Chanakya Niti: ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಹಣದ ಸಮಸ್ಯೆಯೇ ಎದುರಾಗೋದಿಲ್ಲ
ಆರ್ಥಿಕವಾಗಿ ಸಧೃಡವಾಗಿರಬೇಕೆಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ. ಅದಕ್ಕಾಗಿ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ. ಆರ್ಥಿಕವಾಗಿ ಬಲಶಾಲಿಯಾಗಿರಲು ಕಷ್ಟಪಟ್ಟು ದುಡಿದರೆ ಸಾಲದು, ಪ್ರತಿನಿತ್ಯ ಈ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಚಾಣಕ್ಯರ ಈ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿದರೆ ಯಶಸ್ಸು ಲಭಿಸುತ್ತದೆ ಜೊತೆಗೆ ಜೀವನದಲ್ಲಿ ಹಣದ ಸಮಸ್ಯೆಯೇ ಇರೋದಿಲ್ಲ.

ಶ್ರೀಮಂತರಾಗಿ ಬಾಳ್ವೆ ನಡೆಸಬೇಕು, ಆರ್ಥಕವಾಗಿ ಬಲಶಾಲಿಯಾಗಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆರ್ಥಿಕವಾಗಿ ಸ್ಥಿತಿವಂತರಾಗಲು ಕಷ್ಟಪಟ್ಟು ದುಡಿದರೆ ಸಾಲದು, ಹಣ (money) ಗಳಿಸಲು, ನಾವು ನಮ್ಮ ದೈನಂದಿನ ಜೀವನದಲ್ಲಿ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಸಮಯದ ಸದ್ಬಳಕೆ, ಉಳಿತಾಯ ಮತ್ತು ಹೂಡಿಕೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇವೆಲ್ಲವೂ ಸಂಪತ್ತು ಮತ್ತು ಜೀವನದಲ್ಲಿ ಯಶಸ್ಸನ್ನು ತರುತ್ತದೆ ಎನ್ನುತ್ತಾರೆ ಚಾಣಕ್ಯ. ಒಟ್ಟಾರೆಯಾಗಿ ದೈನಂದಿನ ಜೀವನದಲ್ಲಿ ಯಾವೆಲ್ಲಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ಪ್ರತಿದಿನ ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ:
ಚಾಣಕ್ಯರ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ಅತ್ಯಂತ ದೊಡ್ಡ ಸಂಪತ್ತು ಸಮಯ. ಆ ಅಮೂಲ್ಯ ಸಮಯವನ್ನು ಸರಿಯಾಗಿ ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು, ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವುದು ಆರ್ಥಿಕವಾಗಿ ಸದೃಢವಾಗಿರಲು ತುಂಬಾನೇ ಮುಖ್ಯ. ಆದ್ದರಿಂದ, ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ದಿನವನ್ನು ಯೋಜಿಸಿ. ಪ್ರಮುಖ ಕಾರ್ಯಗಳಿಗೆ ಆದ್ಯತೆ ನೀಡಿ ಮತ್ತು ಅನಗತ್ಯ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಸಮಯ ನಿರ್ವಹಣೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ, ನೀವು ನಿಮ್ಮ ಆದಾಯವನ್ನು ಹೆಚ್ಚಿಸಬಹುದು.
ಉಳಿತಾಯ ಮತ್ತು ಹೂಡಿಕೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ:
ಆರ್ಥಿಕವಾಗಿ ಸದೃಢರಾಗಲು ಉಳಿತಾಯ ಮತ್ತು ಹೂಡಿಕೆ ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಪ್ರತಿ ತಿಂಗಳು ನಿಮ್ಮ ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಉಳಿತಾಯಕ್ಕಾಗಿ ಮೀಸಲಿಡಿ ಮತ್ತು ಉಳಿತಾಯದ ಜೊತೆಗೆ ಸ್ವಲ್ಪ ಭಾಗವನ್ನು ಸುರಕ್ಷಿತ ಮತ್ತು ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ. ಸರಿಯಾದ ಹೂಡಿಕೆಗಳೊಂದಿಗೆ, ನಿಮ್ಮ ಹಣವು ಕಾಲಾನಂತರದಲ್ಲಿ ದ್ವಿಗುಣಗೊಳ್ಳುತ್ತದೆ. ಈ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಬಹುದು.
ಜ್ಞಾನ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿ:
ಹಣ ಸಂಪಾದಿಸಲು ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ. ಹೊಸ ಕೌಶಲ್ಯಗಳನ್ನು ಕಲಿಯುವುದು, ಉತ್ತಮ ಶಿಕ್ಷಣ ಪಡೆಯುವುದು ಕೂಡ ಮುಖ್ಯ. ಹೊಸ ಕೌಶಲ್ಯಗಳನ್ನು ಕಲಿತಾಗ ಆ ಮೂಲಕ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ಜೊತೆಗೆ ಹೂಡಿಕೆ ಮಾಡುವಲ್ಲಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಹೂಡಿಕೆಯಲ್ಲಿ ಸರಿಯಾದ ಜ್ಞಾನವಿದ್ದರೆ, ನೀವು ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳುತ್ತದೆ. ಹಾಗಾಗಿ ನಿತ್ಯ ಪುಸ್ತಕಗಳನ್ನು ಓದಿ, ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು ನಿಮ್ಮ ವೃತ್ತಿಗೆ ಸಂಬಂಧಿಸಿದ ನಿಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿ.
ಇದನ್ನೂ ಓದಿ: ಎಷ್ಟೇ ಸಂಪಾದಿಸಿದ್ರೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ತಿಲ್ವಾ? ಹಾಗಿದ್ರೆ ಕಾಸು ಉಳಿಸಲು ತಕ್ಷಣವೇ ಈ ಕೆಲಸಗಳನ್ನು ಮಾಡಿ
ಸರಿಯಾದ ಸಂಪರ್ಕ ಮತ್ತು ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳಿ:
ಸರಿಯಾದ ಸ್ನೇಹಿತರ ಸಲಹೆ ಮತ್ತು ಬಲವಾದ ಸಂಪರ್ಕಗಳು ವ್ಯವಹಾರ ಮತ್ತು ಆರ್ಥಿಕ ನಿರ್ಧಾರಗಳಿಗೆ ನಿರ್ಣಾಯಕವಾಗಿವೆ. ಚಾಣಕ್ಯರ ಪ್ರಕಾರ, ಬಲವಾದ ಸಂಪರ್ಕಗಳು ಮತ್ತು ಸಹವರ್ತಿಗಳು ವ್ಯವಹಾರ ಮತ್ತು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಬಹುದು. ಆದ್ದರಿಂದ, ನಿಮ್ಮ ಸಂಪರ್ಕವನ್ನು ಅನ್ನು ಬಲವಾಗಿರಿಸಿಕೊಳ್ಳಿ, ಅನುಭವಿ ಜನರಿಂದ ಸಲಹೆ ಪಡೆಯಿರಿ ಮತ್ತು ಉತ್ತಮ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ.
ವಿವೇಚನೆ ಮತ್ತು ತಾಳ್ಮೆಯನ್ನು ಕಲಿಯಿರಿ:
ಚಾಣಕ್ಯರ ಪ್ರಕಾರ, ವಿವೇಚನೆ ಮತ್ತು ತಾಳ್ಮೆ ಶಾಶ್ವತ ಆರ್ಥಿಕ ಯಶಸ್ಸಿಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಹೂಡಿಕೆಗಳು ಮತ್ತು ಖರ್ಚುಗಳ ಬಗ್ಗೆ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಿ, ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಪ್ರತಿಯೊಂದು ಸನ್ನಿವೇಶದಲ್ಲೂ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಇದು ನಿಮ್ಮ ಸಂಪತ್ತನ್ನು ಹೆಚ್ಚಿಸುವುದಲ್ಲದೆ ನಿಮ್ಮ ಮಾನಸಿಕ ಸಮತೋಲನವನ್ನು ಬಲಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




