‘ಬೆಂಗಳೂರು ಸದ್ದಿಲ್ಲದೆ ನಮ್ಮ ಉಳಿತಾಯವನ್ನು ತಿನ್ನುತ್ತಿದೆ’: ಸ್ಟಾರ್ಟ್-ಅಪ್ ಉದ್ಯಮಿಯ ಪೋಸ್ಟ್ ವೈರಲ್
ಕರ್ನಾಟಕದಲ್ಲಿ ಹಾಲು, ವಿದ್ಯುತ್, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ. ಇದರಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಓರ್ವ ಸ್ಟಾರ್ಟ್‌ಅಪ್ ಉದ್ಯಮಿ ಈ ಬಗ್ಗೆ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ಬೆಲೆ ಏರಿಕೆ ಮತ್ತು ವೆಚ್ಚ ಹೆಚ್ಚಳದಿಂದಾಗಿ ಬೆಂಗಳೂರು ಜನರಿಗೆ ಕೈಗೆಟುಕದ ನಗರವಾಗುತ್ತಿದೆ ಎಂದು ಉದ್ಯಮಿ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 11: ಕರ್ನಾಟಕದಲ್ಲಿ ಒಂದಾದ ಮೇಲೊಂದರಂತೆ ದಿನಬಳಕೆಯ ವಸ್ತುಗಳು ಸೇರಿದಂತೆ ಸಾರ್ವಜನಿಕ ಸೇವೆಗಳ ದರ (price hike) ಕೂಡ ಏರಿಕೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಹಾಲು ಮೆಟ್ರೋ, ವಿದ್ಯುತ್, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಲಾಗಿದೆ. ಈ ರೀತಿ ಬೆಲೆ ಏರಿಕೆಯಿಂದ ಜೀವನ ನಡೆಸುವುದಾದರೂ ಹೇಗೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವೆಡೆ ಪ್ರತಿಭಟನೆ ಕೂಡ ಮಾಡಲಾಗಿದೆ. ಹೀಗಿರುವಾಗಲೇ ಬೆಂಗಳೂರಿನ ಸ್ಟಾರ್ಟ್-ಅಪ್ ಕಂಪನಿ ಉದ್ಯಮಿ (businessman) ಒಬ್ಬರ ಲಿಂಕ್ಡ್ಇನ್ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿಯ ಲಿಂಕ್ಡ್ಇನ್ನಲ್ಲಿ ಪೋಸ್ಟ್ನಲ್ಲಿ ಏನಿದೆ?
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಉದ್ಯಮಿ ಹರೀಶ್ ಎನ್ಎ ಎಂಬುವವರು ರಾಜ್ಯದಲ್ಲಿ ಹೆಚ್ಚುತ್ತಿರುವ ದರ ಏರಿಕೆ ಕುರಿತಾಗಿ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜನರು ಕಷ್ಟಪಟ್ಟು ಉಳಿತಾಯ ಮಾಡಿರುವ ತಮ್ಮ ಹಣ, ದೈನಂದಿನ ಖರ್ಚು ವೆಚ್ಚಗಳಿಗೆ ಸದ್ದಿಲ್ಲದೆ ಖಾಲಿಯಾಗುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ.

ವೈರಲ್ ಆದ ಉದ್ಯಮಿಯ ಪೋಸ್ಟ್
ಸಿಲಿಕಾನ್ ಸಿಟಿ ಬೆಂಗಳೂರು ಕೈಗೆಟುಕುವಂತಿಲ್ಲ, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸದ್ದಿಲ್ಲದೆ ತಿನ್ನುತ್ತಿದೆ. ಇದನ್ನು ನೀವು ಅನುಭವಿಸುತ್ತಿದ್ದೀರಾ ಎಂದು ಉದ್ಯಮಿ ಪ್ರಶ್ನೆ ಮಾಡಿದ್ದಾರೆ. ಮಾರ್ಚ್ 7ರಂದು ನಂದಿನಿ ಹಾಲಿನ ಬೆಲೆ ಲೀಟರ್‌ಗೆ 4 ರೂ ಏರಿಕೆಯಾಗಿದ್ದು, 47 ರೂ ತಲುಪಿದೆ. ಮಾರಾಟ ತೆರಿಗೆ ಹೆಚ್ಚಳದಿಂದಾಗಿ ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಲೀಟರ್‌ಗೆ 2 ರೂ ಏರಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ದೂರವಾಣಿ ಬಿಡಿಭಾಗ ಜೋಡಣೆಯಲ್ಲಿ ಮಗ್ನರಾದ ಮಹಿಳಾಮಣಿಗಳು, 1950ರ ಅಪರೂಪದ ಚಿತ್ರ ವೈರಲ್
ಫೆಬ್ರವರಿ 9ರಂದು ನಮ್ಮ ಮೆಟ್ರೋ ದರವನ್ನು ಗರಿಷ್ಠ ದರ 60 ರಿಂದ 90 ರೂ ಕ್ಕೆ ಏರಿಕೆ ಮಾಡಲಾಗಿದೆ. ಆ ಮೂಲಕ ಇದು ಭಾರತದ ಅತ್ಯಂತ ದುಬಾರಿ ಮೆಟ್ರೋ ಆಗಿದೆ. ಸಾರಿಗೆ, ವಿದ್ಯುತ್, ಕಸಕ್ಕೆ ತೆರಿಗೆ ಮತ್ತು ಕಾಫಿ ಪುಡಿಯ ಬೆಲೆ ಕೂಡ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ವೈಟ್‌ಫೀಲ್ಡ್ ಅಥವಾ ಕೋರಮಂಗಲದಲ್ಲಿ 2ಬಿಹೆಚ್ಕೆ ಮನೆಗೆ ತಿಂಗಳಿಗೆ 40 ಸಾವಿರ ರೂ ಬಾಡಿಗೆ ಇದ್ದು, ಒಂದು ವರ್ಷದ ಹಿಂದೆ ಕೇವಲ 25 ಸಾವಿರ ರೂ ಇತ್ತು. ಪೀಕ್ ಅವರ್ನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ. ಹೆಬ್ಬಾಳ ಸಂಚಾರ ದಟ್ಟಣೆಯ ತಾಣವಾಗಿದೆ ಎಂದಿದ್ದಾರೆ.
ನಿತ್ಯ ಒಂದಿಲ್ಲೊಂದು ದರ ಏರಿಕೆ ಆಗುತ್ತಿದ್ದರೂ, ಸಂಬಳ ಮಾತ್ರ ಹಾಗೇ ಇದೆ. ಐಟಿ ಕ್ಷೇತ್ರದಲ್ಲಿ ದರ ಏರಿಕೆ ಪ್ರಮಾಣ ಅಷ್ಟೇನೂ ಮೀರಿಸುವುದಿಲ್ಲ. ಆದರೆ ಎರಡನೇ ಅಥವಾ ಮೂರನೇ ಹಂತದ ನಗರಗಳಲ್ಲಿ ಕೆಲಸ ಮಾಡುವ ಹೊಸಬರಿಗೆ ಇದು ಹೊರೆಯಾಗಲಿದೆ. ಪಿಜಿ ಬಾಡಿಗೆ, ಆಹಾರ ಮತ್ತು ಪ್ರಯಾಣ ಸೇರಿದಂತೆ ಇತರೆ ವಿಚಾರಕ್ಕೆ ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ದೊರೆಯಲಿದೆ ನಕ್ಷೆ ಮಂಜೂರಾತಿ ಭಾಗ್ಯ: ಇಲ್ಲಿದೆ ಮಾಹಿತಿ
ಹೆಚ್ಚುತ್ತಿರು ದರ ಒಂದು ಕರೆಯಾದರೆ, ಮತ್ತೊಂದೆಡೆ ಸಂಬಳ ಮಾತ್ರ ಅಷ್ಟೇ ಇದೆ. ಜೊತೆಗೆ ಹೆಚ್ಚುತ್ತಿರುವ ಜನದಟ್ಟಣೆಯಿಂದ ಬೆಂಗಳೂರು ಜನಸಾಮಾನ್ಯರಿಗೆ ಕೈಗೆಟುಕಲಾಗದ ನಗರವಾಗಿದೆ. ಹೀಗಾಗಿ ಅಧಿಕಾರಿಗಳು ಈ ಬಗ್ಗೆ ಗಮನವಹಿಸಬೇಕು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Fri, 11 April 25