Ambedkar Jayanti 2025: ಡಾ. ಅಂಬೇಡ್ಕರ್ ಅವರಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠಗಳಿವು
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ವಕೀಲರೂ, ಸಮಾಜ ಸುಧಾರಕರೂ ಆಗಿದ್ದ ಅಂಬೇಡ್ಕರ್ ಶಿಕ್ಷಣ, ಅಸ್ಪೃಶ್ಯತೆಯನ್ನು ತೊಡೆದು ಹಾಕುವಲ್ಲಿ, ಸಮಾನತೆಗೆ ಅಪೂರ್ವವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ಜನ್ಮ ಜಯಂತಿಯ ಶುಭ ಸಂದರ್ಭದಲ್ಲಿ ನಾವು ಅವರಿಂದ ಕಲಿಯಬೇಕಾಗಿರುವ ಜೀವನ ಪಾಠಗಳು ಯಾವುವು ನೋಡೋಣ.

ಸಂವಿಧಾನ ಶಿಲ್ಪಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಭೀಮರಾವ್ ಅಂಬೇಡ್ಕರ್ (Bhimarao Ramji Ambedkar) ಡಾ. ಬಿ.ಆರ್ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದವರು. ಅಂಬೇಡ್ಕರ್ (Ambedkar) ಅವರ ಬದುಕು, ತತ್ವ, ಆದರ್ಶಗಳು, ಚಿಂತನೆಗಳು ನಮ್ಮೆಲ್ಲರ ಪಾಲಿಗೆ ಪ್ರೇರಣೆ ಅಂದರೆ ತಪ್ಪಾಗಲಾರದು. ಏಪ್ರಿಲ್ 14 ರಂದು ಭಾರತ ಕಂಡ ಈ ಶ್ರೇಷ್ಠ ನಾಯಕನ ಜನ್ಮ ದಿನ. ಇವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ಭಾರತದಾದ್ಯಂತ ಅಂಬೇಡ್ಕರ್ ಜಯಂತಿಯನ್ನು (Ambedkar Jayanti) ಆಚರಿಸಲಾಗುತ್ತದೆ. ಪ್ರಗತಿ, ಸಮಾನತೆಯ ಕನಸು ಕಂಡ ಈ ಮೇರು ನಾಯಕನ ಜನ್ಮ ದಿನದ ಶುಭ ಸಂದರ್ಭದಲ್ಲಿ ಅವರ ಜೀವನದ ಒಂದಷ್ಟು ಆದರ್ಶಗಳನ್ನು, ಜೀವನ ಪಾಠಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ.
ಡಾ. ಅಂಬೇಡ್ಕರ್ ಅವರಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠಗಳಿವು:
ಅಂಬೇಡ್ಕರ್ ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ. ಹಲವಾರು ನೋವು, ಅವಮಾನ, ನಿಂದನೆಗಳನ್ನು ಎದುರಿಸಿ ಅಸ್ಪೃಶ್ಯತೆಯೆಂಬ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದ, ಸಮಾನತೆ, ಪ್ರಗತಿಯ ಕನಸು ಕಂಡ ಈ ಮೇರು ನಾಯಕ ಆದರ್ಶ, ಚಿಂತನೆಗಳು, ಜೀವನ ತತ್ವಗಳು, ಜೀವನ ಆದರ್ಶ ಸರ್ವಕಾಲಕ್ಕೂ ಸ್ಮರಣೀಯವಾದದ್ದು.
ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು:
ಇವರ ಈ ಸಂದೇಶ ಒಬ್ಬ ವ್ಯಕ್ತಿಯ ಸಾರ್ಥಕ ಜೀವನದ ಬಗ್ಗೆ ತಿಳಿಸುತ್ತದೆ. ಅಂದರೆ ನಾವು ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ಏನಾದರೂ ಕೊಡುಗೆ ನೀಡುವ ರೀತಿಯಲ್ಲಿ ನಮ್ಮ ಜೀವನವನ್ನು ನಡೆಸಬೇಕು ಮತ್ತು ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ನಾವು ಹೊರೆಯಾಗುವ ರೀತಿಯಲ್ಲಿ ಬದುಕಬಾರದು. ಶಿಕ್ಷಣ ಪಡೆದ ಬಳಿಕ ಅಂಬೇಡ್ಕರ್ ಅವರು ಐಷಾರಾಮಿ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದಿತ್ತು, ಆದರೆ ಭಾರತಕ್ಕೆ ಬಂದ ನಂತರ, ಅವರು ತಮ್ಮ ಜೀವನವನ್ನು ಸಮಾನತೆಯನ್ನು ತರಲು, ಅಸ್ಪೃಶ್ಯತೆಯನ್ನು ಹೋಗಲಾಡಿಲು ಮುಡಿಪಾಗಿಟ್ಟರು. ಹೀಗೆ ನಾವು ಕೂಡಾ ಕಷ್ಟದ ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವಂತದ್ದಾಗಿರಬಹುದು, ಸಮಾಜ ಸೇವೆ, ನಿಸ್ವಾರ್ಥ ಸೇವೆ ಹೀಗೆ ಇನ್ನೊಬ್ಬರ ಬದುಕಿಗೆ ದಾರಿ ದೀಪವಾಗುವ ಮೂಲಕ ನಮ್ಮ ಬದುಕನ್ನು ನಾವು ಶ್ರೇಷ್ಠವನ್ನಾಗಿಸಬಹುದು.
ನಿಮ್ಮ ಸಮಯದ ಮೌಲ್ಯವನ್ನು ತಿಳಿದುಕೊಳ್ಳಿ:
ಅಂಬೇಡ್ಕರ್ ಅವರನ್ನು ಯಾರಾದರೂ ಪಾರ್ಟಿ, ಫಂಕ್ಷನ್‌ಗಳಿಗೆ ಆಹ್ವಾನಿಸಿದರೆ ಅವರು ಅಲ್ಲಿಗೆ ಹೋಗಲು ಬಯಸುತ್ತಿರಲಿಲ್ಲ.ಹೀಗೆ ಹೊರಗೆ ಹೋದರೆ ನನ್ನ ಸಮಯ ವ್ಯರ್ಥವಾಗುತ್ತದೆ ಎಂದು ಅವರು ಆ ಸಮಯವನ್ನು ಜ್ಞಾನಾರ್ಜನೆ ಅಥವಾ ಅಧ್ಯಯನಕ್ಕೆ ಮೀಸಲಿಡುತ್ತಿದ್ದರು. ಅಂಬೇಡ್ಕರ್ ಅವರ ರೀತಿ ನಮ್ಮ ಸಮಯದ ಮೌಲ್ಯದ ಬಗ್ಗೆ ನಮಗೆ ತಿಳಿದಿರಬೇಕು. ನಮ್ಮ ಸಮಯವನ್ನು ನಿಷ್ಪ್ರಯೋಜಕ ಸಂಗತಿಗಳಿಗೆ ವ್ಯರ್ಥ ಮಾಡುವ ಬದಲು ಜ್ಞಾನ ಸಂಪಾದಿಸುವುದಕ್ಕೆ, ಒಳ್ಳೆಯ ವಿಷಯಗಳನ್ನು ಕಲಿಯುವುದಕ್ಕೆ ಮೀಸಲಿಡಬೇಕು.
ಇದನ್ನೂ ಓದಿ: ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಮದುವೆಯಾದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ?
ಬಲವಾದ ಇಚ್ಛಾಶಕ್ತಿ ಅಥವಾ ಮಾನಸಿಕ ದೃಢತೆ:
ಅಂಬೇಡ್ಕರ್ ಬಾಲ್ಯದಿಂದಲೇ ಹಲವಾರು ಅವಮಾನ, ಅಪಮಾನಗಳನ್ನು ಎದುರಿಸಿ ಬಂದವರು. ಶಾಲಾ ದಿನಗಳಲ್ಲಿ ತರಗತಿಯಲ್ಲಿ ಪ್ರತ್ಯೇಕವಾಗಿ ಕೂರಿಸುತ್ತಿದ್ದರು, ಇತರರನ್ನು ಮುಟ್ಟಲು ಬಿಡುತ್ತಿರಲಿಲ್ಲ ಹೀಗೆ ಅಸ್ಪೃತ್ಯತೆಯ ಆಧಾರದ ಮೇಲೆ ಸಾಕಷ್ಟು ಅವಮಾನಗಳನ್ನು ಎದುರಿಸಿದರು. ಸಮಾಜದ ಈ ತಾರತಮ್ಯದಿಂದ ನೋವನ್ನು ಅನುಭವಿಸಿದರೂ, ಅವಮಾನಗಳನ್ನು ಎದುರಿಸಿದರೂ ಇದರಿಂದ ಕುಗ್ಗದ ಡಾ. ಅಂಬೇಡ್ಕರ್ ಉತ್ತಮ ಶಿಕ್ಷಣವನ್ನು ಪಡೆದು, ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸ್ಪೃತ್ಯತೆಯೆಂಬ ಪಿಡುಗನ್ನು ತೊಡೆದು ಹಾಕಿದರು. ಹೀಗೆ ಈ ಮಹಾನ್ ನಾಯಕನಂತೆ ಬಲವಾದ ಇಚ್ಛಾಶಕ್ತಿ, ಸಾಧಿಸುವ ಛಲ, ಮಾನಸಿಕ ದೃಢತೆ ಇವೆಲ್ಲವೂ ಇದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ನಕರಾತ್ಮಕತೆಯಿಂದ ದೂರವಿರಬಹುದು.
ಅಂಬೇಡ್ಕರ್ ಅವರಿಂದ ನಾವು ಕಲಿಯಬಹುದಾದ ಇನ್ನೊಂದು ಪಾಠವೆಂದರೆ ಶಿಕ್ಷಣದ ಮಹತ್ವ:
ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿರುವುದರಿಂದ ಶಿಕ್ಷಣ ಎನ್ನುವಂತಹದ್ದು ಪುರುಷ ಮತ್ತು ಮಹಿಳೆ ಇಬ್ಬರಿಗೂ ಮುಖ್ಯ ಎಂದಿದ್ದಾರೆ. ಹೀಗೆ ಶಿಕ್ಷಣ ಅವಕಾಶವನ್ನು ಪಡೆಯುವ ಮೂಲಕ ಸಮಾಜದ ಸವಾಲುಗಳನ್ನು ಎದುರಿಸಿ ನಿಲ್ಲಬಹುದು. ಶಾಲಾ ಕಾಲೇಜು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಪುಸ್ತಕಗಳನ್ನು ಓದುವ ಮೂಲಕ, ಇನ್ನೊಬ್ಬರ ಒಳ್ಳೆಯ ವ್ಯಕ್ತಿತ್ವವನ್ನು ನೋಡಿ ಕಲಿಯುವ ಮೂಲಕ ಉತ್ತಮ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.
ವೈಫಲ್ಯ ಎಂದಿಗೂ ಅಂತಿಮವಲ್ಲ ಯಶಸ್ಸು ಸಿಗುವವರೆಗೂ ಪ್ರಯತ್ನ ನಿಲ್ಲದಿರಲಿ:
ವೈಫಲ್ಯಗಳು, ಕಷ್ಟಗಳು ಬಂದಾಗ ಅದನ್ನು ಎದುರಿಸದೆ ಹೇಡಿಯಂತೆ ಹಿಂದೆ ಸರಿಯುವವರೇ ಹೆಚ್ಚು. ಹೀಗೆ ಹಿಂದೆ ಸರಿಯದೆ, ಇದನ್ನೇ ಯಶಸ್ಸಿನ ಮೆಟ್ಟಿಲನ್ನಾಗಿಸಿ ಛಲ ಮತ್ತು ದೃಢ ನಿರ್ಧಾರದಿಂದ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಯಶಸ್ಸು ನಮ್ಮದಾಗುತ್ತದೆ. ಹಾಗಾಗಿ ಜೀವನದಲ್ಲಿ ಸೋಲು ಬಂದಾಗ ಅದನ್ನು ಸ್ವೀಕರಿಸಿ, ಯಶಸ್ಸಿನ ಕಡೆಗೆ ಹೆಜ್ಜೆ ಇಡುವುದನ್ನು ಕಲಿಯಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Sun, 13 April 25