
ಪ್ರತಿಯೊಬ್ಬರೂ ಸಹ ಜೀವನದಲ್ಲಿ ಯಶಸ್ಸನ್ನು (success) ಸಾಧಿಸಲು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಾರೆ. ಹೀಗಿದ್ರೂ ಕೂಡ ಕೆಲವರಿಗೆ ಯಶಸ್ಸು, ಶ್ರೀಮಂತಿಕೆ ಎನ್ನುವಂತಹದ್ದು ಲಭಿಸುವುದೇ ಇಲ್ಲ. ಯಶಸ್ಸಿಗೆ ಕಠಿಣ ಪರಿಶ್ರಮ ಮಾತ್ರವಲ್ಲ ಸರಿಯಾದ ಯೋಜನೆಯೂ ಅತ್ಯಗತ್ಯ ಎನ್ನುತ್ತಾರೆ ಚಾಣಕ್ಯರು.ಅಷ್ಟೇ ಅಲ್ಲದೆ ಸಕ್ಸಸ್ ಬಯಸುವವರು ರಾತ್ರಿ ಮಲಗುವ ಮುನ್ನ ಈ ಒಂದಷ್ಟು ಕೆಲಸಗಳನ್ನು ತಪ್ಪದೇ ಮಾಡಲೇಬೇಕು ಎಂದಿದ್ದಾರೆ. ಇವರು ಹೇಳಿಕೊಟ್ಟಿರುವ ಯಶಸ್ಸಿನ ಸೂತ್ರಗಳನ್ನು ಪಾಲಿಸಿದರೆ ನೀವು ಯಶಸ್ಸು ಮತ್ತು ಸಂಪತ್ತು ಎರಡನ್ನೂ ಪಡೆಯಬಹುದು. ಹಾಗಿದ್ರೆ ಯಶಸ್ಸನ್ನು ಗಳಿಸಲು ರಾತ್ರಿ ಮಲಗುವ ಮುನ್ನ ಯಾವೆಲ್ಲಾ ಕೆಲಸಗಳನ್ನು ಮಾಡಿದರೆ ಉತ್ತಮ ಅನ್ನೋದನ್ನು ನೋಡೋಣ ಬನ್ನಿ.
ನಿಮ್ಮ ದಿನ ಹೇಗೆ ಹೋಯಿತು ಎಂಬುದನ್ನು ಯೋಚಿಸಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ತನ್ನ ಕ್ರಿಯೆಗಳ ಬಗ್ಗೆ ನಿಗಾ ಇಡುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ವಿಫಲನಾಗಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. ಆದ್ದರಿಂದ ನೀವು ದಿನಪೂರ್ತಿ ಮಾಡಿದ ಕೆಲಸಗಳ ದೈನಂದಿನ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ನೀವೇನಾದರೂ ಆ ದಿನ ತಪ್ಪುಗಳನ್ನು ಮಾಡಿದರೆ, ಅವುಗಳನ್ನು ತಿದ್ದಿ ನಡೆಯುವುದೇಗೆ, ಅಂದುಕೊಂಡ ಕಾರ್ಯವನ್ನು ಇನ್ನಷ್ಟು ಉತ್ತಮಗೊಳಿಸುವುದೇಕೆ ಎಂದು ಯೋಚಿಸಬೇಕು. ಈ ಅಭ್ಯಾಸ ಖಂಡಿತವಾಗಿಯೂ ನಿಮ್ಮನ್ನು ಯಶಸ್ವಿಗೊಳಿಸುತ್ತದೆ.
ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ: ಮಲಗುವ ಮುನ್ನ ಸ್ವಲ್ಪ ಸಮಯವನ್ನು ತೆಗೆದುಕೊಂಡು ಅರ್ಥಪೂರ್ಣ, ನಿಮ್ಮ ಕೆಲಸಕ್ಕೆ ಪೂರಕವಾಗುವಂತಹ ಪುಸ್ತಕಗಳನ್ನು ಓದಿ. ಪುಸ್ತಕಗಳ ಮುಖಾಂತರ ಜ್ಞಾನ ಹೆಚ್ಚಾಗುತ್ತದೆ. ಚಾಣಕ್ಯರು ಹೇಳುವಂತೆ ಜ್ಞಾನವೇ ದೊಡ್ಡ ಸಂಪತ್ತು. ನೀವು ಯಶಸ್ವಿಯಾಗಲು, ಶ್ರೀಮಂತಿಕೆ ಗಳಿಸಲು ಬಯಸಿದರೆ ಜ್ಞಾನವನ್ನು ಹೆಚ್ಚಿಸುವತ್ತ ಗಮನಹರಿಸಬೇಕು.
ಮರುದಿನಕ್ಕೆ ಯೋಜನೆಗಳನ್ನು ಮಾಡಿ: ಉತ್ಪಾದಕತೆಯನ್ನು ಹೆಚ್ಚಿಸಲು ಮರುದಿನಕ್ಕೆ ಸರಿಯಾದ ಯೋಜನೆಗಳನ್ನು ರೂಪಿಸಿ. ದಿನಕ್ಕೆ ನಿರ್ದಿಷ್ಟ ಕಾರ್ಯಸೂಚಿಗಳನ್ನು ಹೊಂದಿಸಿ. ನೀವು ನಾಳೆ ಏನು ಮಾಡಬೇಕು ಎಂಬುದನ್ನು ಇಂದು ಮಲಗುವ ಮುನ್ನ ನಿರ್ಧರಿಸಿ, ಈ ಯೋಜನೆ ಮರುದಿನ ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಕೆಲಸವನ್ನೂ ಸುಲಭಗೊಳಿಸುತ್ತದೆ. ಸಮಯಕ್ಕೆ ಸರಿಯಾಗಿ ಗುರಿ ತಲುಪಲೂ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಇಂತಹ ಮಕ್ಕಳನ್ನು ಪಡೆದ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ
ಗುರಿಯ ಬಗ್ಗೆ ಯೋಚಿಸಿ: ಒಬ್ಬ ವ್ಯಕ್ತಿಯ ಮನಸ್ಸು ಯಾವಾಗಲೂ ತನ್ನ ಗುರಿಯತ್ತ ಕೇಂದ್ರೀಕೃತವಾಗಿರಬೇಕು. ಸ್ಪಷ್ಟ ಗುರಿಯನ್ನು ಹೊಂದಿರುವವನು ಭವಿಷ್ಯದಲ್ಲಿ ಎಂದಿಗೂ ಸೋಲುವುದಿಲ್ಲ ಮತ್ತು ಆತ ಖಂಡಿತವಾಗಿಯೂ ಯಶಸ್ಸನ್ನೂ ಸಾಧಿಸುತ್ತಾನೆ ಎನ್ನುತ್ತಾರೆ ಚಾಣಕ್ಯ. ಆದ್ದರಿಂದ ರಾತ್ರಿ ಮಲಗುವ ಮುನ್ನ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ಯೋಚಿಸಿ.
ದಿನವನ್ನು ಸಕಾರಾತ್ಮಕ ಚಿಂತನೆಗಳೊಂದಿಗೆ ಕೊನೆಗೊಳಿಸಿ: ರಾತ್ರಿ ಮಲಗುವಾಗ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ಸಕಾರಾತ್ಮಕ ಯೋಚನೆಗಳೊಂದಿಗೆ ನಿದ್ರೆ ಮಾಡಿ. ಜೀವನದ ಪ್ರತಿಯೊಂದು ಒಳ್ಳೆಯ ವಿಚಾರಗಳನ್ನು ನೆನಪಿಡಿ. ಖಂಡಿತವಾಗಿಯೂ ಇದು ನಿಮಗೆ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ