
ಉತ್ತಮ ಉದ್ಯೋಗದ ಜೊತೆಗೆ ವೃತ್ತಿಜೀವನದಲ್ಲಿ (career) ಧನಾತ್ಮಕ ರೀತಿಯಲ್ಲಿ ಮುನ್ನಡೆಯಬೇಕು, ಪ್ರಮೋಷನ್ಸ್, ಉತ್ತಮ ಸಂಬಳ ಪಡೆಯಬೇಕು, ಯಶಸ್ಸನ್ನು ಸಾಧಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ. ಕೆಲವೊಂದು ಉತ್ತಮ ಅಭ್ಯಾಸಗಳನ್ನು ಸಹ ಬೆಳೆಸಿಕೊಳ್ಳಬೇಕು ಆಗ ಮಾತ್ರ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ. ಹಾಗಿದ್ರೆ ಮುಖ್ಯವಾಗಿ ಯಾವೆಲ್ಲಾ ತತ್ವಗಳನ್ನು ಪಾಲಿಸಿದರೆ ವೃತ್ತಿ ಜೀವನದಲ್ಲಿ ಸಕ್ಸಸ್ ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಯೋಚಿಸದೆ ಕ್ರಮ ಕೈಗೊಳ್ಳುವ ಬದಲು, ಮೊದಲು ನಿಮ್ಮ ಗುರಿಯನ್ನು ಹೊಂದಿಸಿ ಎಂದಿದ್ದಾರೆ ಚಾಣಕ್ಯ. ಗುರಿ ಸರಿಯಾಗಿದ್ದರೆ ಫಲಿತಾಂಶ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನೀವು ಕೆಲಸದಲ್ಲಿ ಬಡ್ತಿಯನ್ನು ಬಯಸುತ್ತಿದ್ದರೆ, ಆ ಕೆಲಸಕ್ಕೆ ಬೇಕಾಗಿರುವ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು, ಚೆನ್ನಾಗಿ ಕೆಲಸ ಮಾಡಿ, ನೀವು ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ಸಿದ್ಧತೆಯು ಉತ್ತಮ ರೀತಿಯಲ್ಲಿರಲಿ ಎಂದಿದ್ದಾರೆ ಚಾಣಕ್ಯ.
ಜೀವನದಲ್ಲಿ ಯಶಸ್ವಿಯಾಗಲು, ವ್ಯಕ್ತಿಯ ನಡವಳಿಕೆ ಉತ್ತಮವಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ತನ್ನ ಮಾತಿನಲ್ಲಿ ಉತ್ತಮವಾಗಿರುವ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.
ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕರಾಗಿರಿ. ಯಾವುದೇ ಕೆಲಸವಾದರೂ ಅದನ್ನು ಸಂಪೂರ್ಣ ಸಮರ್ಪಣಾಭಾವದಿಂದ ಮಾಡಿ. ಹೀಗೆ ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ, ಜನರು ನಿಮ್ಮನ್ನು ಮೆಚ್ಚುತ್ತಾರೆ. ನಿಮ್ಮ ಕೆಲಸದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಶ್ರಮವು ಫಲ ನೀಡುತ್ತದೆ.
ಚಾಣಕ್ಯ ನೀತಿ ಹೇಳುವಂತೆ ನಿಮ್ಮ ಮುಂದಿನ ನಡೆ ಅಥವಾ ಪ್ರಮುಖ ಯೋಜನೆಯ ಬಗ್ಗೆ ಕೆಲಸ ಪೂರ್ಣಗೊಳ್ಳುವವರೆಗೆ ಯಾರಿಗೂ ಹೇಳಬೇಡಿ. ನಿಮ್ಮ ರಹಸ್ಯಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಸಹೋದ್ಯೋಗಿಗಳು ಅಥವಾ ವಿರೋಧಿಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗದಂತೆ ತಡೆಯುತ್ತದೆ.
ಸಮಯ ಎನ್ನೋದು ಅಮೂಲ್ಯ ಸಂಪತ್ತು. ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ. ನೀವು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಬಯಸಿದರೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ, ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಮತ್ತು ಹೊಸ ವಿಷಯಗಳನ್ನು ಕಲಿಯಲು ಸಮಯ ಮೀಸಲಿಡಿ.
ಇದನ್ನೂ ಓದಿ: ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಹಣದ ಸಮಸ್ಯೆಯೇ ಎದುರಾಗೋದಿಲ್ಲ
ನಮ್ಮ ಸಹವಾಸ ಕೂಡ ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯ ಜನರ ಸಹವಾಸದಲ್ಲಿರಬೇಕು ಎಂದಿದ್ದಾರೆ ಚಾಣಕ್ಯ. ಹಾಗಾಗಿ ನೀವು ಯಾವಾಗಲೂ ಕಷ್ಟಪಟ್ಟು ದುಡಿಯುವ, ಹೊಸ ವಿಷಯಗಳನ್ನು ಕಲಿಯುವ ಮತ್ತು ತಮ್ಮ ಗುರಿಗಳ ಬಗ್ಗೆ ಗಂಭೀರವಾಗಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸಿ, ಇವರ ಈ ಗುಣ ನಿಮಗೂ ಕೂಡ ಸ್ಫೂರ್ತಿ ನೀಡುತ್ತದೆ.
ಕೆಲವೊಮ್ಮೆ, ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿ ಸಾಧಿಸಲು ನೀವು ಅಪಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚಾಣಕ್ಯರ ಪ್ರಕಾರ, ವೈಫಲ್ಯದ ಭಯದಿಂದ ಕೆಲಸವನ್ನು ಮುಂದುವರೆಸದ ವ್ಯಕ್ತಿ ವೃತ್ತಿ ಜೀವನದಲ್ಲಿ ಎಂದಿಗೂ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಧೈರ್ಯದಿಂದ ಮುಂದುವರಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ