ಯಾವುದೇ ಕಾರಣಕ್ಕೂ ಇಂತಹವರಿಗೆ ಹಣವನ್ನು ಸಾಲ ಕೊಡಬೇಡಿ; ಯಾಕೆ ಗೊತ್ತಾ?
ಕಷ್ಟದ ಸಂದರ್ಭ ಎದುರಾದಾಗ ಹೆಚ್ಚಿನವರು ಸ್ನೇಹಿತರು, ಸಂಬಂಧಿಕರ ಬಳಿ ಸಾಲವನ್ನು ಪಡೆಯುತ್ತಾರೆ. ನೀವು ಸಹ ನಿಮ್ಮ ಪರಿಚಯದವರಿಗೆ ಸಾಲವನ್ನು ನೀಡಿರುತ್ತೀರಿ ಅಲ್ವಾ. ಹತ್ತಿರದವರು ಹಣ ಕೇಳಿದಾಗ ಕೊಡಲೇಬೇಕಾದಂತಹ ಪರಿಸ್ಥಿತಿ ಇರುತ್ತದೆ. ಹಾಗಾಗಿ ಹೆಚ್ಚಿನವರು ತಮ್ಮವರಿಗೆ ಸಾಲ ಕೊಡುತ್ತಾರೆ. ಆದ್ರೆ ಹೀಗೆ ಸಾಲ ಕೇಳಿದ್ರೆ, ಇಂತಹ ಒಂದಷ್ಟು ಜನಗಳಿಗೆ ಯಾವುದೇ ಕಾರಣಕ್ಕೂ ಸಾಲ ನೀಡಬಾರದಂತೆ.

ಕಷ್ಟ, ಆರ್ಥಿಕ ಸಂಕಷ್ಟ ಯಾರಿಗೆ ತಾನೆ ಬರೋದಿಲ್ಲ ಹೇಳಿ. ಹೀಗೆ ಆರ್ಥಿಕ ಸಂಕಷ್ಟ ಎದುರಾದಾಗ ಹೆಚ್ಚಿನವರು ತಮ್ಮ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಬಳಿ ಒಂದಷ್ಟು ಹಣವನ್ನು ಸಾಲದ ರೂಪದಲ್ಲಿ (money lend) ಪಡೆಯುತ್ತಾರೆ. ಹೀಗೆ ಯಾರಾದ್ರೂ ಸಾಲ ಕೇಳಿದಾಗ, ಹಣ ಕೊಡದೆ ಹೋದರೆ ಇರಿಸುಮುರಿಸು ಆಗುವುದು ಕೂಡ ಸಹಜ. ಇದೇ ಕಾರಣದಿಂದ ಹೆಚ್ಚಿನವರು ಯಾರಾದ್ರೂ ಕೇಳಿದ್ರೆ ತಕ್ಷಣವೇ ಸಾಲ ಕೊಟ್ಟು ಬಿಡುತ್ತಾರೆ. ಹೀಗೆ ಸಾಲ ಕೊಟ್ಟು ಅದನ್ನು ಹಿಂಪಡೆಯಲು ಪರದಾಡಿದವರೂ ಇದ್ದಾರೆ. ನೀವು ಸಹ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿರುತ್ತೀರಿ ಅಲ್ವಾ. ಹಾಗಿರುವಾಗ ಇನ್ನು ಮುಂದೆ ಯಾರಾದ್ರೂ ಸಾಲ ಕೇಳಿದ್ರೆ, ಇಂತಹ ಒಂದಷ್ಟು ಜನರಿಗೆ ಯಾವತ್ತಿಗೂ, ಯಾವುದೇ ಕಾರಣಕ್ಕೂ ಸಾಲ ಕೊಡ್ಬೇಡಿ.
ಯಾರಿಗೆ ಸಾಲ ಕೊಡಬಾರದು?
ಮರೆತು ಬಿಡುವವರು: ಕೆಲವರು ಸಾಲ ತೆಗೆದುಕೊಂಡರೆ, ಆ ಹಣವನ್ನು ಕೊಡಲು ಮರೆತು ಬಿಡುತ್ತಾರೆ. ಮತ್ತು ಅದನ್ನು ಹಿಂತಿರುಗಿಸುವುದೇ ಇಲ್ಲ. ಇಂತಹ ಜನಗಳು ಪದೇ ಪದೇ ನಿಮ್ಮ ಬಳಿ ಸಾಲವನ್ನು ಕೇಳಿದರೆ, ಅವರಿಗೆ ತಪ್ಪಿಯೂ ಹಣ ಕೊಡಬೇಡಿ. ಏಕೆಂದರೆ ಇವರು ಸಾಲ ಕೊಟ್ಟಿದ್ದಾರೆ, ಅದನ್ನು ಹಿಂತಿರಿಸಬೇಕು ಎಂಬುದನ್ನೇ ಮರೆತು ಬಿಡುತ್ತಾರೆ. ನೀವೇನಾದರೂ ಇಂತಹವರಿಗೆ ಪಾಪ ಪುಣ್ಯ ನೋಡಿ ಹಣ ಕೊಟ್ರೆ ನಿಮಗೆಯೇ ನಷ್ಟ.
ಮೋಜಿಗಾಗಿ ಸಾಲ: ಕಷ್ಟದ ಸಂದರ್ಭದಲ್ಲಿ ಸಾಲ ಕೇಳುವವರು ಒಂದು ಕಡೆಯಾದ್ರೆ, ಇನ್ನೂ ಕೆಲವರು ಮೋಜು ಮಸ್ತಿ ಮಾಡಲೆಂದೇ ಸಾಲವನ್ನು ತೆಗೆದುಕೊಳ್ಳುತ್ತಾರೆ. ಶಾಪಿಂಗ್ ಮಾಡ್ಬೇಕು, ಮಜಾ ಮಾಡ್ಬೇಕು ಎಂದು ಸ್ನೇಹಿತರ ಕೈಯಿಂದ ಒಂದಷ್ಟು ಹಣವನ್ನು ಸಾಲ ಪಡೆಯುವವರೂ ಇದ್ದಾರೆ. ಹೀಗೆ ಮೋಜು ಮಾಡಿ ಹಣ ವ್ಯರ್ಥ ಮಾಡುವವರಿಗೆ ನೀವು ಯಾವುದೇ ಕಾರಣಕ್ಕೂ ಸಾಲ ಕೊಡಲು ಹೋಗಬೇಡಿ.
ಪದೇ ಪದೇ ಸಾಲ ಕೇಳುವವರು: ಕೆಲವರು ಕೊಟ್ಟ ಹಣವನ್ನು ಹಿಂತಿರುಗಿಸದೆ ಪದೇ ಪದೇ ಸಾಲವನ್ನು ಕೇಳುತ್ತಾರೆ. ಈಗ ಹಣ ಕೊಡು, ನಾನು ಎಲ್ಲವನ್ನು ಒಟ್ಟಿಗೆ ತೀರಿಸುತ್ತೇನೆ ಎಂದು ಹೇಳುವವರಿದ್ದಾರೆ. ಹೀಗೆ ಮುಂಚೆ ತೆಗೆದುಕೊಂಡ ಹಣವನ್ನು ನಿಮಗೆ ಹಿಂತಿರುಗಿಸದೇ ಪುನಃ ಹಣ ಬೇಕೆಂದು ಕೇಳಿದರೆ ಅಂತಹವರಿಗೆ ಸಾಲ ಕೊಡ್ಬೇಡಿ.
ಅಸಡ್ಡೆ ತೋರುವವರು: ಕೆಲವರು ಸಾಲ ತೆಗೆದುಕೊಳ್ಳುವಾಗ ಬಹಳ ಚೆನ್ನಾಗಿ ಮಾತನಾಡುತ್ತಾರೆ, ಆತ್ಮೀಯವಾಗಿ ವರ್ತಿಸುತ್ತಾರೆ. ಅದೇ ಕೊಟ್ಟ ಸಾಲವನ್ನು ಮರು ಪಾವತಿ ಮಾಡಿ ಎಂದಾಗ ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಕಾಲ್ ಮಾಡಿದ್ರೆ, ಕಾಲ್ ಕೂಡ ರಿಸಿವ್ ಮಾಡೋದಿಲ್ಲ. ಇಂತಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಸಾಲ ಕೊಡ್ಬೇಡಿ ಏಕೆಂದರೆ ಅವರು ನಿಮ್ಮ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಕೂಡ ಇರುವುದಿಲ್ಲ.
ಇದನ್ನೂ ಓದಿ: ಈ ಮಾರ್ಗಗಳನ್ನು ಅನುಸರಿಸಿದರೆ ಕೆಲಸದೊಂದಿಗೆ ನೀವು ಹೆಚ್ಚುವರಿ ಆದಾಯ ಗಳಿಸಬಹುದು
ತಮ್ಮ ಅಗತ್ಯಗಳಿಗಾಗಿ ಮಾತ್ರ ನಿಮ್ಮ ಬಳಿ ಬರುವವರು: ಕೆಲವರು ಹೇಗಪ್ಪಾ ಅಂದ್ರೆ ಅವರಿಗೆ ಸಮಸ್ಯೆ ಆದಾಗ ಮಾತ್ರ ನಮಗೆ ಸ್ನೇಹಿತರು, ಸಂಬಂಧಿಕರು ಇದ್ದಾರೆ ಎಂಬುವುದು ನೆನಪಾಗೋದು, ಮಿಕ್ಕ ಸಮಯದಲ್ಲಿ ಪರಿಚಯವೇ ಇಲ್ಲದಂತೆ ದರ್ಪದಿಂದ ವರ್ತಿಸುತ್ತಾರೆ. ನಿಮಗೂ ಈ ರೀತಿಯಾಗಿ ವರ್ತಿಸುವ ಸ್ನೇಹಿತರಿದ್ದಾರಾ? ಅವರು ಏನಾದ್ರೂ ಸಾಲ ಕೇಳಿದ್ರೆ ಕೊಡಬೇಡಿ. ಏಕೆಂದರೆ ಅವರ ಅಗತ್ಯಕ್ಕೆ ಮಾತ್ರ ಅವರು ನಿಮ್ಮ ಬಳಿ ಬರುತ್ತಾರೆ. ಆದ್ರೆ ನೀವು ಅವರ ಬಳಿ ಸಹಾಯ ಮಾಡಿ ಎಂದು ಕೇಳಿಕೊಂಡು ಹೋದರೆ ಅವರು ನಿಮ್ಮನ್ನು ತಿರುಗಿಯೂ ನೋಡೋದಿಲ್ಲ. ಹಾಗಾಗಿ ತಮ್ಮ ಬೇಳೆ ಬೀಯಿಸಿಕೊಳ್ಳುವವರಿಗೆ ನೀವು ಸಾಲ ಕೊಡ್ಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








