ಬೇಸಿಗೆ ಬಂದ್ರೆ ಈ ನದಿ ಸಮೀಪದ ಜನರ ಜೀವ ಅಂಗೈಗೆ ಬರುತ್ತೆ, ಯಾಕೆ?

ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ಬಂದ್ರೆ ನದಿ ಸಮೀಪದ ಜನ ಮತ್ತು ರಸ್ತೆ ಪಕ್ಕದಲ್ಲಿರುವ ಹಳ್ಳಿಯ ಜನರಿಗೆ ಆತಂಕ ಪ್ರಾರಂಭವಾಗುತ್ತದೆ. ರಸ್ತೆ ಪಕ್ಕ ನಡೆದುಕೊಂಡು ಹೋಗುವವರು, ಮನೆ ಸೇರುವವರೆಗೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಯಾವಾಗ, ಏನಾಗುತ್ತೋ ಅನ್ನೋ ಆತಂಕವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕಾಡುತ್ತದೆ. ಇದಕ್ಕೆ ಕಾರಣ ಯಮದೂತರಾಗಿರುವ ಮರಳಿನ ಟಿಪ್ಪರ್ ವಾಹನಗಳು. ಬಿಸಿಲನಾಡು ಕಲಬುರಗಿಯಲ್ಲಿ ಬೇಸಿಗೆಯಲ್ಲಿ ರಣಬಿಸಿಲು ಸಹಜವಾಗಿ ಇದ್ದೇ ಇರುತ್ತದೆ. ಆದ್ರೆ ರಣಬಿಸಿಲಿಗೆ ಕಲಬುರಗಿ ಜಿಲ್ಲೆಯ ಜನರು ಭಯ ಪಡೋದಿಲ್ಲಾ. ಆದ್ರೆ […]

ಬೇಸಿಗೆ ಬಂದ್ರೆ ಈ ನದಿ ಸಮೀಪದ ಜನರ ಜೀವ ಅಂಗೈಗೆ ಬರುತ್ತೆ, ಯಾಕೆ?
Follow us
ಸಾಧು ಶ್ರೀನಾಥ್​
|

Updated on: May 21, 2020 | 4:55 PM

ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ಬಂದ್ರೆ ನದಿ ಸಮೀಪದ ಜನ ಮತ್ತು ರಸ್ತೆ ಪಕ್ಕದಲ್ಲಿರುವ ಹಳ್ಳಿಯ ಜನರಿಗೆ ಆತಂಕ ಪ್ರಾರಂಭವಾಗುತ್ತದೆ. ರಸ್ತೆ ಪಕ್ಕ ನಡೆದುಕೊಂಡು ಹೋಗುವವರು, ಮನೆ ಸೇರುವವರೆಗೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಯಾವಾಗ, ಏನಾಗುತ್ತೋ ಅನ್ನೋ ಆತಂಕವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕಾಡುತ್ತದೆ. ಇದಕ್ಕೆ ಕಾರಣ ಯಮದೂತರಾಗಿರುವ ಮರಳಿನ ಟಿಪ್ಪರ್ ವಾಹನಗಳು.

ಬಿಸಿಲನಾಡು ಕಲಬುರಗಿಯಲ್ಲಿ ಬೇಸಿಗೆಯಲ್ಲಿ ರಣಬಿಸಿಲು ಸಹಜವಾಗಿ ಇದ್ದೇ ಇರುತ್ತದೆ. ಆದ್ರೆ ರಣಬಿಸಿಲಿಗೆ ಕಲಬುರಗಿ ಜಿಲ್ಲೆಯ ಜನರು ಭಯ ಪಡೋದಿಲ್ಲಾ. ಆದ್ರೆ ಬೇಸಿಗೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದ ಜನರಿಗೆ ಆತಂಕವನ್ನು ಹೆಚ್ಚಿಸುವುದು ಮರಳಿನ ಟಿಪ್ಪರ್ ವಾಹನಗಳು.

ಭೀಮಾ, ಕಾಗಿನಾ ನದಿ ಪಾತ್ರದಲ್ಲಿ ‘ತೀರದ’ ಮರಳು ಸಾಗಾಟ ದಂಧೆ ಹೌದು ಕಲಬುರಗಿ ಜಿಲ್ಲೆಯಲ್ಲಿ ಭೀಮಾ, ಕಾಗಿನಾ ನದಿಗಳು ಹರಿದಿವೆ. ಪ್ರತಿ ವರ್ಷ ಬೇಸಿಗೆಯ ಸಮಯದಲ್ಲಿ ಈ ಎರಡು ನದಿಗಳಲ್ಲಿ ಸಕ್ರಮ, ಅಕ್ರಮ.. ಎರಡೂ ರೀತಿಯಲ್ಲಿ ಕೂಡಾ ಮರಳನ್ನು ತೆಗೆದು ಸಾಗಾಟ ಮಾಡುವ ದೊಡ್ಡ ದಂಧೆಯೆ ನಡೆಯುತ್ತದೆ. ಈ ಭಾರಿ ಇಲ್ಲಿವರಗೆ ಕೊರೊನಾದಿಂದ ಲಾಕ್ ಡೌನ್ ಇದ್ದಿದ್ದರಿಂದ ಮರಳು ಸಾಗಾಟ ದೊಡ್ಡಮಟ್ಟದಲ್ಲಿ ನಡೆದಿರಲಿಲ್ಲಾ. ಮರಳು ತಗೆಯುವುದು ಮತ್ತು ಸಾಗಾಟಕ್ಕೆ ಕೂಡಾ ಬ್ರೇಕ್ ಬಿದ್ದಿತ್ತು. ಆದ್ರೆ ಸರ್ಕಾರ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಮರಳು ಸಾಗಾಟ ಕೂಡಾ ಪ್ರಾರಂಭವಾಗಿದೆ. ಆದ್ರೆ ಕೊರೊನಾದ ಆತಂಕವಿದ್ರೂ ಕೂಡಾ ಅದಕ್ಕೆ ಅಂಜದೆ ನೆಮ್ಮದಿಯಿಂದ ಇದ್ದ ರಸ್ತೆ ಪಕ್ಕದ ಗ್ರಾಮಗಳ ಜನರು, ಇದೀಗ ಮರಳು ಸಾಗಾಟ ಪ್ರಾರಂಭವಾಗುತ್ತಿದ್ದಂತೆ, ಆತಂಕಕ್ಕೊಳಗಾಗಿದ್ದಾರೆ.

ಎತ್ತಿನ ಬಂಡಿ ಜಖಂ: ಎತ್ತುಗಳು, ತಂದೆ ಮತ್ತು ಮಗನಿಗೆ ಗಾಯ ಕಲಬುರಗಿ ಜಿಲ್ಲೆಯಲ್ಲಿ ಮರಳು ಸಾಗಾಟ ಪ್ರಾರಂಭಾಗಿ ಎರಡೇ ದಿನದಲ್ಲಿ ಇಂದು ಮರಳಿನ ಟಿಪ್ಪರ್ ರೈತ ಕುಟುಂಬಕ್ಕೆ ಯಮದೂತನಂತೆ ಬಂದಿದೆ. ಹೌದು ಕಲಬುರಗಿ ತಾಲೂಕಿನ ಧರ್ಮಾಪುರ ಬಳಿ ಎತ್ತಿನ ಬಂಡಿಗೆ ಮರಳಿನ ಟಿಪ್ಪರ್ ಡಿಕ್ಕಿ ಹೊಡೆದಿದೆ. ಮರಳಿನ ಟಿಪ್ಪರ ಯಮದೂತನಂತೆ ಬಂದು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಎತ್ತಿನ ಬಂಡಿ, ರಸ್ತೆ ಪಕ್ಕದಲ್ಲಿ ಹೋಗಿ ಬಿದ್ದಿದೆ. ಅದರ ಪರಿಣಾಮ ಎತ್ತಿನ ಬಂಡಿಯಲ್ಲಿದ್ದ ತಂದೆ ಮತ್ತು ಮಗನಿಗೆ ಗಾಯಗಳಾಗಿವೆ. ಧರ್ಮಾಪುರ ಗ್ರಾಮದ ನಿವಾಸಿಗಳಾಗಿದ್ದ ಆಕಾಶ್ ಮತ್ತು ಆಕಾಶ್ ತಂದೆ ಶಂಕರ್ ಜಾಧವ್ ಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನು ಕೂಡಾ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎತ್ತುಗಳಿಗೆ ಕೂಡಾ ಗಂಭೀರ ಗಾಯಗಳಾಗಿವೆ.

ಮುಂಜಾನೆ ಮನೆಯಿಂದ ಕೃಷಿ ಜಮೀನಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಪ್ರತಿ ಬೇಸಿಗೆಯಲ್ಲಿ ಮರಳು ಸಾಗಾಟ ಮಾಡುವ ಟಿಪ್ಪರ್ ಚಾಲಕರು ಬೇಕಾಬಿಟ್ಟಿ ವಾಹನ ಚಾಲನೆ ಮಾಡ್ತಾರೆ. ರಸ್ತೆ ಪಕ್ಕದಲ್ಲಿ ಹೋಗುವ ಜನರನ್ನು ಕಣ್ಣೆತ್ತಿ ನೋಡೋದಿಲ್ಲಾ. ಹೀಗಾಗಿ ಮೇಲಿಂದ ಮೇಲೆ ಟಿಪ್ಪರ್ ಗಳಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಮರಳಿನ ಟಿಪ್ಪರ್ ಹಾದು, ಅನೇಕರು ಬಾರದ ಲೋಕಕ್ಕೆ ಕೂಡಾ ಹೋಗಿದ್ದಾರೆ. ಹೀಗಾಗಿ ತಪ್ಪಿತಸ್ಥ ಮರಳಿನ ಟಿಪ್ಪರ್ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಹೆಚ್ಚು ಟ್ರಿಪ್ ಹೊಡೆಯುವ ಉದ್ದೇಶದಿಂದ ಟಿಪ್ಪರ್ ವೇಗ ಜಾಸ್ತಿಯಾಗುತ್ತದೆ ಇದರ ಜೊತೆಗೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಿಂದ ಕೂಡಾ ಕೃಷ್ಣಾ ನದಿಯಿಂದ ಮರಳನ್ನು ತಗೆದು ಜಿಲ್ಲೆಗೆ ಸಾಗಾಟ ಮಾಡಲಾಗುತ್ತದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರತಿನಿತ್ಯ ನೂರಾರು ಮರಳಿನ ಟಿಪ್ಪರಗಳು ಸಂಚರಿಸುತ್ತವೆ. ಚಾಲಕರು ಹೆಚ್ಚು ಟ್ರಿಪ್ ನ್ನು ಹೊಡೆಯುವ ಉದ್ದೇಶದಿಂದ ವೇಗವಾಗಿ ಟಿಪ್ಪರ್ ಗಳನ್ನು ಚಲಾಯಿಸುತ್ತಾರೆ. ಅನೇಕರು ರಸ್ತೆ ನಿಯಮಗಳನ್ನೆ ಪಾಲಿಸೋದಿಲ್ಲಾ. ಕೆಲವರು ಕುಡಿದು ಟಿಪ್ಪರ್ ಚಲಾಯಿಸುತ್ತಾರೆ. ನಿರ್ಲಕ್ಷ್ಯದಿಂದ ಟಿಪ್ಪರ್ ಗಳನ್ನು ಚಲಾಯಿಸುವುದರಿಂದ ರಸ್ತೆಯಲ್ಲಿ ಅನೇಕ ಅಪಘಾತಗಳು ಆಗುತ್ತಿವೆ. ಇದರಲ್ಲಿ ರಸ್ತೆ ಪಕ್ಕದಲ್ಲಿನ ಗ್ರಾಮಗಳ ಜನರೇ ಹೆಚ್ಚಿನ ತೊಂದರೆ ತುತ್ತಾಗುತ್ತಿದ್ದಾರೆ.