದ ಜಾರಿದೆ. ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ಎಂದು ಹಾಡುತ್ತಾ ನವಿಲುಗಳ ಸೌಂದರ್ಯ ಸಿರಿಯನ್ನು ವೀಕ್ಷಿಸಿ ಪುಳಕಿತರಾಗುತ್ತಿದ್ದಾರೆ. ಸಂಜಯ್ ಚಿಕ್ಕಮಠ