Chapati Noodles Recipe : ಚಪಾತಿಯಿಂದ ಸುಲಭವಾಗಿ ಮಾಡಿ ಚಪಾತಿ ನೂಡಲ್ಸ್, ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿಗೆ ಚಪಾತಿ ಮಾಡಿದ್ದರೆ, ಸಂಜೆಯ ವೇಳೆ ಈ ಉಳಿದ ಚಪಾತಿಯನ್ನು ಬಿಸಾಕಲು ಮನಸ್ಸು ಆಗುವುದಿಲ್ಲ. ಹೀಗಿದ್ದಾಗ ಸಂಜೆಯ ಕಾಫಿ ಟೀ ಜೊತೆಗೆ ಚಪಾತಿಯಿಂದ ರುಚಿ ರುಚಿಕರವಾದ ಚಪಾತಿ ನೂಡಲ್ಸ್ ರೆಸಿಪಿಯನ್ನು ಟ್ರೈ ಮಾಡಬಹುದು. ಈ ರೆಸಿಪಿಯೂ ನೋಡುವುದಕ್ಕೆ ಮಾತ್ರವಲ್ಲದೇ ತಿನ್ನುವುದಕ್ಕೆ ನೂಡಲ್ಸ್ ನಂತೆಯೇ ಇದ್ದು ಮಕ್ಕಳಿಗೆ ಇಷ್ಟವಾಗುವುದಂತೂ ಖಂಡಿತ. ಹಾಗಾದ್ರೆ ಈ ರೆಸಿಪಿಯ ವಿಧಾನದ ಬಗೆಗಿನ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಪ್ರತಿಯೊಬ್ಬರ ಇಷ್ಟದ ಆಹಾರಗಳಲ್ಲಿ ಚಪಾತಿ ಕೂಡ ಒಂದು. ಆದರೆ ಅಪರೂಪಕ್ಕೊಮ್ಮೆಯಾದರೆ ಈ ತಿಂಡಿ ಮಾಡಿ ತಿಂದರೆ ಏನು ಅನಿಸುವುದಿಲ್ಲ. ಕೆಲವರ ಮನೆಯಲ್ಲಿ ವಾರದಲ್ಲಿ ಮೂರು ಬಾರಿ ಬೆಳಗ್ಗಿನ ತಿಂಡಿಗೆ ಇದೇ ಆಗಿರುತ್ತದೆ. ಅದಲ್ಲದೇ, ದೇಹದ ತೂಕ ಇಳಿಸಿಕೊಳ್ಳುವವರು, ಶುಗರ್ ಇರುವವರು ರಾತ್ರಿ ಊಟಕ್ಕೆ ಅನ್ನದ ಬದಲಿಗೆ ಚಪಾತಿಯನ್ನು ಸೇವಿಸುತ್ತಾರೆ. ಒಂದು ವೇಳೆ ಮಾಡಿದ ಚಪಾತಿಯು ಉಳಿದರೆ ಮನೆಯಲ್ಲೇ ಸುಲಭವಾಗಿ ಮಕ್ಕಳಿಗೆ ಇಷ್ಟವಾಗುವ ತರಹ ಚಪಾತಿ ನೂಡಲ್ಸ್ ರೆಸಿಪಿಯನ್ನು ಮಾಡಿ ಸವಿಯಬಹುದು.
ಚಪಾತಿ ನೂಡಲ್ಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ಉಳಿದ ಚಪಾತಿ
* ಈರುಳ್ಳಿ
* ಹಸಿಮೆಣಸಿನಕಾಯಿ
* ಕಾಲು ಕಪ್ ಬೇಯಿಸಿದ ಬಟಾಣಿ
* ತುರಿದ ಕ್ಯಾರೆಟ್
* ಬೆಳ್ಳುಳ್ಳಿ 4 ಎಸಳು
* ಕಾಳುಮೆಣಸಿನ ಪುಡಿ
* ಕೊತ್ತಂಬರಿ ಸೊಪ್ಪು
* ಅಡುಗೆ ಎಣ್ಣೆ
* ಸೋಯಾ ಸಾಸ್
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಕ್ಯಾನ್ಸರ್ ತಡೆಗಟ್ಟುವ ಅಗಸೆ ಬೀಜ; ಪ್ರತಿದಿನ ಸೇವಿಸಿದರೆ ಅನೇಕ ಪ್ರಯೋಜನಗಳಿವೆ!
ವಿಡಿಯೋ ಇಲ್ಲಿದೆ ನೋಡಿ:
View this post on Instagram
ತಯಾರಿಸುವ ವಿಧಾನ:
* ಮೊದಲಿಗೆ ಉಳಿದ ಚಪಾತಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಆ ಬಳಿಕ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯುತ್ತಿದ್ದಂತೆ ಕತ್ತರಿಸಿಟ್ಟ ಈರುಳ್ಳಿ, ಬೆಳ್ಳುಳ್ಳಿ, ಬೇಯಿಸಿದ ಬಟಾಣಿ, ತುರಿದ ಕ್ಯಾರೆಟ್ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
* ಬೆಂದ ಬಳಿಕ ಈ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪು ಹಾಗೂ ಸೋಯಾ ಸಾಸ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ಆ ಬಳಿಕ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಸ್ಟವ್ ಆಫ್ ಮಾಡಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿ ರುಚಿಯಾದ ಚಪಾತಿ ನೂಡಲ್ಸ್ ಸವಿಯಲು ಸಿದ್ಧ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ