ಉಡುಪಿ: ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಹಾವು ಹಿಡಿಯುವ ಕಲೆಯೂ ಗೊತ್ತು ಅಂತಾ. ಇದನ್ನು ಇತ್ತೀಚೆಗೆ ಅವರು ತಮ್ಮ ಶಿಷ್ಯವೃಂದಕ್ಕೆ ಪ್ರದರ್ಶಿಸುವ ಮೂಲಕ ತಾವು ಬಹು ವಿದ್ಯೆ ಪಾರಂಗತರು ಎನ್ನುವ ಅಚ್ಚರಿ ನೀಡಿದ್ದಾರೆ.
ಹೌದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಯತಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ನಡುವೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ತಮ್ಮ ಮಠದ ನೀಲಾವರ ಗೋಶಾಲೆಯ ಆವರಣದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡಿದೆ. ಆಗ ಹಾವನ್ನು ಸರಳವಾಗಿ, ಯಾವುದೇ ಅಪಾಯವಿಲ್ಲದೇ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿ ಪೇಜಾವರಶ್ರೀ ಎಲ್ಲರ ಹುಬ್ಬೇರಿಸಿದ್ದಾರೆ. ಪೇಜಾವರ ಶ್ರೀಗಳ ಸಾಹಸವನ್ನು ಕಂಡು ಅವರ ಶಿಷ್ಯರೇ ಅಚ್ಚರಿಪಟ್ಟಿದ್ದಾರೆ.
ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಸಹಜ ಕುತೂಹಲಕ್ಕೆ ಕಾರಣವಾಗಿದೆ. ಪೇಜಾವರ ಶ್ರೀ ಸುಲಲಿತವಾಗಿ ಹಾವು ಹಿಡಿದು ಗೋಣಿಚೀಲಕ್ಕೆ ತುಂಬಿಸುವ ಸಂದರ್ಭ ಗೋಣಿ ಹಿಡಿದ ಶಿಷ್ಯ ಭಯದಲ್ಲಿ ಗಲಿಬಿಲಿಗೊಂಡ ಪರಿಯೂ ವಿಡಿಯೋದಲ್ಲಿ ಸೆರೆಯಾಗಿದೆ. ಶ್ರೀಗಳು ಈ ಹಿಂದೆ ಮೂರ್ನಾಲ್ಕು ಬಾರಿ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿದ್ದರು.-ಹರೀಶ್ ಪಾಲೆಚ್ಚಾರ್