ಓದು ಮಗು ಓದು: ಸೂರಕ್ಕಿ ಗೇಟ್ ತೆರೆದಾಗ…

‘ನನ್ನೊಳಗೊಂದು ಅನಾಥ ಮಗುವಿದೆ. ಬಾಲ್ಯದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ನೋವು ತಿಂದ, ಪ್ರೀತಿಯ ಸ್ಪರ್ಶ ಕಾಣದ ಆ ಮಗು ಮಕ್ಕಳ ಸಾಹಿತ್ಯ ಕುರಿತಾದ ಬರವಣಿಗೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಖುಷಿ ಕಾಣುತ್ತದೆ. ಈ ಕಾರಣಕ್ಕಾಗಿ ನಾನು ಬಾಲ್ಯಕ್ಕೆ ಮರಳುತ್ತೇನೆ, ಬರೆಯುತ್ತೇನೆ. ಆ ಕಾಲದ ನೋವುಗಳನ್ನೆಲ್ಲ ಬದಿಗೆ ನೂಕಿ ಬರೀ ಸಂತಸದ ಕ್ಷಣಗಳನ್ನು ನೆನೆಯುತ್ತೇನೆ ಸುಖಿಸುತ್ತೇನೆ.‘ ವಿಜಯಶ್ರೀ ಹಾಲಾಡಿ.

  • TV9 Web Team
  • Published On - 15:04 PM, 17 Jan 2021
ಓದು ಮಗು ಓದು: ಸೂರಕ್ಕಿ ಗೇಟ್ ತೆರೆದಾಗ...
ವಿಜಯಶ್ರೀ ಬರೆದ ಚಿತ್ರ-ಕವನ

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು.
ಇ-ಮೇಲ್: tv9kannadadigital@gmail.com

ಮೂಡಬಿದಿರೆಯಲ್ಲಿ ಶಿಕ್ಷಕಿಯಾಗಿರುವ ವಿಜಯಶ್ರೀ ಹಾಲಾಡಿ ಮಕ್ಕಳಿಗಾಗಿ ತಾನೇಕೆ ಬರೆಯುತ್ತೇನೆ ಎನ್ನುವುದನ್ನು ಹೇಳುತ್ತಾ ತಮ್ಮ ಪುಸ್ತಕಗಳನ್ನೂ ಪರಿಚಯಿಸಿದ್ದಾರೆ.

ನನ್ನ ಬಾಲ್ಯ ಮತ್ತು ಹದಿಹರೆಯದ ದಿನಗಳಲ್ಲೇ ಅತ್ಯುತ್ತಮ ಮಕ್ಕಳ ಕವಿತೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಅದು ಘಟಿಸಿದ್ದು ಹೀಗೆ. ನಾನು ಏಳು ವರ್ಷದವಳಿರುವಾಗ ಅಕ್ಕನ ಮಗ ಹುಟ್ಟಿದ. ಅದರ ನಂತರ ಕಾಲಾನುಕ್ರಮದಲ್ಲಿಇಬ್ಬರು ಅಕ್ಕಂದಿರು ಮತ್ತುಅಣ್ಣನ ಏಳು ಜನ ಮಕ್ಕಳು ನಮ್ಮ ಕುಟುಂಬದ ಬೆಳಕಾದರು. ಅವರೆಲ್ಲ ಊರಿಗೆ ಬಂದಾಗ ಮಕ್ಕಳನ್ನು ಕಾಳಜಿ, ಪ್ರೀತಿಯಿಂದ ಆಟವಾಡಿಸುತ್ತಿದ್ದ ಆ ದಿನಗಳು ನನ್ನ ಸುಪ್ತಮನದೊಳಗೆ ಆಸ್ಥೆಯಿಂದ ಕುಳಿತುಬಿಟ್ಟಿವೆ.

ಆಗ ಮಕ್ಕಳಿಗೆಂದು ಹಾಕುತ್ತಿದ್ದ ಒಳ್ಳೊಳ್ಳೆಯ ಪದ್ಯಗಳನ್ನು ಗಾಢವಾಗಿ ಆಲಿಸುತ್ತಿದ್ದೆ. ಇದಲ್ಲದೆ ಪದವಿ ತರಗತಿಯಲ್ಲಿದ್ದಾಗ ಜಿ.ಪಿ.ರಾಜರತ್ನಂ ಅವರ ಮಕ್ಕಳ ಸಾಹಿತ್ಯದ ಕುರಿತಾದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯೊದರಲ್ಲಿ ಭಾಗವಹಿಸಿ ಬಹುಮಾನ ಪಡೆದೆ. ಆಗ ಅವರ ಮತ್ತು ನವೋದಯದ ಹಿರಿಯ ಸಾಹಿತಿಗಳ ಮಕ್ಕಳ ಪದ್ಯಗಳನ್ನು ಓದಿದೆ. ಈ ಎರಡು ಕಾರಣಗಳಿಂದಾಗಿ ‘ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ’, ‘ಅಜ್ಜನ ಕೋಲಿದು ನನ್ನಯ ಕುದುರೆ’, ‘ಜೇನು ನೊಣಕು ಜಾನಿ ನಾಯಿಗು ಪಂಥ ಬಿದ್ದಿತು’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ‘ನಾಗರ ಹಾವೇ ಹಾವೊಳು ಹೂವೇ’, ‘ಪಾತರಗಿತ್ತಿ ಪಕ್ಕಾ ನೋಡಿದೇನಾ ಅಕ್ಕಾ’, ‘ನನ್ನಪ್ಪಅಷ್ಟೆತ್ರ ನನ್ನಮ್ಮಇಷ್ಟೆತ್ರ’, ‘ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ’, ಅಮ್ಮಾಅಮ್ಮಾಒಂದೇ ಒಂದು ಉಂಡೆ ಕೊಡ್ತೀಯಾ’ ಮುಂತಾದ ಅನೇಕ ಪದ್ಯಗಳನ್ನು ಕೇಳಿಸಿಕೊಂಡೆ ಮತ್ತುಓದಿದೆ. ನಿಜವೆಂದರೆ, ಪದವಿ ತರಗತಿಯ ನನ್ನ ಸಹಪಾಠಿಗಳು ಪ್ರೇಮಗೀತೆಗಳನ್ನು ಜೀವಿಸುತ್ತಿದ್ದರೆ ನಾನು ಶಿಶುಗೀತೆಗಳನ್ನು ಗುನುಗುತ್ತಿದ್ದೆ. ಆದರೂ ಎಂಟನೇ ತರಗತಿಯಿಂದಲೇ ಸಾಹಿತ್ಯಕ್ಕೆ ಸಂಬಂಧಿಸಿದ್ದನ್ನು ಬರೆಯಲು ಶುರುಮಾಡಿದ್ದ ನಾನು ಮಕ್ಕಳಿಗಾಗಿ ಬರೆದದ್ದು ತುಂಬ ತಡವಾಗಿ, ಮೂವತ್ತನಾಲ್ಕನೇ  ವಯಸ್ಸಿನಲ್ಲಿ! ಅಲ್ಲಿಯವರೆಗೆ ಮೂರ್ನಾಲ್ಕು ಮಕ್ಕಳ ಕತೆಗಳನ್ನು ಬರೆದದ್ದು ಬಿಟ್ಟರೆ ಮೊದಲ ಸಲ ಮಕ್ಕಳ ಕವಿತೆ ಬರೆದದ್ದು ಆಗಲೇ.

ಒಂದ್ರಾತ್ರಿ ಕೆಂಪಿರುವೆ
ನಿದ್ದೆ ಮಾಡ್ತಿತ್ತು
ಆಸೆಬುರುಕ ಪಾಪ ಅದಕೆ
ಕನಸೊಂದ್ ಬಂದಿತ್ತು
(ಗಡ್ ಬಡ್ ಇರುವೆ)

ಎಂದು ಶುರುವಾಗುವ ಈ ಕವಿತೆಯನ್ನು ಬರೆದ ನಂತರ ಹಿಂತಿರುಗಿ ನೋಡದೆ ಮೂರ್ನಾಲ್ಕು ತಿಂಗಳಲ್ಲಿ ಸುಮಾರು ನಲವತ್ತೈದು ಪದ್ಯಗಳನ್ನು ಬರೆದೆ. 2012ರಲ್ಲಿ ನನ್ನ ಮೊದಲ ಮಕ್ಕಳ ಪದ್ಯ ಸಂಕಲನ ‘ಓತಿಕ್ಯಾತ ತಲೆಕುಣ್ಸಿ’ ಬಂದಿತು. ಇದಕ್ಕೆ ಪ್ರತ್ಯಕ್ಷ ಕಾರಣನಾದವನು ನನ್ನ ಪುಟ್ಟ ಮಗ. ಅವನ ಆಟ, ತುಂಟಾಟ, ಮುಗ್ಧ ಮನಸ್ಸಿನ ಯೋಚನೆಗಳು ನನ್ನೊಳಗೆ ಕವಿತೆಯ ಸಾಲುಗಳಾಗಿ ಬೆಳೆದವು. ನನ್ನ ವಿದ್ಯಾರ್ಥಿಗಳ ಸಾಂಗತ್ಯವೂ ಇದಕ್ಕೆ ನೀರೆರೆಯಿತು. ದಿನಬೆಳಗೂ ಅವರೊಂದಿಗಿನ ಒಡನಾಟ ಹೊಸ ಲೋಕವೊಂದನ್ನು ಪರಿಚಯಿಸಿತು. ಅತ್ಯಂತ ತೀವ್ರವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ದಿನಗಳವು. ಇಡೀ ದಿನ ಪದ್ಯಗಳದ್ದೇ ಧ್ಯಾನ.

ಚಳಿ ಚಳಿ ಚಳಿ

ಎಂಥ ಮಜಾ
ಚಳಿಯ ಜೊತೆ
ಕರುಂಕುರುಂ
ಇನ್ನು ಮಜಾ
(ಚಳಿಯ ಮಜಾ)

ಅಮ್ಮ ನೀನು ಬೋನಿಟ್ರೆ
ಇಲಿಯೇನೂ ಬೀಳಲ್ಲ
ಬೋಂಡ ಕೊಬ್ರಿ
ಚಕ್ಲಿ ನಿಪ್ಪಟ್ಟ್
ಏನಿಟ್ರೂ ಗಿಟ್ಟಲ್ಲ
(ಗುಟ್ಟು ರಟ್ಟಾಯ್ತು)

ಎಂದು ಕವಿತೆಗಳನ್ನು ನೇಯುತ್ತ ದಿನಚರಿಯ ಒತ್ತಡಗಳು, ಬದುಕಿನ ಸಂಕಟಗಳನ್ನು ಮರೆಯಲು ಸಾಧ್ಯವಾಯಿತು; ಮಗುವಿನಂತೆ ಆಲೋಚಿಸುವುದನ್ನು ಕಲಿಯಲು ಸಹಕಾರಿಯಾಯಿತು. ಆಗ ನಾವು ವಾಸವಾಗಿದ್ದ ಹೊಳೆನರಸೀಪುರದ ತಣ್ಣನೆಯ ವಾತಾವರಣ, ಶಾಲೆಯ ದಾರಿಯ ನಿಸರ್ಗದ ಚೆಲುವು ಈ ಎಲ್ಲವೂ ಪದ್ಯಗಳನ್ನು ಬರೆಸಿದವು. ಅಲ್ಲಿಂದ ಮುಂದೆ ಒಂದು ವರ್ಷ ಬ್ರೇಕ್​ ತೆಗೆದುಕೊಂಡು ಬರೆದ ಕವಿತೆಗಳು ‘ಪಪ್ಪುನಾಯಿಯ ಪೀಪಿ’ ಸಂಕಲನದಲ್ಲಿವೆ. ನಿಜವೆಂದರೆ ನಮ್ಮ ನಾಯಿ ಪಪ್ಪು, ಬೆಕ್ಕುಗಳಾದ ಮುಸುವ, ಕರಿಯ, ಫುಟ್ಬಾಲ್, ಸಿಂಗ, ನಿತ್ರಾಣ್, ಮಿಂಚಿ, ಪೈಲ್ವಾನ್​ ಕಿಟ್ಟಪ್ಪ, ಲವ್ ಬರ್ಡ್ಸ್​, ಮಗ ವಿನ್ಯಾಸ್, ಶಾಲೆಯ ಮಕ್ಕಳು ಇವರೆಲ್ಲ ಸೇರಿ ನನ್ನಿಂದ ಬರೆಸಿದರು. ಈ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಬಂದಿತು. ‘ನಿಮ್ಮ ಶಿಶುಗೀತೆಗಳು ಚಟುವಟಿಕೆಯಿಂದ ಕೂಡಿದ್ದು ಫ್ರೆಶ್ ಆಗಿವೆ, ಹೊಸತನವನ್ನೇ ಮೈದುಂಬಿಕೊಂಡಿವೆ’ ಎಂಬಂತಹ ಓದುಗರ, ಹಿರಿಯರ ಮೆಚ್ಚುಗೆ ಬರೆಯಲು ಪ್ರೇರಣೆ ನೀಡಿತು. ಮಕ್ಕಳ ಕಾದಂಬರಿ ‘ಸೂರಕ್ಕಿ ಗೇಟ್’, ಅನುಭವ ಕಥನ ‘ಜಂಬಿಕೊಳ್ಳಿ ಮತ್ತು ಪುಟ್ಟವಿಜಿ’, ‘ಕಾಡಂಚಿನ ಊರಿನಲ್ಲಿ’ ಮುಂತಾದ ಬರಹಗಳಿಗೆ ಮತ್ತು ಇದೀಗ ಪ್ರಕಟವಾಗುತ್ತಿರುವ ಮಕ್ಕಳ ಪದ್ಯ ಸಂಕಲನ, ನಾಟಕಗಳಿಗೆ ಈ ಎಲ್ಲ ಆಗುಹೋಗುಗಳು ಬಲತುಂಬಿವೆ.

ಇದಲ್ಲದೆ ನನ್ನೊಳಗೊಂದು ಅನಾಥ ಮಗುವಿದೆ. ಬಾಲ್ಯದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ನೋವು ತಿಂದ, ಪ್ರೀತಿಯ ಸ್ಪರ್ಶಕಾಣದ ಆ ಮಗು ಇಂತಹ ಬರವಣಿಗೆಯಲ್ಲಿ ಖುಷಿ ಕಾಣುತ್ತದೆ. ಈ ಕಾರಣಕ್ಕಾಗಿ ನಾನು ಬಾಲ್ಯಕ್ಕೆ ಮರಳುತ್ತೇನೆ, ಬರೆಯುತ್ತೇನೆ. ವಿಚಿತ್ರವೆಂದರೆ ಆ ಕಾಲದ ನೋವುಗಳನ್ನೆಲ್ಲ ಬದಿಗೆ ನೂಕಿ ಬರೀ ಸಂತಸದ ಕ್ಷಣಗಳನ್ನು ನೆನೆಯುತ್ತ ಸುಖಿಸುತ್ತದೆ ಮನ. ಮಗುವೊಂದರ ಬಾಲ್ಯ ದೊಡ್ಡವರ ಅತಿಯಾದ ಶಿಸ್ತು, ಕಟ್ಟುನಿಟ್ಟು, ಬಯ್ಗುಳ, ಹೊಡೆತದಿಂದಾಗಿ ಹೇಗೆ ದುರಂತವೆನಿಸಬಹುದು ಎಂದು ಪ್ರತ್ಯಕ್ಷ ಕಂಡು, ಅನುಭವಿಸಿ ತಿಳಿದಿರುವ ನನಗೆ ಅದಕ್ಕೆ ವಿರುದ್ಧವಾಗಿ ಯೋಚಿಸುವುದು ಸಹಜವೂ, ಅಗತ್ಯವೂ ಆಗಿದೆ. ಮಗುವಿನ ತಿಳಿಮನಸ್ಸು ಸ್ವಚ್ಛಂದ ಝರಿಯಿದ್ದಂತೆ. ಝುಳು ಝುಳು ನಾದ, ಹಕ್ಕಿ ಕಲರವ, ತಣ್ಣೆಳಲು, ಹೂವಿನ ಸುಗಂಧದೊಂದಿಗೆ ಅದು ಸರಾಗವಾಗಿ ಹರಿಯುತ್ತ ಸಾಗಬೇಕು. ಮಕ್ಕಳ ಸೂಕ್ಷ್ಮಭಾವಗಳು ಅರಳಬೇಕು; ಮುದುಡಬಾರದು. ಮಗುವಿನ ಕುತೂಹಲ ತಣಿಯಬೇಕು, ಬೆಳೆಯಬೇಕು. ಇದೆಲ್ಲದಕ್ಕೆ ಹಿರಿಯರ ಅಗಾಧವಾದ ಪ್ರೀತಿ, ಬೆಂಬಲ ಮತ್ತು ಬೆಚ್ಚನೆಯ ಸ್ಪರ್ಶ ಬೇಕು, ಹಾರಿಕುಣಿದು ನಗುವ ಸ್ವಾತಂತ್ರ್ಯ ಬೇಕು. ಭಯದ ನೆರಳಿನಲ್ಲಿ ಮಗುವಿನ ವ್ಯಕ್ತಿತ್ವ ಟಿಸಿಲೊಡೆಯಲಾರದು. ಶಾಲೆಯ ಅತಿಶಿಸ್ತು ಕೂಡಾ ಮಗುವಿನ ಸಹಜತೆ, ಸೃಜನಶೀಲತೆಯನ್ನು ನುಂಗಿ ಹಾಕಬಲ್ಲದು. ಈ ಎಲ್ಲ ಯೋಚನೆಗಳನ್ನು ಮುಟ್ಟುತ್ತ, ಅನುಭವಿಸುತ್ತ ಮಕ್ಕಳಿಗಾಗಿ ಬರೆಯಲು ಯತ್ನಿಸಿರುವೆ.

ಹೀಗೆ ಮಕ್ಕಳ ಸಾಹಿತ್ಯ ಬರೆಯುವುದು ನನ್ನ ಖುಷಿ, ಕರ್ತವ್ಯ ಎರಡೂ ಹೌದು. ಪ್ರಸ್ತುತ ಪೋಷಕರ ಕಟ್ಟುನಿಟ್ಟು, ಕಲಿಕೆಯ ಹೊರೆ, ಶಾಲೆಯ ಕಠಿಣ ನಿಯಮಗಳಿಂದ ಮುದುಡುತ್ತಿರುವ ಮಕ್ಕಳು ಒಂದೆಡೆಯಾದರೆ, ಪೋಷಕರ ಆಸರೆಯೇ ಇಲ್ಲದೆ ಬಾಲಕಾರ್ಮಿಕರಾಗಿ ದಿನದೂಡುತ್ತಿರುವ ಮಕ್ಕಳು ಇನ್ನೊಂದೆಡೆ. ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಬಹುತೇಕ ಮಕ್ಕಳ ಬಾಲ್ಯ ಅತ್ಯಂತ ನೋವಿನಿಂದ ಕಳೆಯುತ್ತಿದೆ. ಇಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಬರೆಯುವುದು ತುಸುವಾದರೂ ನೆಮ್ಮದಿ ಕೊಡುತ್ತದೆ. ಬರೀ ಬರೆಯುವುದಷ್ಟೇಅಲ್ಲ, ಮುದ್ದುಮಕ್ಕಳ ಹಿತಕ್ಕಾಗಿ ಏನಾದರೂ ಮಾಡಲೇಬೇಕೆಂಬ ಕರ್ತವ್ಯವನ್ನೂ ನನ್ನ ಬರವಣಿಗೆ ಪ್ರತೀಸಲ ನೆನಪಿಸುತ್ತದೆ.

ಪರಿಚಯ: ವಿಜಯಶ್ರೀ ಹಾಲಾಡಿಯವರ ‘ಓತಿಕ್ಯಾತ ತಲೆಕುಣ್ಸಿ’,  ‘ಬೀಜ ಹಸಿರಾಗುವ ಗಳಿಗೆ’, ‘ಸೂರಕ್ಕಿ ಗೇಟ್’ ‘ಪಪ್ಪು ನಾಯಿಯ ಪ್ರೀತಿ’ ಕೃತಿಗಳು ಪ್ರಕಟಗೊಂಡಿವೆ. ಸದ್ಯ ಹೊಸ ಕವನ ಸಂಕನದ ತಯಾರಿಯಲ್ಲಿದ್ದಾರೆ. ‘ಪಪ್ಪು ನಾಯಿಯ ಪ್ರೀತಿ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಪುಸ್ತಕ ಬಹುಮಾನ ಲಭಿಸಿದೆ.

ಓದು ಮಗು ಓದು: ಯಾವ ಪುಸ್ತಕವದು ಅನನ್ಯಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದು?