Dakshina Kannada: ಊರಿಗೆ ಬಂದ ರೋಗ ರುಜಿನ ಹೋಗಲಾಡಿಸಲು ಆಟಿ ಕಳೆಂಜ ಆಚರಣೆ

Aati Kalenja: ಆಟಿ ಕಳೆಂಜ ತುಳುನಾಡಿನ ಒಂದು ಶ್ರೇಷ್ಠ ಆಚರಣೆಯಾಗಿದೆ. ತುಳುನಾಡಿನಲ್ಲಿ ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಈ ಸಂಪ್ರದಾಯದ ಆಚರಣೆ ಮತ್ತು ಅದರ ಹಿನ್ನೆಲೆ ಏನೆಂಬುದನ್ನು ತಿಳಿಯೋಣ.

Dakshina Kannada: ಊರಿಗೆ ಬಂದ ರೋಗ ರುಜಿನ ಹೋಗಲಾಡಿಸಲು ಆಟಿ ಕಳೆಂಜ ಆಚರಣೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 26, 2023 | 12:58 PM

ಪ್ರತಿಯೊಂದು ಊರಿನಲ್ಲೂ ಅದರದ್ದೇ ಆದ ವಿಶೇಷ ಜಾನಪದ ಕಲೆಗಳಿವೆ. ಅದರಂತೆ ದಕ್ಷಿಣ ಕನ್ನಡಕ್ಕೂ (Dakshina Kannada) ಕೂಡ ತನ್ನದೇ ಆದ ವಿಶಿಷ್ಟ ಆಚರಣೆ, ಸಂಪ್ರದಾಯ ಹಾಗೂ ಜನಪದ ಕಲೆಗೆ ಹೆಸರಾದ ಬೀಡು. ಯಕ್ಷಗಾನ, ಭೂತಾರಾಧನೆ, ಕಂಬಳ ಹೀಗೆ ಹಲವಾರು ವಿಶಿಷ್ಟವಾದ ನಂಬಿಕೆ ಮತ್ತು ಆಚರಣೆಗಳು ಇಲ್ಲಿ ನಡೆಯುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳೆಂದರೆ ದಕ್ಷಿಣಕನ್ನಡದಲ್ಲಿ ಆಟಿಯ ಕಾಲ. ಅಲ್ಲದೆ ಹಲವರು ಈ ತಿಂಗಳನ್ನು ಅಶುಭದ ಕಾಲ ಎಂದು ಪರಿಗಣಿಸುತ್ತಾರೆ. ಏಕೆಂದರೆ ಈ ತಿಂಗಳಲ್ಲಿ ಮಳೆಯಿಂದಾಗುವ ವಿಪತ್ತುಗಳು ಹೆಚ್ಚು. ಹಿಂದಿನಿಂದಲೂ ಈ ತಿಂಗಳಿನಲ್ಲಿ ಮದುವೆ ಮತ್ತು ಇನ್ನಿತರ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಹಿಂದಿನ ಕಾಲದಲ್ಲಿ ಈ ಸಮಯ ಬಹಳ ಕಷ್ಟಕರವಾದ ದಿನ. ಕೃಷಿ ಭೂಮಿಗೆ ಹೋಗಿ ಕೃಷಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಎಡೆ ಬಿಡದೆ ಸುರಿಯುವ ಮಳೆಯಿಂದಾಗಿ ಅನೇಕ ವಿಪತ್ತುಗಳು ಎದುರಾಗುತ್ತಿದ್ದವು. ಜೊತೆಗೆ ಈ ಮಾಸದಲ್ಲಿ ಜನರು ಆನಾರೋಗ್ಯಕ್ಕೂ ಹೆಚ್ಚು ತುತ್ತಾಗುತ್ತಿದ್ದರು. ಹಾಗಾಗಿ ಇಂತಹ ಕಷ್ಟದ ಸಮಯದಲ್ಲಿ ಜನರಿಗೆ ಸಾಂತ್ವನ ಹೇಳಲೆಂದೇ ಮನೆ ಮನೆಗೆ ಆಟಿ ಕಳೆಂಜ ವೇಷಧಾರಿ ಬರುತ್ತಿದ್ದರು.

ಏನಿದು ಆಟಿ ಕಳೆಂಜ ಪದ್ಧತಿ:

ಆಟಿ ಕಳೆಂಜ ಎಂಬುವುದು ತುಳುನಾಡಿನ ನಂಬಿಕೆ ಮತ್ತು ವಿಶೇಷ ಜನಪದ ಕಲೆಯಾಗಿದ್ದು, ಕಳೆಂಜನು ಆಟಿಯ ಕಾಲದಲ್ಲಿ ಊರಿನ ಮಾರಿಯನ್ನು ಹೋಗಲಾಡಿಸಲು ಬರುವ ಶಕ್ತಿಯೆಂದು ಒಂದು ನಂಬಿಕೆ ಇದೆ. ನಳಿಕೆ ಸಮುದಾಯದವರು ಈ ಆಟಿ ಕಳೆಂಜ ವೇಷವನ್ನು ಧರಿಸುತ್ತಾರೆ. ತೆಂಗಿನ ಗರಿಯಿಂದ ತಯಾರಿಸಿದ ವೇಷಭೂಷಣ ಹಾಗೂ ಒಂದು ವಾಮನ ಛತ್ರಿಯನ್ನು ಹಿಡಿದು ಮೊದಲಿಗೆ ತಮ್ಮ ಮನೆಯ ಭೂತಕಟ್ಟೆಗೆ ನಮಸ್ಕರಿಸಿ, ಊರಿನ ಕಷ್ಟ ಕಾರ್ಪಣ್ಯವನ್ನು ದೂರ ಮಾಡಲು ಊರಿನ ಸಂಚಾರಕ್ಕೆ ಹೊರಡುತ್ತಾರೆ. ಹೀಗೆ ಹೊರಟವರು ಮೊದಲು ಕೃಷಿ ಭೂಮಿಯ ಮೂಲಕ ಕಾಲ್ನಡಿಗೆಯನ್ನು ಪ್ರಾರಂಭಿಸುತ್ತಾರೆ. ಆಟಿ ಕಳೆಂಜ ಕೃಷಿ ಭೂಮಿಗೆ ಪ್ರದಕ್ಷಿಣೆ ಬಂದರೆ ಕೃಷಿ ಭೂಮಿಗೆ ಅಂಟಿರುವ ರೋಗರುಜಿನಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಹೀಗೆ ಆಟಿ ಕಳೆಂಜ ಮನೆಮನೆಗೆ ಬರುವಾಗ ಇದ್ದಿಲು, ಅರಶಿನ ಮತ್ತು ಹುಣಸೆ ನೀರಿನ ಮಿಶ್ರಣವನ್ನು ಮನೆಯ ಬಳಿ ಚಿಮುಕಿಸುತ್ತಾರೆ. ಧನಾತ್ಮಕ ಶಕ್ತಿಯನ್ನು ಹರಡುವ ಮೂಲಕ ಕುಟುಂಬ ಮತ್ತು ಜಾನುವಾರುಗಳಿಗೆ ಸಂಭವಿಸಬಹುದುದಾದ ಯಾವುದೇ ದುರಾದೃಷ್ಟವನ್ನು ನಿವಾರಿಸಲು ಇದನ್ನು ಮಾಡಲಾಗುತ್ತದೆ.

ಆಟಿ ಕಳೆಂಜನ ಜೊತೆಗೆ ಟೆಂಬರೆ ಎಂಬ ಒಂದು ಬಗೆಯ ಡೋಳನ್ನು ಹಿಡಿದು ಪಾರ್ದನ ಹಾಡುವವರು ಕೂಡಾ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ತಮ್ಮ ಪಾರ್ದನದ ಮೂಲಕ ಊರಿನಲ್ಲಿನ ಜನರು, ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಬರುವ ರೋಗ ರುಜಿನಗಳನ್ನು ನೀನು ದೂರ ಮಾಡು ಕಳೆಂಜ ಎಂದು ಆಟಿ ಕಳೆಂಜನಲ್ಲಿ ಪ್ರಾರ್ಥಿಸುತ್ತಾರೆ. ಮನೆಮನೆಗೆ ಆಟಿ ಕಳೆಂಜ ಭೇಟಿ ಕೊಡುವಾಗ ಪ್ರತಿಯೊಂದು ಮನೆಯವರು ಕೂಡಾ ಅಕ್ಕಿ, ತೆಂಗಿಕಾಯಿ, ಮೆಣಸು, ಉಪ್ಪು ಜೊತೆಗೆ ಸ್ವಲ್ಪ ಇದ್ದಿಲನ್ನು ಕಾಣಿಕೆಯಾಗಿ ಕೊಡುವ ಸಂಪ್ರದಾಯವಿದೆ. ಹೀಗೆ ಊರೆಲ್ಲಾ ಸುತ್ತಾಡುತ್ತಾ, ಆಟಿಯ ಕಷ್ಟದ ದಿನದಲ್ಲಿ ಊರಿನ ಜನರಿಗೆಲ್ಲಾ ಸಾಂತ್ವನ ಹೇಳುವ ಕೆಲಸವನ್ನು ಕಳೆಂಜ ಮಾಡುತ್ತಾರೆ. ಆಟಿಯ ಕೊನೆಯ ದಿನವಾದ ಪೌರ್ಣಮಿಯ ದಿನದಂದು ಆಟಿ ಕಳೆಂಜ ವೇಷಕ್ಕೆ ತೆರೆ ಬೀಳುತ್ತದೆ. ಊರಿನವರು ನೀಡಿದ ಕಾಣಿಕೆಯ ಸ್ವಲ್ಪ ಭಾಗವನ್ನು ನೆಕ್ಕಿ ಎಂಬ ಹೆಸರಿನ ಮರದ ಎಲೆಯಲ್ಲಿಟ್ಟು, ಅದನ್ನು ಭೂತ ಕಲ್ಲಿಗೆ ನೈವೇದ್ಯವಾಗಿ ನೀಡುತ್ತಾರೆ. ಊರಿಗೆ ಬಂದಿರುವ ಮಾರಿ ದೂರವಾಗಲೆಂದು ದೈವದ ಬಳಿ ಮನಸಾರೆ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ: ಊರಿಗೆ ಬಂದ ಮಾರಿ ಕಳೆಯಲು ಬರುವ ಆಟಿ ಕಳಂಜ, ತುಳುನಾಡಿನ ಆಟಿ ತಿಂಗಳ ಹಿನ್ನಲೆ ಇಲ್ಲಿದೆ

ಈ ಆಚರಣೆಯ ಹಿಂದಿನ ಹಿನ್ನೆಲೆ:

ಹಿಂದಿನ ಕಾಲ ಹೇಗಿತ್ತು ಎಂಬ ಕಲ್ಪನೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ನಮ್ಮ ಹಿಂದಿನ ತಲೆಮಾರುಗಳು ಕೃಷಿಯನ್ನೇ ನಂಬಿದ್ದಂತಹ ಕುಟುಂಬ ಹಾಗೂ ಮಳೆಗಾಲದ ವಿಪರೀತವಾದ ಮಳೆ ಸುರಿಯುತ್ತಿದ್ದಂತಹ ಸಮಯವದು. ಅದರಲ್ಲೂ ತುಳುನಾಡಿನಲ್ಲಿ ಆಟಿಯ ಸಮಯವೆಂದರೆ ಎಡೆ ಬಿಡದೆ ಸುರಿಯುವ ಮಳೆಯ ಕಾಲ. ಇದು ಅತ್ಯಂತ ಕಷ್ಟದ ತಿಂಗಳು. ಅತಿಯಾದ ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರ ಪರಿಣಾಮವಾಗಿ ಈ ಸಮಯದಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗುತ್ತಿತ್ತು. ಅಲ್ಲದೆ ಇದು ತೀರಾ ಕಷ್ಟದ ಸಮಯವಾದ್ದರಿಂದ ಈ ಮಾಸದಲ್ಲಿ ಯಾವುದೇ ಹಬ್ಬ ಆಚರಣೆಗಳು ನಡೆಯುತ್ತಿರಲಿಲ್ಲ. ಹಾಗೂ ಹಿಂದಿನ ಕಾಲದಲ್ಲಿ ಔಷಧೀಯ ಸವಲತ್ತು ಕೂಡಾ ಅಷ್ಟಾಗಿ ಇರಲಿಲ್ಲ. ಅದರಲ್ಲೂ ಮಳೆಗಾಲದ ಸಮಯದಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯ ಕಾರಣ ಜನರು ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಆ ಸಂದರ್ಭದಲ್ಲಿ ಹಳ್ಳಿಯಲ್ಲಿ ಯಾವುದೇ ರೋಗ ರುಜಿನಗಳು ಬರದ ಹಾಗೆ, ಅತಿಯಾದ ಮಳೆಯಿಂದಾಗಿ ಊರಿಗೆ ವಿಪತ್ತು ಬಾರದಂತೆ ಜೊತೆಗೆ ದುಷ್ಟಶಕ್ತಿಗಳು ಮನೆ ಪ್ರವೇಶಿಸದಂತೆ ತಡೆಯಲು ಆಟಿ ಕಳೆಂಜ ಊರಿನ ಪ್ರತಿಯೊಂದು ಮನೆ ಮನೆಗೆ ಬಂದು ಇದ್ದಿಲು, ಅರಶಿನ ಹಾಗೂ ಹುಣಸೆ ಹಣ್ಣಿನ ನೀರನ್ನು ಮನೆಗೆ ಚಿಮುಕಿಸುತ್ತಿದ್ದರು. ಇದರಿಂದ ಯಾವುದೇ ಸೋಂಕುಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಹಾಗೂ ಈ ಕಷ್ಟದ ಸಮಯದಲ್ಲಿ ಊರಿನ ಜನರಿಗೆ ಭಯಪಡಬೇಡಿ ನಿಮ್ಮ ಕಷ್ಟವನ್ನೆಲ್ಲಾ ದೂರ ಮಾಡಲು ನಾನಿದ್ದೇನೆ ಎಂದು ಸಾಂತ್ವನ ನೀಡುತ್ತಿದ್ದರು. ವಿಪರ್ಯಾಸವೆಂದರೆ, ಆಧುನಿಕತೆಯ ಈ ಕಾಲದಲ್ಲಿ ಇಂತಹ ಆಚರಣೆ ಈಗ ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:55 pm, Wed, 26 July 23

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು