ಜಾಗತಿಕ ಅನಿಲ, ತೈಲ ವಲಯದ ತಜ್ಞರು, ಸಿಇಒಗಳು, ಅಧ್ಯಕ್ಷರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಂವಾದ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರದಂದು ಜಾಗತಿಕ ತೈಲ ಹಾಗೂ ಅನಿಲ ತಜ್ಞರು, ಕಂಪೆನಿಗಳ ಸಿಇಒಗಳು ಹಾಗೂ ಅಧ್ಯಕ್ಷರ ಜತೆಗೆ ಪ್ರಮುಖ ವಿಚಾರಗಳ ಬಗ್ಗೆ ಸಂವಾದ ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು (CEO) ಮತ್ತು ಜಾಗತಿಕ ತೈಲ ಹಾಗೂ ಅನಿಲ ವಲಯದ ತಜ್ಞರ ಜತೆಗೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂ.ಡಿ. ಮುಕೇಶ್ ಅಂಬಾನಿ, ರಷ್ಯಾದ ರಾಸ್ನೆಫ್ಟ್ ಸಿಇಒ ಮತ್ತು ಅಧ್ಯಕ್ಷ ಡಾ. ಇಗೋರ್ ಸೆಚಿನ್, ಸೌದಿ ಅರಾಮ್ಕೋದ ಸಿಇಒ ಹಾಗೂ ಅಧ್ಯಕ್ಷ ಅಮಿನ್ ನಸೀರ್ ಮತ್ತಿತರರು ಭಾಗಿಯಾದರು. ಸ್ವಚ್ಛ ಬೆಳವಣಿಗೆ ಮತ್ತು ಸುಸ್ಥಿರತೆಯ ಉತ್ತೇಜನವು ಈ ಸಂವಾದದ ವಿಸ್ತೃತವಾದ ಥೀಮ್ ಆಗಿತ್ತು. 2016ರಿಂದ ಆರಂಭವಾದ ಮೇಲೆ ಇದು ಇಂಥ ಉದ್ದೇಶ ಇರಿಸಿಕೊಂಡ ಆರನೇ ವಾರ್ಷಿಕ ಸಮಾವೇಶ ಆಗಿದೆ. ಜಾಗತಿಕ ಮಟ್ಟದ ತೈಲ ಹಾಗೂ ಅನಿಲ ವಲಯದ ನಾಯಕರು ಭಾಗಿ ಆಗಿದ್ದಾರೆ. ಈ ವಲಯದ ಪ್ರಮುಖ ವಿಷಯಗಳು ಮತ್ತು ಸಹಭಾಗಿತ್ವಕ್ಕೆ ಸಾಧ್ಯತೆ ಇರುವ ಕ್ಷೇತ್ರಗಳ ಅನ್ವೇಷಣೆ ಮಾಡುವುದು ಮತ್ತು ಭಾರತದಲ್ಲಿನ ಹೂಡಿಕೆ ಸಾಧ್ಯತೆಗಳನ್ನು ಚರ್ಚಿಸಲಾಗುತ್ತದೆ.
ಸಿಇಒಗಳ ಜತೆಗೆ ಸಂವಾದದಲ್ಲಿ ಭಾರತದ ಹೈಡ್ರೋಕಾರ್ಬನ್ ವಲಯದಲ್ಲಿ ಉತ್ಪಾದನೆ ಮತ್ತು ಆವಿಷ್ಕಾರ, ಇಂಧನ ಸ್ವಾವಲಂಬನೆ, ಅನಿಲ ಆಧಾರಿತ ಆರ್ಥಿಕತೆ, ಸ್ವಚ್ಛ ಮತ್ತು ಪರಿಣಾಮಕಾರಿ ಇಂಧನ ಸಲ್ಯೂಷನ್ ಮೂಲಕ ಅನಿಲ ಹೊರಸೂಸುವಿಕೆ ಕಡಿಮೆ ಮಾಡುವುದು, ಹಸಿರು ಜಲಜನಕ ಆರ್ಥಿಕತೆ, ಜೈವಿಕ ಇಂಧನ ಉತ್ಪಾದನೆಯ ವಿಸ್ತರಣೆ ಮತ್ತು ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯ ಬಗ್ಗೆ ಗಮನ ಕೇಂದ್ರೀಕರಿಸಲಾಗುತ್ತದೆ. (ಎಎನ್ಐ)
ಈ ಸಂವಾದದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇರಿದಂತೆ ಇತರ ಕೇಂದ್ರ ಸಚಿವರು ಸಹ ಭಾಗಿಯಾಗಿದ್ದಾರೆ. ಡೀಸೆಲ್- ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ಗಳ ದರವು ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಇರುವಾಗ ಈ ಸಂವಾದವು ಪ್ರಾಮುಖ್ಯ ಪಡೆದುಕೊಂಡಿದೆ.
ಇದನ್ನೂ ಓದಿ: Inflation: ಅಮೆರಿಕದಲ್ಲಿ ಹಣದುಬ್ಬರ ದರ 13 ವರ್ಷಗಳ ಗರಿಷ್ಠ ಮಟ್ಟಕ್ಕೆ, ಒಂದೇ ವರ್ಷದಲ್ಲಿ ಅನಿಲ ದರ ಶೇ 42ರಷ್ಟು ಏರಿಕೆ