ಬಾಂಬ್ ಬೆದರಿಕೆ ಕರೆಗಳು ಬಂದರೆ ಭಯ ಪಡಬೇಡಿ, ಈ ಕೆಲಸವನ್ನು ಮೊದಲು ಮಾಡಿ
ಮನುಷ್ಯನು ಅಭಿವೃದ್ಧಿ ಹೊಂದುತ್ತಿದ್ದಂತೆ ತಂತ್ರಜ್ಞಾನಗಳನ್ನು ದುರಪಯೋಗ ಪಡಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಸ್ಮಾರ್ಟ್ ಫೋನ್ ಅನ್ನು ಮನೋರಂಜನೆಯ ಜೊತೆಗೆ ಬೇಡದ ಚಟುವಟಿಕೆಗಳಿಗೆ ಬಳಸುತ್ತಿದ್ದಾನೆ. ಇತ್ತೀಚೆಗಿನ ದಿನಗಳಲ್ಲಿ ಜನಸಾಮಾನ್ಯರಿಗೆ ಬ್ಲಾಕ್ ಮೇಲ್ ಸೇರಿದಂತೆ ಬಾಂಬ್ ಬೆದರಿಕೆ ಕರೆಗಳು ಬರುವುದು ಹೆಚ್ಚಾಗುತ್ತಿದೆ. ಇಂತಹ ಕರೆಗಳು ಬಂದಾಗ ಭಯ ಪಡದೇ ಆ ಸಮಯದಲ್ಲಿ ಏನು ಮಾಡಬೇಕೆನ್ನುವುದು ತಿಳಿದಿದ್ದರೆ ನಿಮ್ಮವರನ್ನು ಅಪಾಯದಿಂದ ಪಾರು ಮಾಡಿದ್ದಂತಾಗುತ್ತದೆ.
ಮಾನವನ ಅಭಿವೃದ್ಧಿಯಿಂದಾಗಿ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಅಭಿವೃದ್ಧಿಯ ನೆರಳಿನಲ್ಲಿ ಮನುಷ್ಯನು ಸ್ವಾರ್ಥನಾಗುತ್ತಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಬೆದರಿಸುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾನೆ. ಹೀಗಾಗಿ ನಕಲಿ ಸಿಮ್ ಕಾರ್ಡ್ ಬಳಸಿ ಬೆದರಿಕೆ ಕರೆಗಳ ಮೂಲಕ ಹಣ ವಸೂಲಿ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇನ್ನಿತರ ಪ್ರಮುಖ ನಗರದ ಪ್ರದೇಶಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಹೀಗಾಗಿ ನಗರದ ಜನರು ಇಂತಹ ಕರೆಗಳಿಂದ ಭಯ ಪಟ್ಟುಕೊಂಡಿದ್ದಾರೆ. ಒಂದು ವೇಳೆ ಇಂತಹ ಬೆದರಿಕೆಯ ಕರೆಗಳು ಬಂದಾಗ ಸ್ವಲ್ಪ ಬುದ್ಧಿವಂತಿಕೆಯಿಂದ ಎಲ್ಲವನ್ನು ನಿಭಾಯಿಸುವ ಕಲೆಯು ಗೊತ್ತಿರಬೇಕು.
ಬಾಂಬ್ ಬೆದರಿಕೆ ಕರೆ ಬಂದ ಕೂಡಲೇ ಈ ಕೆಲಸಗಳನ್ನು ಮೊದಲು ಮಾಡಿ:
- ನಿಮ್ಮ ಎಲ್ಲಾ ಫೋನ್‌ಗಳು ಕಾಲರ್ ಐಡಿ ಮತ್ತು ಕರೆಗಳ ಸ್ವಯಂಚಾಲಿತ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿರುವುದು ಮುಖ್ಯ.
- ಬಾಂಬ್ ಬೆದರಿಕೆ ಕರೆ ಮಾಡುವವರಿಗೆ ಶಾಂತ ಪ್ರತಿಕ್ರಿಯೆ ನೀಡುವುದರಿಂದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ.
- ಮೊದಲಿಗೆ ಕರೆ ಮಾಡಿದ ವ್ಯಕ್ತಿಯು ಮಾತನಾಡುವ ಪ್ರತಿಯೊಂದು ಪದವನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ.
- ಕರೆ ಮಾಡಿದವರು ಬಾಂಬ್ ಇರುವ ಸ್ಥಳ, ಸ್ಫೋಟದ ಸಮಯವನ್ನು ಸೂಚಿಸದಿದ್ದರೆ, ಈ ಮಾಹಿತಿಯನ್ನು ಕೇಳಿ ಪಡೆಯುವುದನ್ನು ಮರೆಯಬೇಡಿ.
- ಬಾಂಬ್ ಸ್ಫೋಟಿಸುವುದರಿಂದ ಸಾವು ಅಥವಾ ಅನೇಕ ಮುಗ್ಧ ಜನರಿಗೆ ಗಂಭೀರವಾದ ಗಾಯವಾಗಬಹುದು ಎಂದು ಕರೆ ಮಾಡಿದವರಿಗೆ ತಿಳಿಸಿ.
- ಮೋಟಾರ್ ಚಾಲನೆಯಲ್ಲಿರುವಿಕೆ, ಮ್ಯೂಸಿಕ್ ಪ್ಲೇಯಿಂಗ್ ಮತ್ತು ಕರೆ ಮಾಡುವವರ ಸ್ಥಳದ ಬಗ್ಗೆ ಸುಳಿವು ನೀಡುವ ಯಾವುದೇ ಶಬ್ದಗಳು ಕೇಳಿಸಿದರೆ ಸರಿಯಾಗಿ ಆಲಿಸಿ.
- ಕರೆ ಮಾಡಿದ ವ್ಯಕ್ತಿಯ ಧ್ವನಿಯು ಪುರುಷ ಅಥವಾ ಮಹಿಳೆಯದ್ದೆ ಎಂದು ಗಮನಿಸಿ. ಧ್ವನಿ ಗುಣಮಟ್ಟ, ಮಾತಿನ ಅಡೆತಡೆಗಳನ್ನು ಸೂಕ್ಷ್ಮವಾಗಿ ಆಲಿಸಿ.
- ಲಿಖಿತ ಬೆದರಿಕೆ ಬಂದಾಗ ಕೈಬರಹ ಅಥವಾ ಬೆರಳಚ್ಚು, ಕಾಗದ ಮತ್ತು ಅಂಚೆ ಗುರುತುಗಳಂತಹ ಪುರಾವೆಗಳನ್ನು ಉಳಿಸಿಕೊಳ್ಳುವುದನ್ನು ಮರೆಯಬೇಡಿ. ಈ ಎಲ್ಲಾ ದಾಖಲೆಗಳು ಪೊಲೀಸರಿಗೆ ತನಿಖೆಗೆ ಸಹಾಯಕವಾಗಲಿದೆ.
- ಕರೆ ಸ್ಥಗಿತಗೊಂಡ ತಕ್ಷಣವೇ ಪೊಲೀಸರಿಗೆ ವರದಿ ಮಾಡಿ ಮಾಹಿತಿಯನ್ನು ನೀಡಿ. ಇದರಿಂದ ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರು ಆಗುವ ಅಪಾಯವನ್ನು ತಡೆಯಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ