ಅಂಬೇಡ್ಕರ್ ಗೆದ್ದ ಹಿಂದೂ ಪ್ರಾಬಲ್ಯದ ಪ್ರದೇಶವನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ಕಾಂಗ್ರೆಸ್; ಪ್ರಲ್ಹಾದ್ ಜೋಶಿ ವಾಗ್ದಾಳಿ
ಬೆಂಗಳೂರಿನಲ್ಲಿ ನಡೆದ "ಭೀಮ ಹೆಜ್ಜೆʼ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ಶಿಲ್ಪಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿದವರು ಕಾಂಗ್ರೆಸ್ಸಿಗರು. ಈಗ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೊಸಳೆ ಕಣ್ಣೀರಿಡುತ್ತಿದ್ದಾರೆ. ಈಗ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 11: ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್ (BR Ambedkar) ಗೆದ್ದಂತಹ ಹಿಂದೂ ಪ್ರಾಬಲ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ ದುರುಳ ನೀತಿ ತೋರಿದವರು ಕಾಂಗ್ರೆಸ್ಸಿಗರು. ಅವರು ಈಗ ದಲಿತರ ವೋಟ್ ಬ್ಯಾಂಕ್‌ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಇಂದು “ಭೀಮ ಹೆಜ್ಜೆ” ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್ ಅಂದು ಅಂಬೇಡ್ಕರ್ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳನ್ನು ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೇಶಕ್ಕೆ ಒಂದು ಸಂವಿಧಾನದ ಸುಭದ್ರ ಚೌಕಟ್ಟು ನಿರ್ಮಿಸಿಕೊಟ್ಟಂತಹ ಮಹಾನ್ ನಾಯಕ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವದಿಂದಲೂ ಮಹಾ ಅವಮಾನಗಳನ್ನೇ ಮಾಡುತ್ತಾ ಬಂದಿದೆ. ಗಾಂಧಿ, ನೆಹರು ಕಾಲದಿಂದ ಇಲ್ಲಿವರೆಗೂ ಇದು ಮುಂದುವರಿದೇ ಇದೆ. ಪ್ರಸ್ತುತ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಗಣನೆಯೂ ಇದಕ್ಕೊಂದು ನಿದರ್ಶನ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಅಂಬೇಡ್ಕರ್ ಚುನಾವಣೆ ಮೂಲಕ ಸಂವಿಧಾನ ಸಭೆ ಪ್ರವೇಶಿಸಲು ಬಯಸಿದರೆ ಎರಡು ಬಾರಿಯೂ ಬೆಂಬಲಿಸದ ಕಾಂಗ್ರೆಸ್ ಕುತಂತ್ರ ನಡೆಸಿ ಸೋಲಿಸಿತು. ಕೊನೆಗೆ ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಅವರ ಒತ್ತಾಯದ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿ ಸಂವಿಧಾನ ಸಭೆಗೆ ಆಯ್ಕೆಯಾದರು. ಆದರೆ ಇದನ್ನೂ ಸಹಿಸದ ಕಾಂಗ್ರೆಸ್ ಅಂಬೇಡ್ಕರ್ ಗೆದ್ದ ಬಹುಸಂಖ್ಯಾತ ಹಿಂದೂಗಳಿದ್ದ ಕ್ಷೇತ್ರಗಳನ್ನೇ ಪಾಕ್‌ಗೆ ಬಿಟ್ಟುಕೊಟ್ಟಿತು ಎಂದು ಸಚಿವ ಜೋಶಿ ದೂರಿದ್ದಾರೆ.
ಇದನ್ನೂ ಓದಿ: ರೈತಸ್ನೇಹಿ ಯೋಜನೆಗಳ ಜಾರಿ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
1952ರಲ್ಲಿ ಮೊದಲ ಲೋಕಸಭಾ ಚುನಾವಣೆಗೆ ಅಂಬೇಡ್ಕರ್ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ಅಂಬೇಡ್ಕರ್ ಸಹಾಯಕನನ್ನೇ ಅಪಹರಿಸಿ ಅವರ ವಿರುದ್ಧ ಎತ್ತಿಕಟ್ಟಿ ಕಣಕ್ಕಿಳಿಸಿತು. ಪ್ರಧಾನಿ ನೆಹರೂ ಎರಡೆರಡು ಬಾರಿ ಪ್ರಚಾರಕ್ಕೆ ಹೋಗಿ ಸೋಲುವಂತೆ ಮಾಡಿದರು. 1954ರಲ್ಲಿ ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲ್ಲಲು ಬಿಡಲಿಲ್ಲ ಎಂದಿದ್ದಾರೆ.
ಅಂಬೇಡ್ಕರ್ ಅವರನ್ನು ಪರಾಭವಗೊಳಿಸಿದ ನಾರಾಯಣ ಕಾಟ್ರೋಲ್ಕರ್ ಗೆ 1970ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಕಾಂಗ್ರೆಸ್, ಸಂವಿಧಾನ ಶಿಲ್ಪಿಗೆ ಭಾರತ ರತ್ನ ಪುರಸ್ಕಾರ ನೀಡದೆ ಅವಮಾನಿಸಿತು. ಅಂದಿನ ಕಾಂಗ್ರೆಸ್ ಸರ್ಕಾರ ಸಂಸತ್ ಭವನದಲ್ಲಿ ಅಂಬೇಡ್ಕರ್ ತೈಲ ಚಿತ್ರ ಅನಾವರಣಕ್ಕೂ ಬಿಡಲಿಲ್ಲ, ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ಸಹ ನೀಡಲಿಲ್ಲ. ಕೊನೆಗೆ ಮುಂಬೈನ ಸಮುದ್ರ ತಟದಲ್ಲಿ ಅವರ ಅನುಯಾಯಿಗಳು ಅಂತಿಮ ಸಂಸ್ಕಾರ ನೆರವೇರಿಸಬೇಕಾಯಿತು. ಹೀಗೆ ಅಂಬೇಡ್ಕರ್ ಅವರಿಗೆ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಅವಮಾನ ತೋರುತ್ತಲೇ ಬಂದಿದೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
1990ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಿತು. ವಾಜಪೇಯಿ ಅವರ ಆಗ್ರಹದ ಮೇರೆಗೆ ಸಂಸತ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮನ್ನಣೆ ದೊರಕಿತು. ಅಂಬೇಡ್ಕರ್ ಅವರು ಆರ್ಥಿಕ ವಿಷಯದಲ್ಲಿ ಪಿಎಚ್‌ಡಿ ಬರೆದ ದೇಶದ ಮೊದಲ ವ್ಯಕ್ತಿ ಎಂದು ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ಸ್ಮರಿಸಿದರು.
ಅಂಬೇಡ್ಕರ್ ಬರೆದ ಪತ್ರವೇ ಇಲ್ಲ!:
ಜವಾಹರ ಲಾಲ್ ನೆಹರು ಅವರ ಸರ್ಕಾರದಲ್ಲಿ ಡಾ.ಅಂಬೇಡ್ಕರ್ ಅವರು ರಾಜೀನಾಮೆ ಕೊಡುತ್ತಲೇ ಒಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ತಮ್ಮನ್ನು ಹೇಗೆ ನಡೆಸಿಕೊಂಡಿದೆ, ಚುನಾವಣೆಯಲ್ಲಿ ಹೇಗೆ ಸೋಲಿಸಿತು ಮತ್ತು ದಲಿತರಿಗೆ ಹಾಗೂ ಒಬಿಸಿಯವರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅದೆಷ್ಟು ವಿರೋಧ ವ್ಯಕ್ತಪಡಿಸಿತು ಎಂಬ ಅನೇಕ ಸಂಗತಿಗಳುಳ್ಳ ಈ ಪತ್ರವನ್ನು ಇತಿಹಾಸದಲ್ಲಿ ಎಲ್ಲೂ ಲಭ್ಯವಿಲ್ಲದಂತೆ ಮಾಡಿದೆ ಕಾಂಗ್ರೆಸ್ ಎಂದು ಜೋಶಿ ಆರೋಪಿಸಿದರು.
ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ನಮ್ಮ ಸರ್ಕಾರದ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ
ಅಂಬೇಡ್ಕರ್ ಅವರು ದಲಿತರಿಗೆ ಸಂವಿಧಾನ ಬದ್ಧ ಮೀಸಲಾತಿ ಕಲ್ಪಿಸಿದರೆ, ಪಂಡಿತ್ ನೆಹರು ಅವರು ಅದನ್ನು ವಿರೋಧಿಸಿ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ನಂತರದಲ್ಲಿ ರಾಜೀವ ಗಾಂಧಿ ಅವರೂ ದಲಿತ ಮತ್ತು ಒಬಿಸಿ ಮೀಸಲಾತಿ ವಿರೋಧಿಸಿ ಸುದೀರ್ಘ ಭಾಷಣ ಮಾಡಿದ್ದರು. ಇಂದಿನ ಕಾಂಗ್ರೆಸ್ ನಾಯಕರಲ್ಲೂ ಅದೇ ಧೋರಣೆಯಿದೆ. ದಲಿತರನ್ನು, ಓಬಿಸಿಯವರನ್ನು, ಮುಸ್ಲಿಂರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ದಲಿತ ನಾಯಕ ಖರ್ಗೆಗೆ ಅವಮಾನ:
ದಲಿತ ವಿರೋಧಿ ನೀತಿ ಕಾಂಗ್ರೆಸ್‌ನವರಿಗೆ ನೆಹರು, ರಾಜೀವ ಗಾಂಧಿ ಅವರಿಂದ ರಕ್ತಗತವಾಗಿ ಬಂದಿದೆ. ಹಾಗಾಗಿ ಮೊನ್ನೆ ಮೊನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಖರ್ಗೆ ಅವರಿಗೆ ಮುಖ್ಯ ಭೂಮಿಕೆಯಲ್ಲಿ ಕುರ್ಚಿ ಕೊಡದೆ, ಎಲ್ಲೋ ಒಂದು ಬದಿಗೆ ಸೋಫಾ ಮೇಲೆ ಕುಳ್ಳಿರಿಸಿ ಒಬ್ಬ ದಲಿತ ನಾಯಕನನ್ನು ಅವಮಾನಿಸಿದ್ದಾರೆ. ದಲಿತ ವಿರೋಧಿ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಮಹಾತ್ಮಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ “ಶತಮಾನ ಸಂಭ್ರಮʼ ಆಚರಿಸಿದ ಕಾಂಗ್ರೆಸ್ ಸರ್ಕಾರ, ಅದೇ ಬೆಳಗಾವಿಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಂದು ಹೋದ ನೆನಪಿಗೆ ʼಶತಮಾನ ಸಂಭ್ರಮʼ ಆಚರಿಸದೆ “ಅವಮಾನ ಸಾಂಪ್ರದಾಯʼವನ್ನು ಮುಂದುವರಿಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ಶತಮಾನ ಸಂಭ್ರಮವೇ ಆಗಲಿ, ಅಂಬೇಡ್ಕರ್ ಅವರ “ಭೀಮ ಹೆಜ್ಜೆʼ ಸಂಭ್ರಮವೇ ಆಗಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ದಲಿತ ನಾಯಕರು ಮತ್ತು ದಲಿತ ಚಿಂತಕರನ್ನು ಕರೆದು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಸರ್ಕಾರ ಮಹಾತ್ಮಾ ಗಾಂಧಿ ಅವರ ಶತಮಾನ ಸಮಾರಂಭವನ್ನು ಪಕ್ಷದ ಒಂದು ಸಮಾವೇಶದ ರೀತಿ ಆಚರಿಸಿದರೆ, ಭೀಮ ಹೆಜ್ಜೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಸಚಿವ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ